Advertisement

ಬಿತ್ತನೆ ಬೀಜ ಲೂಸ್‌ ಮಾರಾಟಕ್ಕೆ ಕಡಿವಾಣ ಹಾಕಿ

03:21 PM Apr 26, 2017 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಅದರಲ್ಲೂ ಜಗಳೂರು ಭಾಗದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಲೂಸ್‌(ಬಿಡಿ) ಬಿತ್ತನೆ ಬೀಜ ಮಾರಾಟದ ವಿಷಯ ಜಿಲ್ಲಾ ಪಂಚಾಯತ್‌ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದೆ. 

Advertisement

ಮಂಗಳವಾರ ಉಮಾ ಎಂ.ಪಿ. ರಮೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೂಸ್‌ ಬಿತ್ತನೆ ಬೀಜ ಮಾರಾಟದ ವಿಷಯ ಪ್ರಸ್ತಾಪಿಸಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ಕೆ. ಮಂಜುನಾಥ್‌, ಜಿಲ್ಲೆಯಲ್ಲಿ ಅದರಲ್ಲೂ ಜಗಳೂರು ಭಾಗದಲ್ಲಿ ವ್ಯಾಪಕವಾಗಿ ಬಿಡಿಯಾಗಿ ಬಿತ್ತನೆ ಬೀಜ ಮಾರಾಟ ನಡೆಯುತ್ತಿದೆ. 

ಪ್ರತಿ ಗ್ರಾಮದಲ್ಲಿ ಕಂಡು ಬರುತ್ತಿದೆ ಎಂದು ದೂರಿದರು. ಜಗಳೂರಿನ ತಾಲೂಕಿನ ಅನೇಕ ಗ್ರಾಮದಲ್ಲಿ ಆಟೋರಿಕ್ಷಾ ಚಾಲಕರು ರೈತರಿಂದ 300 ರೂ. ಪಡೆದು ರಾಣೆಬೆನ್ನೂರು ಮತ್ತಿತರ ಕಡೆ ಹೋಗಿ ಸಂಜೆ ವೇಳೆಗೆ ಬೀಜ ತಂದು ಕೊಡುತ್ತಾರೆ.

ಇದಕ್ಕೆ ಕೃಷಿ ಇಲಾಖೆ ಕಡಿವಾಣ ಹಾಕಬೇಕು. ಇಲ್ಲದೇ ಹೋದಲ್ಲಿ ಸರ್ಕಾರದಿಂದ ಬಿತ್ತನೆ ಬೀಜ ಮಾರಾಟದ ಬದಲು ಬಿಡಿಯಾಗಿ ಬಿತ್ತನೆ ಮಾರಾಟ ಮಾಡುವರಿಗೆ ಇಲಾಖೆಯಿಂದಲೇ ಅನುಮತಿ ಕೊಟ್ಟಲ್ಲಿ ರೈತರಿಗೆ ಹಣ ಉಳಿಯುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಬೆಳಗಾವಿಯಿಂದ ತುಮಕೂರಿನವರೆಗೆ ಈ ವ್ಯವಹಾರ ನಡೆಯುತ್ತಿದೆ.

ರೈಲುಗಳ ಮೂಲಕ ಲೂಸ್‌ ಬಿತ್ತನೆ ಬೀಜ ಮಾರಾಟ ನಡೆಸಲಾಗುತ್ತಿದೆ. ಬೀಗರು, ಸಂಬಂಧಿಕರ ಮೂಲಕವೂ ಮಾರಾಟ ನಡೆಸಲಾಗುತ್ತಿದೆ. ರಾಣೆಬೆನ್ನೂರು ಇತರೆಡೆ ಲೂಸ್‌ ಬಿತ್ತನೆ ಬೀಜ ಮಾರಾಟ ಮಾಡುವ ಕಡೆ ದಾಳಿ ನಡೆಸಲಾಗಿದೆ. ಲೂಸ್‌ ಬಿತ್ತನೆ ಬೀಜ ತಡೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ. ಸದಾಶಿವ ಸಭೆಗೆ ತಿಳಿಸಿದರು. 

Advertisement

12 ಅರ್ಜಿ ತಿರಸ್ಕಾರ.. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 46 ರೈತರು ಆತ್ಮಹತ್ಯೆಗೆ ಒಳಗಾಗಿದ್ದು, 26 ರೈತರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. 8 ಪ್ರಕರಣಗಳು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿ ಮುಂದೆ ಮಂಡನೆಯಾಗಿವೆ.

12 ಆರ್ಜಿ ತಿರಸ್ಕೃತಗೊಂಡಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ. ಸದಾಶಿವ ತಿಳಿಸಿದರು. 12 ಅರ್ಜಿಗಳನ್ನು ಯಾವ ಆಧಾರ, ಮಾನದಂಡದ ಆಧಾರದಲ್ಲಿ ತಿರಸ್ಕರಿಸಲಾಗಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌.ಜಿ. ನಟರಾಜ್‌ ಸೂಚಿಸಿದರು. 

ಅಡಕೆ ಹಾನಿ ಸಮೀಕ್ಷೆ… ಸತತ ಮಳೆ ಕೊರತೆ, ಬರದಿಂದ ಹಾನಿಗೀಡಾಗಿರುವ ಅಡಕೆ ತೋಟಗಳ ರೈತರ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಟಿ.ಎಂ. ವೇದಮೂರ್ತಿ ತಿಳಿಸಿದರು. ತೋಟಗಾರಿಕಾ ಇಲಾಖೆ ಮೂಲಕ ಈವರೆಗೆ ನಡೆಸಿರುವ ಗ್ರಾಮ ಪಂಚಾಯತ್‌ ವಾರು ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ 4,830 ಹೆಕ್ಟೇರ್‌ ಅಡಕೆ ಸಂಪೂರ್ಣವಾಗಿ ಹಾನಿಗೀಡಾಗಿದೆ ಎಂದು ತಿಳಿದು ಬಂದಿದೆ. 

ಜಗಳೂರು ತಾಲೂಕಿನಲ್ಲಿ ಈಗಾಗಲೇ ಪರಿಹಾರ ಕೋರಿ 600 ಅರ್ಜಿ ಬಂದಿವೆ ಎಂದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ರಾಜ್ಯ ಸರ್ಕಾರಕ್ಕೆ ಮಾಡಿಕೊಂಡಿರುವ ಮನವಿ ಮೇರೆಗೆ ರಾಜ್ಯ ಸರ್ಕಾರ ಪ್ರತಿ ಅಡಕೆ ಬೆಳೆಗಾರರ ಸಮೀಕ್ಷೆಗೆ ಆದೇಶಿಸಿದೆ. ಕೇಂದ್ರದ ತಂಡ ಭೇಟಿ ನೀಡುವ ಮುನ್ನವೇ ಜಿಲ್ಲೆಯಲ್ಲಿ ಪ್ರತಿ ಅಡಕೆ ಬೆಳೆಗಾರರ ಸಮೀಕ್ಷೆ ನಡೆಸಲಾಗುವುದು.

ಪ್ರತಿ ತಾಲೂಕಿಗೆ 50-60 ವಾಟರ್‌ ಟ್ಯಾಂಕ್‌ ಸೌಲಭ್ಯ ಒದಗಿಸಬೇಕು ಎಂದು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರಿಗೆ ಮನವಿ ಮಾಡಲಾಗಿದೆ. ಕಳೆದ ಸಾಲಿನಲ್ಲಿ ಹನಿ ನೀರಾವರಿ ಯೋಜನೆಗೆ 14 ಕೋಟಿ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು. 

ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಇಳುವರಿ ಬಾರದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮೇ ಮಾಹೆಯಲ್ಲಿ ನಡೆಸುತ್ತಿದ್ದ ಮಾವು ಮೇಳ ನಡೆಯುತ್ತಿಲ್ಲ. ಅನೇಕ ಕಡೆ ಖೇಣಿ ನೀಡಲಾಗಿದೆ. ಐವರು ರೈತರನ್ನು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ. 10 ರಿಂದ ನಡೆಯುವ ಮಾವು ಮೇಳಕ್ಕೆ ಕಳಿಸಿಕೊಡಲಾಗುತ್ತಿದೆ ಎಂದು ವೇದಮೂರ್ತಿ ತಿಳಿಸಿದರು. 

ಎಚ್‌1ಎನ್‌1ಗೆ ಇಬ್ಬರು ಸಾವು.. ದಾವಣಗೆರೆ ತಾಲೂಕಿನ ಮತ್ತಿ ಒಳಗೊಂಡಂತೆ ಜಿಲ್ಲೆಯಲ್ಲಿ ಎಚ್‌1ಎನ್‌1 ನಿಂದ ಈವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಈವರೆಗೆ 35 ಶಂಕಿತ ಪ್ರಕರಣ ವರದಿಯಾಗಿವೆ. ಎಚ್‌1ಎನ್‌1 ತಡೆಗೆ ವ್ಯಾಪಕ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ಮನೆಯಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಒಳಗೊಂಡಂತೆ ಎಲ್ಲಾ ಕಡೆ ಅಗತ್ಯ ಪ್ರಮಾಣದಲ್ಲಿ ಟ್ಯಾಮಿಪೂ ಗುಳಿಗೆ ದಾಸ್ತಾನು ಮಾಡಲಾಗಿದೆ. ಸಾಂಕ್ರಾಮಿಕ ರೋಗಗಳು ಪತ್ತೆಯಾಗಿಲ್ಲ. ವಾಂತಿ-ಭೇದಿ ಪ್ರಕರಣ ವರದಿಯಾದ ಕಡೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ ತಿಳಿಸಿದರು.

ಚನ್ನಗಿರಿ ತಾಲೂಕಿನ ಕರೇಕಟ್ಟೆ ಗ್ರಾಮದ ಗೋಮಾಳದಲ್ಲಿ ರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವಿಗೆ ಸೂಕ್ತ ಕ್ರಮ ತೆಗೆದುಕೊಳ್ಳು ವಂತೆ ಅಧ್ಯಕ್ಷೆ ಉಮಾ ರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ವಾಗೀಶ್‌ ಡಿಎಚ್‌ಒ ಡಾ| ತ್ರಿಪುಲಾಂಬಗೆ ಸೂಚಿಸಿದರು. ಉಪಾಧ್ಯಕ್ಷ ಡಿ. ಸಿದ್ದಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ ಇತರೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next