ನವದೆಹಲಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಮಾತುಕತೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಮತ್ತಷ್ಟು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದ್ದಾರೆ ಎಂದು ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.
ನಾವು ಈಗಾಗಲೇ 16 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದೇವೆ. ಸದ್ಯದಲ್ಲೇ ಮತ್ತಷ್ಟು ಹೆಸರುಗಳನ್ನು ಘೋಷಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಉ.ಪ್ರದೇಶದಲ್ಲಿ ಇಂಡಿಯಾ ಒಕ್ಕೂಟ ಬಿಎಸ್‌ಪಿ ಜತೆ ಕೈಜೋಡಿಸುತ್ತದೆಯೇ ಎಂಬ ಪ್ರಶ್ನೆಗೆ, ಅದರ ಬಗ್ಗೆ ಉನ್ನತ ನಾಯಕತ್ವವೇ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.
ಇನ್ನೊಂದೆಡೆ, ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟ ಶುಕ್ರವಾರ ನಡೆಸಿದ ಸೀಟು ಹಂಚಿಕೆ ಮಾತುಕತೆಯಲ್ಲಿ ವಂಚಿತ್ ಬಹುಜನ ಅಘಾಡಿ ನಾಯಕ ಪ್ರಕಾಶ್ ಅಂಬೇಡ್ಕರ್ ಅವರೂ ಪಾಲ್ಗೊಂಡಿದ್ದರು.
ಇಂಡಿಯಾ ಒಕ್ಕೂಟದ ನಾಯಕರೆಲ್ಲರೂ ಬಿಗ್‌ಬಾಸ್ ಸ್ಪರ್ಧಿಗಳಂತೆ ಒಂದೇ ಸೂರಿನಡಿ ಇರುತ್ತಾರೆ. ಆದರೆ, ಎಲ್ಲರೂ ಪ್ರಧಾನಿ ಹುದ್ದೆ ಎಂಬ ಟ್ರೋಫಿ ಮೇಲೆ ಕಣ್ಣಿಟ್ಟಿರುತ್ತಾರೆ.
– ಹೀನಾ ಗಾವಿತ್, ಬಿಜೆಪಿ ಸಂಸದೆ