Advertisement

ಬರದ ಬೆನ್ನಲ್ಲೇ ರೈತರಿಗೆ ಬಿತ್ತನೆ ಬೀಜ ದರ ಏರಿಕೆಯ ಆಘಾತ

11:01 PM May 24, 2024 | Team Udayavani |

ಕುಂದಗೋಳ:ಮುಂಗಾರು ಪೂರ್ವ ಉತ್ತಮ ಮಳೆ ಆಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ಅನ್ನದಾತರಿಗೆ ಬರದ ಬೆನ್ನಲ್ಲೇ ಬಿತ್ತನೆ ಬೀಜದ ದರ ಏರಿಕೆ ಬರೆ ಎಳೆಯುತ್ತಿದೆ.

Advertisement

ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸುವ ಬೀಜದ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರೀ ಹೆಚ್ಚಳವಾಗಿದೆ. ಪ್ರತಿ ಕೆಜಿಗೆ ವಿವಿಧ ಬಿತ್ತನೆ ಬೀಜದ ದರ 2ರಿಂದ 61 ರೂ. ವರೆಗೆ ಹೆಚ್ಚಳವಾಗಿದೆ. ಸೋಯಾಬಿನ್‌ ಬೀಜದ ದರ ಮಾತ್ರ ಪ್ರತಿ ಕೆಜಿಗೆ 7 ರೂ. ಕಡಿಮೆಯಾಗಿದೆ. ಉಳಿದ ಎಲ್ಲಾ ಬೀಜಗಳ ದರ ಏರಿಕೆಯಾಗಿದೆ.
ಹೆಸರು, ಉದ್ದು, ತೊಗರಿ ಮುಂತಾದ ಬೀಜಗಳು 5 ಕೆಜಿ, ಸೋಯಾಬಿನ್‌ ಮತ್ತು ಶೇಂಗಾ 30 ಕೆಜಿ, ಗೋವಿನಜೋಳ 4 ಕೆಜಿ ಪ್ಯಾಕೇಟ್‌ ಚೀಲಗಳು ಬರುತ್ತವೆ. ವಿವಿಧ ಬೀಜಗಳ ಪ್ಯಾಕೇಟ್‌ ಚೀಲದ ದರ 60ರಿಂದ 304 ರೂ. ವರೆಗೆ ಹೆಚ್ಚಾಗಿದೆ. 5 ಎಕರೆಗೆ ಮಾತ್ರ ರಿಯಾಯಿತಿ ನೀಡಲಾಗುತ್ತಿದ್ದು, ಉಳಿದ ಬೀಜಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗಿದೆ.

ಸಹಾಯಧನ ಎಷ್ಟು?: ಸಾಮಾನ್ಯ ವರ್ಗದ ರೈತರಿಗೆ ಹೆಸರು, ಉದ್ದು, ತೋಗರಿ ಸೋಯಾಬಿನ್‌ ಬೀಜಕ್ಕೆ ಪ್ರತಿ ಕೆಜಿಗೆ 25 ರೂ., ಶೇಂಗಾ ಬೀಜಕ್ಕೆ ಪ್ರತಿ ಕೆಜಿಗೆ 14 ರೂ. ಹಾಗೂ ಗೋವಿನ ಜೋಳಕ್ಕೆ ಪ್ರತಿ ಕೆಜಿಗೆ 20 ರೂ ಸಹಾಯಧನ ನೀಡಲಾಗುತ್ತಿದೆ. ಎಸ್‌ಸಿ/ಎಸ್‌ಟಿಗೆ ಹೆಸರು, ಉದ್ದು, ತೊಗರಿ, ಸೋಯಾಬಿನ್‌ ಬೀಜಕ್ಕೆ ಪ್ರತಿ ಕೆಜಿ 37 ರೂ., ಶೇಂಗಾ ಪ್ರತಿ ಕೆಜಿಗೆ 14 ರೂ. ಹಾಗೂ ಗೋವಿನ ಜೋಳಕ್ಕೆ ಪ್ರತಿ ಕೆಜಿಗೆ 30 ರೂ. ಸಹಾಯಧನ ನೀಡಲಾಗುತ್ತಿದೆ.

ಗೊಬ್ಬರದ ಕಥೆ ಏನು?: ಯೂರಿಯಾ 48 ಕೆಜಿಗೆ 266 ರೂ., ಡಿಎಪಿ 50 ಕೆಜಿಗೆ 1,350 ರೂ., ಎಂಒಪಿ 50 ಕೆಜಿಗೆ 1,700 ರೂ., ಎಸ್‌ಎಸ್‌ಪಿ 50 ಕೆಜಿಗೆ 500ರಿಂದ 700 ರೂ. ದರವಿದೆ. ಕಾಂಪ್ಲೆಕ್ಸ್‌ನಲ್ಲಿ 50 ಕೆಜಿಗೆ ಪ್ಯಾಕ್ಟ್ (20.20) 1,225ರೂ., ಪ್ಯಾಕ್ಟ್ 1,200 ರೂ. ಮತ್ತು ಇಪ್ಕೋ 1,250 ರೂ. ನಿಗದಿಪಡಿಸಲಾಗಿದೆ.ಕೆಲ ಸೊಸೈಟಿಗಳಲ್ಲಿ ಡಿಎಪಿ ಗೊಬ್ಬರ ತೆಗೆದುಕೊಳ್ಳುವಾಗ ಅದರೊಟ್ಟಿಗೆ ಒಂದು ಲೀಟರ್‌ನ ನ್ಯಾನೋ ಯೂರಿಯಾ ಲಿಕ್ವಿಡ್‌ ತೆಗೆದುಕೊಂಡರೆ ಮಾತ್ರ ಡಿಎಪಿ ಗೊಬ್ಬರ ಕೊಡುತ್ತಿದ್ದು, ಇದು ರೈತರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.

ರಿಯಾಯಿತಿ ದರದ ಬಿತ್ತನೆ ಬೀಜದ ಬೆಲೆ ಹೆಚ್ಚಳ (ಕೆಜಿಗೆ)
ಬೆಳೆ-ಕಳೆದ ವರ್ಷದ ದರ-ಪ್ರಸಕ್ತ ವರ್ಷದ ದರ-ಹೆಚ್ಚಿದ ದರ
ಹೆಸರು-100-161-61
ಉದ್ದು-89-132-43
ತೊಗರಿ-105-153-48
ಶೇಂಗಾ-76-78-02
ಗೋವಿನಜೋಳ-222-246-24

Advertisement

ಬರಗಾಲದ ಸಂಕಷ್ಟದಲ್ಲಿ ಬೀಜದ ದರ ಹೆಚ್ಚಳ, ಸರಿಯಾದ ಸಮಯಕ್ಕೆ ಗೊಬ್ಬರ ಸಿಗದಂತೆ ಮಾಡಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದ್ದಾರೆ. ಹೇಗೆ ಬೇಸಾಯ ಮಾಡಬೇಕು ತಿಳಿಯುತ್ತಿಲ್ಲ. ಬೆಳೆಗೆ ಸರಿಯಾಗಿ ಬೆಲೆ ಸಿಗದ ವೇಳೆ ಬೀಜದ ದರ ಮಾತ್ರ ಹೆಚ್ಚಿಗೆ ಮಾಡಿರುವುದು ಹೊರೆಯಾಗುತ್ತಿದೆ. ಸರ್ಕಾರ ಬೀಜ-ಗೊಬ್ಬರಗಳ ದರ ಕಡಿಮೆ ಮಾಡಿ ಸರಿಯಾದ ಸಮಯಕ್ಕೆ ದೊರೆಯುವಂತೆ ಮಾಡಬೇಕು.
– ಹನುಮರಡ್ಡಿ ಇಟಗಿ, ಚಾಕಲಬ್ಬಿ ಗ್ರಾಮದ ರೈತ

ಬಿತ್ತನೆ ಬೀಜದ ದರ ಹೆಚ್ಚು ಕಡಿಮೆ ಮಾಡುವುದು ಬೆಂಗಳೂರಿನ ಕೃಷಿ ಇಲಾಖೆ ಮುಖ್ಯ ಕಚೇರಿ. ಅಲ್ಲಿ ದರ ನಿಗದಿ ಮಾಡಿ ನಮಗೆ ಆದೇಶ ಪ್ರತಿ ಕಳಿಸುತ್ತಾರೆ. ಅದರ ಪ್ರಕಾರ ರೈತರಿಗೆ ಬೀಜ ವಿತರಣೆ ಮಾಡುತ್ತೇವೆ.
– ಭಾರತಿ ಮೆಣಸಿನಕಾಯಿ, ಸಹಾಯಕ ಕೃಷಿ ನಿರ್ದೇಶಕಿ

ಮಳೆ ಚೆನ್ನಾಗಿ ಆಗುತ್ತಿದ್ದರೂ ಸರಿಯಾಗಿ ಬೀಜ-ಗೊಬ್ಬರ ದೊರೆಯುತ್ತಿಲ್ಲ. ಬೀಜದ ದರ ಹೆಚ್ಚಿಗೆ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ರೈತರಿಂದ ಬೀಜ ದರ ಏರಿಕೆ ರೂಪದಲ್ಲಿ ಹಣ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗಾದರೆ ರೈತರು ಏನು ಮಾಡಬೇಕು. ಬೀಜ-ಗೊಬ್ಬರ ದರ ಕಡಿಮೆ ಮಾಡಿ ಸರಿಯಾದ ಸಮಯಕ್ಕೆ ವಿತರಣೆ ಮಾಡಬೇಕು.
-ಎಂ.ಆರ್‌. ಪಾಟೀಲ, ಕುಂದಗೋಳ ಶಾಸಕ

-ಗಿರೀಶ ಘಾಟಗೆ

Advertisement

Udayavani is now on Telegram. Click here to join our channel and stay updated with the latest news.

Next