Advertisement

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

09:36 PM Sep 28, 2020 | mahesh |

ಚೆನ್ನೈ: ಎಸ್ಪಿಬಿ ಅವರ ಆಸ್ಪತ್ರೆ ಬಿಲ್‌ ಪಾವತಿಯ ಕುರಿತಾಗಿ ಹರಿದಾಡುತ್ತಿದ್ದ ಗಾಳಿ ಸುದ್ದಿಯ ಕುರಿತು ಪುತ್ರ ಚರಣ್‌ ಸೋಶಿಯಲ್‌ ಮೀಡಿಯಾದಲ್ಲಿ ಲೈವ್‌ ಬರುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಎಸ್ಪಿಬಿ ಅವರ ಚಿಕಿತ್ಸೆಗೆ ತಗುಲಿದ ಖರ್ಚನ್ನು ಭರಿಸಲು ತಮಿಳುನಾಡು ಸರಕಾರ ನಿರಾಕರಿಸಿದ್ದು, ಅದನ್ನು ಬಜೆಪಿ ಮುಖಂಡ, ಉಪರಾಷ್ಟ್ರಪತಿ ವ್ಯಂಕಯ್ಯ ನಾಯ್ಡು ಭರಿಸಿದ್ದಾರೆಂಬ ಗಾಳಿಸುದ್ದಿಯೊಂದು ಸಾಮಾಜಿಕ ಜಾಲತಣಗಳಲ್ಲಿ ಹರಿದಾಡಿದೆ. ಈ ಕುರಿತು ವೀಡಿಯೋದಲ್ಲಿ ಪ್ರತಿಕ್ರಿಯಿಸಿರುವ ಪುತ್ರ ಚರಣ್‌ ಗಾಳಿಸುದ್ದಿ ಹಬ್ಬಿಸದಂತೆ ವಿನಂತಿಸಿದ್ದಾರೆ.

Advertisement

ಎಸ್ಪಿಬಿ ಅವರ ಭಿಮಾನಿಗಳು ಈ ರೀತಿಯ ಕೆಲಸಕ್ಕೆ ಕೈ ಹಾಕುವುದಿಲ್ಲ. ಈ ಬಗ್ಗೆ ಎಂಜಿಎಂ ಹೆಲ್ತ್‌ಕೇರ್‌ ಹಾಸ್ಪಿಟಲ್‌ನ ವೈದ್ಯರೊಂದಿಗೆ ಪತ್ರಿಕಾಗೋಷ್ಠಿ ನಡೆಸುವುದಾಗಿ ಅವರು ಹೇಳಿಕೊಂಡಿದ್ದಾರೆ.

“ವೈದ್ಯಕೀಯ ಬಿಲ್‌ ಪಾವತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗಾಳಿಸುದ್ದಿ ಹರಡಲಾಗುತ್ತಿದೆ. ಬಿಲ್‌ನ ಸ್ವಲ್ಪ ಮೊತ್ತವನ್ನು ನಾನು (ಚರಣ್‌) ಪಾವತಿಸಿದ್ದು, ಉಳಿದ ಮೊತ್ತವನ್ನು ಭರಿಸಲು ರಾಜ್ಯ ಸರಕಾರವನ್ನು ಕೇಳಿದಾಗ ಅವರು ನಿರಾಕರಿಸಿದರು. ಅಲ್ಲಿಂದ ನಾನು ವ್ಯಂಕಯ್ಯ ನಾಯ್ಡು ಅವರನ್ನು ವಿನಂತಿಸಿಕೊಂಡಾಗ, ಅವರು ಕೂಡಲೆ ಖರ್ಚನ್ನು ಪಾವತಿಸಿದರು. ಬಿಲ್‌ ಪಾವತಿಯಾಗದೇ ನಮ್ಮ ತಂದೆಯವರ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲು ಆಸ್ಪತ್ರೆಯವರು ನಿರಾಕರಿಸಿದ್ದಾರೆ’ ಎಂಬ ಗಾಳಿಸುದ್ದಿ ಹರಿಡಾಡುತ್ತಿದೆ. ಇದೆಲ್ಲ ಶುದ್ಧ ಸುಳ್ಳು ಎಂದು ಚರಣ್‌ ಅವರು ಲೈವ್‌ನಲ್ಲಿ ತಿಳಿಸಿದ್ದಾರೆ.

“ಇಂತಹ ಸುದ್ದಿಯಿಂದ ಸಂಬಂಧಪಟ್ಟವರಿಗೆ ಎಷ್ಟು ಮನನೋಯಿಸುತ್ತದೆ ಮತ್ತು ಇದು ಎಷ್ಟು ಅಪರಾಧಾತ್ಮಕ ಸುದ್ದಿ ಎಂಬುದು ನಿಮಗೆ ತಿಳಿದಿದೆಯೇ. ಇಂತಹ ವ್ಯಕ್ತಿಗಳು ಇಂದಿಗೂ ಸಮಾಜದಲ್ಲಿರುವುದು ನಿರಾಶಾದಾಯಕ ಸಂಗತಿ. ಇವರು ಎಸ್ಪಿಬಿಯ ಅಭಿಮಾನಿಗಳಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಎಸ್ಪಿಬಿಗೆ ಇಂತಹದ್ದು ಇಷ್ಟವಿರಲಿಲ್ಲ. ಅವರು ಜನರನ್ನು ನೋಯಿಸುವವರಲ್ಲ. ಇಂತಹ ವ್ಯಕ್ತಿಗಳನ್ನೂ ಕ್ಷಮಿಸುತ್ತಿದ್ದ ವ್ಯಕ್ತಿ ಅವರು. ನಾನೂ ಇಂತಹ ಮಹಾನುಭಾವನನ್ನು ಕ್ಷಮಿಸುತ್ತಿದ್ದೇನೆ. ಅವರಿನ್ನೂ ಬೆಳೆಯಬೇಕು, ಸರಿಯಾದ ತಿಳುವಳಿಕೆ ಹೊಂದಿ ವಿವೇಚನಾತ್ಮಕ ಕೆಲಸ ಮಾಡಲಿ’ ಎಂದಿದ್ದಾರೆ.

ಎಂಜಿಎಂ ಹೆಲ್ತ್‌ಕೇರ್‌ಗೆ ಧನ್ಯವಾದ ಸಲ್ಲಿಕೆ
ವೀಡಿಯೋದಲ್ಲಿ ಚರಣ್‌ ಅವರು ಎಂಜಿಎಂ ಹೆಲ್ತ್‌ಕೇರ್‌ ಹಾಸ್ಪಿಟಲ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಎಂಜಿಎಂ ಹೆಲ್ತ್‌ಕೇರ್‌ನವರು ನಮಗಾಗಿ ಮತ್ತು ತಂದೆಯವರ ಅನಾರೋಗ್ಯದ ಸಂದರ್ಭ ಅವರನ್ನು ನೋಡಿಕೊಂಡ ರೀತಿಗೆ, ಕಾಳಜಿಗೆ ನಮ್ಮ ಕುಟುಂಬ ಕೃತಜ್ಞವಾಗಿದೆ. ತಂದೆಯವರ ಚಿಕಿತ್ಸೆಗೆ ಎಂಜಿಎಂನವರು ಅಪೋಲೋದ ಸಹಾಯ ಕೋರಿದಾಗ ಕೂಡಲೆ ಸ್ಪಂದಿಸಿದ ಅವರೆಲ್ಲರು ಶ್ರೇಷ್ಠ ವ್ಯಕ್ತಿಗಳು. ಈ ರೀತಿ ಸುಳ್ಳು ಸುದ್ದಿ ಹರಡುತ್ತಿರುವ ನೀವು ಕೂಡ ಶ್ರೇಷ್ಠ ವ್ಯಕ್ತಿಗಳಾಗಬಹುದು. ಶ್ರೇಷ್ಠತೆಯನ್ನು ಅನುಕರಿಸಲು ಪ್ರಯತ್ನಿಸಿ ಎಂದು ಸುಳ್ಳು ಸುದ್ದಿ ಹರಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಗಾನ ಗಾರುಡಿ ಎಸ್ಪಿಬಿ ಅವರು ಸೆಪ್ಟಂಬರ್‌ 25ರಂದು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

Udayavani is now on Telegram. Click here to join our channel and stay updated with the latest news.

Next