ಲಕ್ನೋ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ದೃಢ ಸಂಕಲ್ಪ ಹೊಂದಿರುವ ಉತ್ತರ ಪ್ರದೇಶದಲ್ಲಿನ ವಿರೋಧ ಪಕ್ಷಗಳು ಈಗಲೇ ಸೀಟು ಹಂಚಿಕೆ ಸೂತ್ರವನ್ನು ಅಂತಿಮ ಗೊಳಿಸಿರುವುದಾಗಿ ಮಾದ್ಯಮ ವರದಿಗಳು ತಿಳಿಸಿವೆ.
ಈಗ ತಿಳಿದು ಬಂದಿರುವ ಪ್ರಕಾರ ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಿಎಸ್‌ಪಿಗೆ 30 ಸೀಟು, ಅಖೀಲೇಶ್ ಯಾದವ್ ಅವರ ಎಸ್‌ಪಿ ಗೆ 30 ಸೀಟು, ಕಾಂಗ್ರೆಸ್‌ಗೆ ಹತ್ತು ಸೀಟು ಎಂದು ತೀರ್ಮಾನವಾಗಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಸೀಟುಗಳಿದ್ದು ಇನ್ನುಳಿದ 10 ಸೀಟುಗಳನ್ನು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ರೀತಿಯ ಸಣ್ಣ ಪಕ್ಷಗಳೊಳಗೆ ಹಂಚಲಾಗುವುದು ಎಂದು ತಿಳಿದು ಬಂದಿದೆ.
ಈಚೆಗೆ ಕೈರಾನಾ ಕ್ಷೇತ್ರವನ್ನು ಆರ್‌ಎಲ್‌ಡಿ ಗೆದ್ದಿತ್ತು. ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಆರ್‌ಎಲ್‌ಡಿಯನ್ನು ಬೆಂಬಲಿಸಿದ್ದವು. ಪರಿಣಾಮವಾಗಿ ಬಿಜೆಪಿ ಸೋಲನುಭವಿಸಿತ್ತು.
ಇದಕ್ಕೂ ಮೊದಲು ಇದೇ ರೀತಿಯ ಹೊಂದಾಣಿಕೆಯಲ್ಲಿ ವಿರೋಧ ಪಕ್ಷಗಳು ಗೋರಖ್‌ಪುರ ಮತ್ತು ಫೂಲ್‌ಪುರ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ತಮ್ಮೊಳಗಿನ ಸಂಘಟಿತ ಶಕ್ತಿಯನ್ನು ಕಂಡುಕೊಂಡಿದ್ದವು.
ಈಚಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಹೊರತಾಗಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗೂಡಿ ಸಮ್ಮಿಶ್ರ ಸರಕಾರ ರಚಿಸಿ ಅಧಿಕಾರಕ್ಕೆ ಬಂದಿದ್ದವು.