Advertisement
ಶ್ರಾವಣದ ಸೋನೆ ಮಳೆ. ಮಳೆಯ ಕಲರವಕ್ಕೆ, ಹೆಣ್ಮಕ್ಕಳ ಕೈಯಲ್ಲಿ ಇರುವ ಬಳೆಗಳ ಕಿಣಿಕಿಣಿ ಶಬ್ದ. ಕಿವಿಗೆ ಇಂಪು ಇಂಪು. ಶ್ರಾವಣ ಮಾಸ ನಮ್ಮ ಹಿಂದೂ ಸ್ತ್ರೀಯರ ಮೆಚ್ಚಿನ ತಿಂಗಳು. ನಾಗರ ಪಂಚಮಿಯಿಂದ ಆರಂಭಗೊಳ್ಳುವ ತಿನ್ನುವ ಹಬ್ಬದ ಸರದಿ, ಸೋಣೆ ಸಂಕ್ರಮಣ, ಹೊಸ್ತಿಲ ಪೂಜೆಯ ಸಡಗರ, ತವರಿಗೆ ಹೋಗಿ ಬರುವ ನೆಪ, ಆಷಾಢದ ಜಡತ್ವ ದೂರಾಗಿ ನವೋಲ್ಲಾಸ ತುಂಬುವ ಕಾಲ ಶ್ರಾವಣ ಮಾಸ. ಅಲ್ಲದೇ ಆಷಾಢದ ಅನುಭೂತಿಯಿಂದ ಅರಳದೆ ಮುದುಡಿದ ಪುಷ್ಪಗಳೆಲ್ಲ ನಳನಳಿಸುತ್ತಾ ಮನೆಯಂಗಳದಲ್ಲಿ ಅರಳುವ ಹೊತ್ತು ಶ್ರಾವಣ.
Related Articles
Advertisement
ಹೊಸ್ತಿಲಿಗೆ ನಮಸ್ಕಾರನಮ್ಮ ಊರಲ್ಲಿ ಅಕ್ಕಪಕ್ಕದ ಮನೆಗೆ ಸೋಣೆ ತಿಂಗಳಲ್ಲಿ ಹೊಸ್ತಿಲು ನಮಸ್ಕಾರಕ್ಕೆ ಹೋಗಿ ಬರುವ ಕ್ರಮವಿದೆ. ಹೀಗೆ ಹೋದಾಗ ಮನೆಯವರು ವಿಶೇಷ ಖಾದ್ಯ ತಯಾರಿಸಿ, ಹೊಸ್ತಿಲಿಗೆ ನೈವೇದ್ಯ ಮಾಡಿ, ಅದನ್ನೇ ಪ್ರಸಾದವಾಗಿ ತಿನ್ನಲು ನೀಡಿ ಸತ್ಕರಿಸಿ, ನಂತರ ಬಾಗೀನ ನೀಡಿ ಕಳುಹಿಸುತ್ತಾರೆ. ಸೋಣೆ ತಿಂಗಳ ಸಂಜೆ ಮುತ್ತೈದೆಯರಿಗೆ ಅರಸಿನ-ಕುಂಕುಮ, ರವಿಕೆ ಕಣ, ಹಾಗೂ ಬಹುಮುಖ್ಯವಾಗಿ ಬಳೆಗಳನ್ನು ನೀಡುವರು.
ಕೆಲವು ಸಮುದಾಯದಲ್ಲಿ ಒಂದು ತಿಂಗಳಿಡೀ ಬೆಳಿಗ್ಗೆ , ಸಂಜೆ ಹೊಸ್ತಿಲ ಪೂಜೆಯ ಕ್ರಮವಿದ್ದರೆ, ಕೆಲವರು ಈ ಕ್ರಮವನ್ನು ಚೌತಿ ಹಬ್ಬದ (ಗಣೇಶ ಚತುರ್ಥಿ) ವರೆಗೆ ಮಾತ್ರ ಆಚರಿಸಿ ಆ ದಿನ ಮುಗಿಸುತ್ತಾರೆ. ಸೋಣೆ ತಿಂಗಳಲ್ಲಿ ಬರುವ ಅನಂತ ಚತುರ್ಥಿ, ಗಣೇಶ ಚತುರ್ಥಿ, ನಾಗರ ಪಂಚಮಿ, ವರಮಹಾಲಕ್ಷ್ಮೀ ಪೂಜೆಗಳಿಗೆ ಮಧ್ಯಾಹ್ನದ ನೈವೇದ್ಯಕ್ಕೆ ತಯಾರಿಸಿದ ಭಕ್ಷ್ಯಗಳನ್ನು, ದೇವರಿಗೆ ಸಮರ್ಪಿಸಿದ ನಂತರ, ಹೊಸ್ತಿಲಿಗೆ ನೈವೇದ್ಯ ಮಾಡುವರು. ಮನೆಗೆ ಪೂಜೆಗೆ ಆಗಮಿಸಿದ ಮುತ್ತೈದೆಯರು, ಹೆಣ್ಮಕ್ಕಳು ನಡುಮನೆಯ ಹೊಸ್ತಿಲಿನ ಬಳಿ ಜಮಾಯಿಸಿ, ಹೊಸ್ತಿಲು ನಮಸ್ಕಾರಕ್ಕೆ ಅಣಿಯಾಗುವರು. ಮಧ್ಯಾಹ್ನದ ಹೊಸ್ತಿಲು ನಮಸ್ಕಾರದಲ್ಲಿ ದೀಪವನ್ನು ಹೊಸ್ತಿಲ ಕೆಳಭಾಗದಲ್ಲಿ ಇಡುವರು. ಬೆಳಿಗ್ಗೆಯೇ ಹೊಸ್ತಿಲು ಬರೆದಿರುವುದರಿಂದ, ಗಿಂಡಿಯ ನೀರನ್ನಷ್ಟೇ ಹೊಸ್ತಿಲ ಮೇಲಿಟ್ಟು, ಅರಸಿನ-ಕುಂಕುಮ ಹೂವುಗಳನ್ನು ಎಲ್ಲರೂ ಹೊಸ್ತಿಲಿಗೆ ಅಲಂಕರಿಸಿ ನೈವೇದ್ಯ ಮಾಡಿ, ನಮಸ್ಕಾರ ಮಾಡಿ, ಕೊನೆಯಲ್ಲಿ ಗಿಂಡಿಯನ್ನು ಹೊಸ್ತಿಲ ಮೇಲಿಟ್ಟ ಹಿರಿಮುತ್ತೈದೆ, ಆ ಗಿಂಡಿಯ ನೀರನ್ನು ಒಂದು ಹನಿ ಒಳಗೆರೆದು, ಮತ್ತುಳಿದ ನೀರನ್ನು ಕಟ್ಟೆಯ ತುಳಸಿಗೆ ಎರೆದು ಬರುತ್ತಾರೆ. ಹೊಸ್ತಿಲ ಅಜ್ಜಿಗೆ ದೋಸೆ ನೈವೇದ್ಯ ಮಾಡಿ ಕಳುಹಿಸುವುದೆಂದರೆ ಸೀರೆ ಉಡುಗೊರೆಯ ಸಂಕೇತ, ಹಾಗೇ ಶ್ಯಾವಿಗೆ ನೈವೇದ್ಯ ಎಂದರೆ ನೂಲು ನೀಡುವುದರ ಸೂಚನೆ ಎಂಬುದು ಜನಪದ ಪ್ರತೀತಿ. ಈಗ ಕೆಲವರು ಹಾಸ್ಯಕ್ಕಾಗಿ ಈ ಬಾರಿ ನಮ್ಮನೆ ಹೊಸ್ತಿಲು ಅಜ್ಜಿಗೆ ಸಂಜೆ ನೈವೇದ್ಯಕ್ಕೆ ನಿತ್ಯವೂ ಕೇವಲ ಚಪಾತಿ. ಯಾಕೆಂದರೆ, ಅವಳಿಗೆ ಸಕ್ಕರೆ ಕಾಯಿಲೆ ಎನ್ನುವರು. ಒಟ್ಟಿನಲ್ಲಿ ನಾವು ತಿನ್ನಲು ಮಾಡುವ ಆಹಾರ ಖಾದ್ಯಗಳನ್ನು ಹೊಸ್ತಿಲಜ್ಜಿಗೆ ನೈವೇದ್ಯ ಮಾಡುತ್ತೇವೆ. ಶುಕ್ರವಾರ ಅಥವಾ ಮಂಗಳವಾರ ಸೋಣೆ ತಿಂಗಳ ಕೊನೆಯ ದಿನವಾಗಿದ್ದರೆ, ಈ ಹೊಸ್ತಿಲಜ್ಜಿಯನ್ನು ಕಳುಹಿಸುವುದಿಲ್ಲ. ಒಂದೋ ಮಂಗಳವಾರದ ಮೊದಲೇ ಸೋಮವಾರ ಅಥವಾ, ಬುಧವಾರ ನೀರು ಹೊರಹಾಕುತ್ತಾರೆ. ಶುಕ್ರವಾರ ಬಂದರೂ ಗುರುವಾರ ಅಥವಾ ಶನಿವಾರ ನೀರು ಹೊರಹಾಕುತ್ತಾರೆ. ಅಂದರೆ ಶುಕ್ರವಾರ ಮತ್ತು ಮಂಗಳವಾರ ಲಕ್ಷ್ಮೀ ದೇವಿಯ ರೂಪದ ಹೊಸ್ತಿಲಜ್ಜಿಯನ್ನು ಕಳುಹಿಸಿದರೆ, ಮನೆಯ ಸಿರಿ ಸಮೃದ್ಧಿ ಅವಳೊಂದಿಗೆ ಹೊರಟುಹೋಗಿತ್ತದೆಂದು ಅಂಬೋಣ. ಹಾಗೇ ಸೋಣೆ ಶುಕ್ರವಾರ ಸೊಸೆ ಮನೆಯಿಂದ ತೆರಳಬಾರದು, ಮಂಗಳವಾರ ಮಗಳು ತೌರಿನಿಂದ ಹೊರಡಬಾರದೆಂದೂ ಹೇಳುವರು. ಇದರೊಂದಿಗೆ ಸೋಣೆ ತಿಂಗಳಲ್ಲಿ ಕರಾವಳಿಯ ಬಹುತೇಕ ದೇಗುಲಗಳಲ್ಲಿ ಸೋಣೆ ಆರತಿ ಎಂಬ ವಿಶೇಷ ಸೇವೆಯ ಸಡಗರ. ಸಂಜೆಯಾಗುತ್ತಿದ್ದಂತೆ ಮನೆಯ ಮಹಿಳೆಯರು, ಮಕ್ಕಳು, ಹಿರಿಯರೆಲ್ಲ ದೇಗುಲಗಳಿಗೆ ಹೋಗುವ ತಯಾರಿ ನಡೆಸುತ್ತಾರೆ. ಜಿಟಿಜಿಟಿ ಮಳೆಯ ನಡುವೆ ಊರ ದೇಗುಲಗಳಲ್ಲಿ ನಡೆಯುವ ಸೋಣೆ ಆರತಿಯನ್ನು ಕಣ್ತುಂಬಿಕೊಳ್ಳುವ ಸಡಗರ! ಸೋಣೆ ಆರತಿ ನೋಡಿದರೆ ಪಾಪ ಪರಿಹಾರವೆಂಬ ಪ್ರತೀತಿ. ಕತ್ತಲಾವರಿಸಲು ಶುರುವಾದೊಡನೆ, ದೇಗುಲಗಳಲ್ಲಿ ಬಹುವಿಧ ಹೂಮಾಲೆಗಳಿಂದ ದೇವರನ್ನು ಅಲಂಕರಿಸಿ, ಅರಳು, ಅವಲಕ್ಕಿ, ಬೆಲ್ಲ ಕಾಯಿ, ತುಪ್ಪಗಳನ್ಮು ಮಿಶ್ರಣ ಮಾಡಿದ ಪಂಚಕಜ್ಜಾಯವನ್ನು ನೈವೇದ್ಯ ಮಾಡಿ, ಸಾಲಂಕೃತ ಆರತಿ ಬೆಳಗಿ ಪೂಜಿಸುತ್ತಾರೆ. ಸೋಣೆ ತಿಂಗಳಲ್ಲಿ ಮರದ ಆರತಿ ಬೆಳಗುವುದು ವಿಶೇಷ. ಈ ಆರತಿಗೆ ಹಲಗೆ ಆರತಿ ಎಂಬ ಹೆಸರೂ ಇದೆ. ಬಳೆಗಳಿಗೂ ಸೋಣೆ (ಶ್ರಾವಣ) ತಿಂಗಳಿಗೂ ವಿಶೇಷ ನಂಟು. ಹಿಂದೆಲ್ಲ ಬಳೆಗಾರರೇ ಸೋಣೆ ತಿಂಗಳಿಗೆ ಮನೆಮನೆಗೆ ಬಂದು ಮನೆಯಲ್ಲಿ ಇರುವ ಎಲ್ಲಾ ಹೆಣ್ಣುಮಕ್ಕಳಿಗೆ, ಮುತ್ತೈದೆಯರಿಗೆ ಕೈತುಂಬಾ ಬಳೆ ಇಟ್ಟು , ಹೋಗುವ ಪದ್ಧತಿ ಇತ್ತು. ವರ್ಷಕ್ಕೊಮ್ಮೆಯಷ್ಟೇ ಬಳೆ ಇಡುವ ಹರ್ಷದ ಕಾಲ ಅದಾಗಿತ್ತು. ಬಳೆಗಾರರಿಗೆ ಮನೆ ಮರ್ಯಾದೆಯಾಗಿ ಬಳೆಗಳಿಗೆ ನಿಗದಿಯಾದ ಹಣದೊಂದಿಗೆ, ಅಕ್ಕಿ-ಕಾಯಿ, ವೀಳ್ಯದ ಪಟ್ಟಿ ನೀಡಿ ಗೌರವಿಸಿ ಕಳುಹಿಸುತ್ತಿದ್ದರು. ಅಂಗಡಿಗಳಿಗೆ ಹೋಗಿ ಬಳೆ ಇಟ್ಟು ಬರುವ ಪ್ರಮೇಯವೇ ಇರಲಿಲ್ಲ. ಆರ್ಥಿಕವಾಗಿಯೂ ಹಿಂದುಳಿದ ಕಾಲ ಅದಾಗಿತ್ತು. ಈಗ ಸೋಣೆ ತಿಂಗಳಲ್ಲಿ ದೇವಿ ದೇಗುಲಗಳಿಗೆ ಹೋದರೆ ದೇವರಿಗೂ ಬಳೆ ಅರ್ಪಿಸಿ, ನಾವು ಹೆಣ್ಮಕ್ಕಳು ಕೈ ತುಂಬಾ ಬಳೆ ಇಟ್ಟು ಬರುವ ಪದ್ಧತಿಯನ್ನು ಹುಟ್ಟುಹಾಕಬೇಕಿದೆ. ಈ ಶ್ರಾವಣ ಮಾಸದಲ್ಲಾದರೂ ಸ್ತ್ರೀ ಕುಲದ ಶುಭಕಳೆಗಳಾದ ಬಳೆಗಳನ್ನು ಎರಡೂ ಕೈಗಳ ತುಂಬಾ ಹಾಕಿಕೊಂಡು ನಲಿದಾಡಿದರೆ ಸಿಗುವ ಸಂತೋಷಕ್ಕೆ ಎಣೆಯುಂಟೆ? ಸೋಣೆ ತಿಂಗಳು ತವರು ಮನೆಗೆ ಹೋಗಿ, ತಾ ಹುಟ್ಟಿ ಬೆಳೆದ ತವರಿನ ಹೊಸ್ತಿಲಿಗೆ ನಮಸ್ಕರಿಸಿ, ತವರಿನವರು ಕೊಡುವ ಬಳೆ ಧರಿಸಿ ಸಂಭ್ರಮಿಸಿ, ಚೆನ್ನೆಮಣೆ, ಪಗಡೆ ಮೊದಲಾದ ಒಳಾಂಗಣ ಕ್ರೀಡೆಯಾಡಿ ಮನಸ್ಸನ್ನು ಹಗುರ ಮಾಡಿಕೊಂಡು ಬರುವ ಕ್ರಮವೂ ಇಂದು ಕೆಲವೆಡೆ ಇದೆ. ಶ್ರಾವಣ ಮಾಸದ ಒಂದು ನೆಪ ಹೆಣ್ಮನಗಳಿಗೆ ನವೋಲ್ಲಾಸ ನೀಡುತ್ತದೆ. ಕಾರುತಿಂಗಳ ವ್ಯವಸಾಯದ ಕಾರುಬಾರಿನ ಜಂಜಾಟ, ಆಷಾಢ ಮಾಸದ ಜಡತ್ವ ಇವೆಲ್ಲದರಿಂದ ಹೊಸ ಹುರುಪು ಪಡೆಯಲು ಶ್ರಾವಣ ಅಥವಾ ಸೋಣೆ ತಿಂಗಳು ಮಹಿಳೆಯರಿಗೆಲ್ಲ ಮುದ ನೀಡುವ ಕಾಲ ಎಂದದ್ದು ಯಾಕೆಂದು ತಿಳಿಯಿತಷ್ಟೇ? ಪೂರ್ಣಿಮಾ ಎನ್. ಭಟ್ಟ ಕಮಲಶಿಲೆ