Advertisement

ಮೋದಿ ಅಲೆಗೆ SP, ಕೈ ಧೂಳೀಪಟ;ತಲೆಕೆಳಗಾದ ಕಿಶೋರ್ ತಂತ್ರಗಾರಿಕೆ!

11:03 AM Mar 11, 2017 | Team Udayavani |

ಲಕ್ನೋ:ಪಂಚರಾಜ್ಯಗಳ ಮತಎಣಿಕೆ ಬಹುತೇಕ ಮಧ್ಯಾಹ್ನದೊಳಗೆ ಮುಕ್ತಾಯವಾಗಲಿದ್ದು, ಶನಿವಾರ ಬೆಳಗ್ಗೆಯಿಂದ ಆರಂಭವಾದ ಲೆಕ್ಕಚಾರದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಉತ್ತರಪ್ರದೇಶದಲ್ಲಿ ಎಲ್ಲಾ ಸಮೀಕ್ಷೆಗಳ ಲೆಕ್ಕಚಾರ ತಲೆಕೆಳಗಾಗಿದೆ. 403 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸಿದ್ದು, ಹಾಲಿ ಸಿಎಂ ಅಖಿಲೇಶ್ ಹಾಗೂ ರಾಹುಲ್ ಗಾಂಧಿ ನೇತೃತ್ವದ ಮೈತ್ರಿಕೂಟ ಧೂಳೀಪಟವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ, ಸುಧಾರಣಾ ಅಜೆಂಡಾ ಹಾಗೂ ನೋಟು ಅಪನಗದೀಕರಣ ಘೋಷಣೆಗೆ ಜನಾಭಿಪ್ರಾಯ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಧ್ಯಾಹ್ನದೊಳಗೆ ಸ್ಪಷ್ಟವಾಗಿ ಬಹಿರಂಗವಾಗಲಿದೆ.

ಮತಎಣಿಕೆಗೆ ಮುನ್ನ ಪ್ರಕಟವಾದ ಮತಗಟ್ಟೆ ಸಮೀಕ್ಷೆಯಲ್ಲಿ ಉತ್ತರಪ್ರದೇಶದಲ್ಲಿ ಅತಂತ್ರ ವಿಧಾನಸಭೆ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ ಇಂಡಿಯಾ ಟುಡೇ, ಆಕ್ಸಿಸ್ ಸಮೀಕ್ಷೆ ಮಾತ್ರ ಬಿಜೆಪಿ 280 ಸ್ಥಾನ ಪಡೆಯುವ ಸಾಧ್ಯತೆ ಇದ್ದಿರುವುದಾಗಿ ಭವಿಷ್ಯ ನುಡಿದಿತ್ತು. ಆದರೆ ಶನಿವಾರ ಬಹಿರಂಗವಾದ ಮತಎಣಿಕೆಯಲ್ಲಿ ಬಿಜೆಪಿ ಉತ್ತರಪ್ರದೇಶದಲ್ಲಿ 300ರ ಗಡಿ ದಾಟಿ ಜಯಭೇರಿ ಬಾರಿಸುವತ್ತ ಮುನ್ನುಗ್ಗಿದೆ.

ತಲೆಕೆಳಗಾಯ್ತು ಪ್ರಶಾಂತ್ ಕಿಶೋರ್ ಲೆಕ್ಕಚಾರ:
ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಪಕ್ಷವನ್ನು ಗೆಲ್ಲಿಸಿ ಚಾಣಕ್ಯ ತಂತ್ರಗಾರ ಎನಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಲೆಕ್ಕಚಾರ ಉತ್ತರಪ್ರದೇಶದಲ್ಲಿ ಕೈಕೊಟ್ಟಿದೆ!

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರು ಪ್ರಶಾಂತ್ ಕಿಶೋರ್ ಅವರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಹಾಗಾಗಿ ಯುಪಿಯಲ್ಲಿ ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲು ಪ್ರಶಾಂತ್ ಕಿಶೋರ್ ಸಾಕಷ್ಟು ತಂತ್ರಗಾರಿಕೆ ನಡೆಸಿದ್ದರು. ಆದರೆ ಪ್ರಧಾನಿ ಮೋದಿ ಅಲೆಯಲ್ಲಿ ಕಿಶೋರ್ ಲೆಕ್ಕಚಾರ ಕೊಚ್ಚಿಹೋಗಿದೆ!

Advertisement

ಕೇಸರಿ ಪಾಳಯದಲ್ಲಿ ಸಂಭ್ರಮದ ಅಲೆ:
ಉತ್ತರಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪ್ರಚಂಡ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next