ಲಕ್ನೋ: ಸಮಾಜವಾದಿ ಪಕ್ಷದ ‘ಪಿಡಿಎ’ ಕುರಿತು ರವಿವಾರ(ನ10) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೊಸ ವ್ಯಾಖ್ಯಾನವನ್ನು ನೀಡಿದ್ದು, ‘ದಂಗೆಕೋರರು, ಅಪರಾಧಿಗಳ ಪ್ರೊಡಕ್ಷನ್ ಹೌಸ್ನ ಸಿಇಒ ಅಖಿಲೇಶ್ ಯಾದವ್ , ಶಿವಪಾಲ್ ಯಾದವ್ ತರಬೇತುದಾರ’ ಎಂದು ಕಿಡಿ ಕಾರಿದ್ದಾರೆ.
ನವೆಂಬರ್ 20 ರಂದು ನಡೆಯಲಿರುವ ಉಪಚುನಾವಣೆ ಗೆ ಕಟೆಹಾರಿ (ಅಂಬೇಡ್ಕರ್ ನಗರ) ದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಆದಿತ್ಯನಾಥ್, “ಎಸ್ಪಿ ಯವರು ಪಿಡಿಎ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಪಿಡಿಎ ಎಂದರೆ ಗಲಭೆಕೋರರು ಮತ್ತು ಅಪರಾಧಿಗಳ ನಿರ್ಮಾಣದ ಮನೆ ಎಂದು ನಿಮಗೆ ಈ ಹೊಸ ವ್ಯಾಖ್ಯಾನವನ್ನು ನೀಡುತ್ತಿದ್ದೇನೆ. ಯಾವುದೇ ದೊಡ್ಡ ಕ್ರಿಮಿನಲ್, ಮಾಫಿಯಾ ಅಥವಾ ಗಲಭೆಕೋರರನ್ನು ನೆನಪಿಸಿಕೊಳ್ಳಿ. ಅವರು ಎಸ್ಪಿಯ ಪ್ರೊಡಕ್ಷನ್ ಹೌಸ್ನ ಭಾಗವಾಗಿದ್ದಾರೆ. ಪ್ರತಿ ಭಯಾನಕ ಅಪರಾಧಿ, ಪ್ರತಿ ಭಯಾನಕ ಮಾಫಿಯಾ, ಪ್ರತಿ ಭಯಾನಕ ಅತ್ಯಾಚಾರಿ ಈ ಪ್ರೊಡಕ್ಷನ್ ಹೌಸ್ ನಲ್ಲೆ ಜನಿಸುತ್ತಾನೆ. ರಾಜ್ಯದ ಮಹಿಳೆಯರಲ್ಲಿ ಭಯ ಮೂಡಿಸಲು ಎಸ್ಪಿ ಕಾರ್ಯಕರ್ತನ ದರ್ಶನವೇ ಸಾಕು’ ಎಂದು ಟೀಕಾ ಪ್ರಹಾರ ನಡೆಸಿದರು.
ಅಯೋಧ್ಯೆ ಅತ್ಯಾಚಾರ ಪ್ರಕರಣದ ಆರೋಪಿಯನ್ನು ರಕ್ಷಿಸಲು ಸಮಾಜವಾದಿ ಪಕ್ಷದವರು ಪ್ರಯತ್ನಿಸಿದ್ದಾರೆ. ಮಾಫಿಯಾ ಅತೀಕ್ ಅಹ್ಮದ್ ಮತ್ತು ಖಾನ್ ಮುಬಾರಕ್ ಕೂಡ ಈ “ಪ್ರೊಡಕ್ಷನ್ ಹೌಸ್” ನ ಭಾಗವಾಗಿದ್ದರು. ಅವರನ್ನು ಡಬಲ್ ಇಂಜಿನ್ ಸರ್ಕಾರವು ವ್ಯವಹಾರದಿಂದ ಹೊರಗೆ ಕಳುಹಿಸಿದೆ ಎಂದು ಆದಿತ್ಯನಾಥ್ ಹೇಳಿದರು.
ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ವಿಧಾನಸಭಾ ಕ್ಷೇತ್ರದ ಕೊತ್ವಾದಲ್ಲಿ ಚುನಾವಣ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಎಸ್ ಪಿ ಮಾಫಿಯಾಗೆ ಪ್ರೋತ್ಸಾಹ ನೀಡುತ್ತಿದೆ. ಅದು ಪ್ರಯಾಗ್ರಾಜ್ನ ಅತೀಕ್ ಅಹ್ಮದ್ ಆಗಿರಲಿ, ಘಾಜಿಪುರದ ಮುಖ್ತಾರ್ ಅನ್ಸಾರಿ ಆಗಿರಲಿ, ಅಂಬೇಡ್ಕರ್ ನಗರದ ಖಾನ್ ಮುಬಾರಕ್ ಆಗಿರಲಿ ಎಲ್ಲರೂ ಸಮಾಜವಾದಿ ಪಕ್ಷದ ಪ್ರೊಡಕ್ಷನ್ ಹೌಸ್ನ ಉತ್ಪನ್ನಗಳೇ ಆಗಿದ್ದರು. ಅವರೆಲ್ಲರೂ ಸಮಾಜವಾದಿ ಪಕ್ಷದ ಅಪರಾಧದಲ್ಲಿ ವ್ಯಾಪಾರ ಪಾಲುದಾರರಾಗಿದ್ದರು, ”ಎಂದು ಕಿಡಿ ಕಾರಿದರು.
‘PDA’ ಎಂಬುದು 2022 ರ ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹಿಂದುಳಿದವರು, ದಲಿತರು ಮತ್ತು ‘ಅಲ್ಪಸಂಖ್ಯಾಕ ರಿಗಾಗಿ ರಚಿಸಿದ ಸಂಕ್ಷಿಪ್ತ ರೂಪವಾಗಿದೆ.