ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಕಳೆದ ಆರು ತಿಂಗಳಿನಿಂದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ದಕ್ಷ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ದಿಢೀರನೇ ಬೆಳಗಾವಿ ಜಿಲ್ಲೆಗೆ ವರ್ಗಾಯಿ ಸಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣ ಸಹಿತ ಬಹಳಷ್ಟು ಕಡೆ “ವೀ ವಾಂಟ್ ಸುಧೀರ್ ರೆಡ್ಡಿ’ ಅಭಿಯಾನ ನಡೆಯುತ್ತಿದೆ. ಆದರೆ ಈ ನಡುವೆ ಸುಧೀರ್ ರೆಡ್ಡಿ ಅವರು ಕರ್ತವ್ಯ ನಿಷ್ಠೆ ಹಾಗೂ ಇಲಾಖಾ ಶಿಸ್ತಿಗೆ ತಲೆಬಾಗಿ ಸದ್ದಿಲ್ಲದೆ ಜಿಲ್ಲೆಯಿಂದ ನಿರ್ಗಮಿಸಿ ಬೆಳಗಾವಿ ಎಸ್‌ಪಿಯಾಗಿ ಮಂಗಳವಾರ ಮಧ್ಯಾಹ್ನ ಅಧಿಕಾರ ವಹಿಸಿಕೊಂಡಿದ್ದಾರೆ.
ವರ್ಗಾವಣೆ ಆದೇಶದ ಪ್ರತಿ ಸೋಮವಾರ ರಾತ್ರಿ ಕೈಸೇರಿದ ತತ್‌ಕ್ಷಣಕ್ಕೆ ನಿಯಮಾನುಸಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿ ಜಿಲ್ಲೆಯಿಂದ ನಿರ್ಗಮಿಸಿದ್ದಾರೆ. ಈ ಹಿಂದೆ ಎಸ್‌ಪಿಯಾಗಿ ವರ್ಗಾವಣೆಯಾಗಿ ಬಂದಾಗಲೂ ಕೇವಲ ಮೂರು ನಿಮಿಷದಲ್ಲಿ ಅಧಿ ಕಾರ ಹಸ್ತಾಂತರ ಮಾಡಿಸಿಕೊಂಡು ಬಂಟ್ವಾಳದ ಕೋಮು ಸಂಘರ್ಷದ ಪರಿಸ್ಥಿತಿ ತಲೆದೋರಿದ್ದ ಜಾಗಕ್ಕೆ ಕರ್ತವ್ಯ ಪಾಲನೆಗೆ ಹೋಗಿದ್ದರು.
ಸುಧೀರ್ ರೆಡ್ಡಿ ಅವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜ. 20ರಂದು ಸರಕಾರ ವರ್ಗಾವಣೆಗೊಳಿಸಿದ್ದು, ಅವರ ಸಾœನಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಯಾಗಿರುವ ರವಿಕಾಂತೇ ಗೌಡ ಅವರನ್ನು ನಿಯುಕ್ತಿ ಗೊಳಿಸ ಲಾಗಿದೆ. ಸುಧೀರ್ ರೆಡ್ಡಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ್ದು, ಅಲ್ಲಿ ಇಲಾಖಾ ಆದೇಶದ ಅನುಸಾರ ಯಾವುದೇ ವಿಳಂಬ ಮಾಡದೆ ಎಸ್‌ಪಿ ರವಿಕಾಂತೇ ಗೌಡರಿಂದ ಅಧಿಕಾರ ಹಸ್ತಾಂತರಿಸಿಕೊಂಡರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ 2017ರ ಜೂ. 22ರಂದು ಅಧಿಕಾರ ಸ್ವೀಕರಿಸಿದ್ದ ಸುಧೀರ್ ಕುಮಾರ್ ರೆಡ್ಡಿ ಜಿಲ್ಲೆಯಲ್ಲಿ ಸೂಕ್ಷ್ಮವಾಗಿದ್ದ ಕಾನೂನು ಸುವ್ಯವಸ್ಥೆಯನ್ನು ತಹ ಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಸಾಮಾ ಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ, ಪ್ರಚೋ ದನ ಕಾರಿ ಸುದ್ದಿ ವಿರುದ್ಧವೂ ಪ್ರಕರಣ ಗಳನ್ನು ದಾಖಲಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಅವರ ಈ ಕ್ರಮಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದವು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸ್ಥಿರ ವಾಗುತ್ತಿರುವ ಸಮಯದಲ್ಲೇ ಅವರನ್ನು ದಿಢೀರ್ ಆಗಿ ಜಿಲ್ಲೆಯಿಂದ ವರ್ಗಾವಣೆ ಮಾಡಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ಹಾಗೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಸುಧೀರ್ ರೆಡ್ಡಿ ವರ್ಗಾವಣೆ ವಿರುದ್ಧ ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹೇಳಿಕೆಗಳನ್ನು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು ಮತ್ತು ಅವರನ್ನು ದಿಢೀರ್ ಆಗಿ ಯಾಕೆ ವರ್ಗಾವಣೆ ಮಾಡಲಾಗಿದೆ ಎಂಬುದಕ್ಕೆ ಕಾರಣ ಕೊಡಿ ಎಂದು ಮುಖ್ಯಮಂತ್ರಿಯವರು ಹಾಗೂ ಗೃಹ ಸಚಿವರನ್ನು ಟ್ವಿಟರ್‌ನಲ್ಲಿ ಆಗ್ರಹಿಸಿದ್ದರು. ಅವರ ವರ್ಗಾವಣೆಯನ್ನು ರದ್ದುಪಡಿಸದಿದ್ದರೆ ಪ್ರತಿಭಟನೆಯನ್ನು ಕೂಡ ಹಮ್ಮಿಕೊಳ್ಳಲು ಸಿದ್ಧªತೆ ನಡೆಸಲಾಗಿತ್ತು.
ಸಾಮಾನ್ಯವಾಗಿ ವರ್ಗಾವಣೆಗಳಾದ ಸಂದರ್ಭ ದಲ್ಲಿ ಇದನ್ನು ರದ್ದುಪಡಿಸಲು ತೆರೆಮರೆಯಲ್ಲಿ ಪ್ರಯತ್ನಗಳನ್ನು ನಡೆಸುವುದು, ಅಧಿಕಾರ ಹಸ್ತಾಂತರಕ್ಕೆ ವಿಳಂಬ ಮಾಡುವ ವಿಚಾರಗಳು ನಡೆ ಯುತ್ತವೆ. ಆದರೆ ಸುಧೀರ್ ಸದ್ದಿಲ್ಲದೆ ಬೆಳಗಾವಿ ಸೇರಿ ಅಧಿಕಾರ ವಹಿಸಿಕೊಂಡಿದ್ದಾರೆ.
ಜ. 27ಕ್ಕೆ ರವಿಕಾಂತೇ ಗೌಡರ ಆಗಮನ ಸಾಧ್ಯತೆ
ದ.ಕ. ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬೆಳಗಾವಿಯಿಂದ ವರ್ಗಾವಣೆಯಾಗಿರುವ ರವಿಕಾಂತೇ ಗೌಡ ಅವರು ಜ. 27ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ. ಬೆಳಗಾವಿಯಲ್ಲಿ ಮಂಗಳ ವಾರ ಅವರು ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಬೆಳಗಾವಿ ಎಸ್‌ಪಿ ಕರ್ತವ್ಯದಿಂದ ಬಿಡುಗಡೆ ಹೊಂದಿದ್ದಾರೆ.
“ದ.ಕ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಒಳ್ಳೆಯ ಅನುಭವಗಳನ್ನು ನೀಡಿದೆ. ಜಿಲ್ಲೆಯ ಜನತೆ ಉತ್ತಮ ಸಹಕಾರ ನೀಡಿದ್ದು, ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ’ ಎಂದು ಸುಧೀರ್ ಕುಮಾರ್ ರೆಡ್ಡಿ “ಉದಯವಾಣಿ’ಗೆ ತಿಳಿಸಿದ್ದಾರೆ.