Advertisement
ಮೈಸೂರು: ಕನ್ನಡದ ಮೂಲಕವೇ ಕರ್ನಾಟಕವನ್ನು ಕಟ್ಟುವ ಪ್ರಯತ್ನ ಮಾಡಿದ ಹಿರಿಯ ಸಾಹಿತಿಗಳನ್ನು ಸ್ಮರಿಸುವ ಮೂಲಕ ನಾಡು ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯೋನ್ಮುಖರಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
Related Articles
Advertisement
ಭುವನೇಶ್ವರಿಗೆ ಪೂಜೆ: ಕನ್ನಡ ರಾಜ್ಯೋತ್ಸವದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಚಿವ ಜಿ.ಟಿ.ದೇವೇಗೌಡ ಹಾಗೂ ಇನ್ನಿತರರು ಅರಮನೆ ಆವರಣದಲ್ಲಿರುವ ತಾಯಿ ಭುವನೇಶ್ವರಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಮಾರಂಭದ ವೇದಿಕೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಭುವನೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕನ್ನಡಾಂಬೆಗೆ ನಮನ ಸಲ್ಲಿಸಿದರು. ಬಳಿಕ ಸಚಿವ ಜಿ.ಟಿ.ದೇವೇಗೌಡ ರಾಷ್ಟ್ರ ಹಾಗೂ ರಾಜ್ಯ ಧ್ವಜಗಳ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್ ಸಿಬ್ಬಂದಿ ರಾಷ್ಟ್ರಗೀತೆ ನುಡಿಸಿದರೆ, ಹಂಸಿಣಿ ಮತ್ತು ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.
ಆಕರ್ಷಕ ಪಥಸಂಚಲನ: ಸಮಾರಂಭದ ಅಂಗವಾಗಿ ವಿವಿಧ ಪೊಲೀಸ್ ತುಕಡಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ಪ್ರಮುಖವಾಗಿ ನಗರ ಹಾಗೂ ಸಶಸ್ತ್ರ ಮೀಸಲು ಪಡೆ, ಸಿಎಆರ್, ನಗರ ನಾಗರಿಕ ಪೊಲೀಸ್, ನಗರ ಸಂಚಾರ ಪೊಲೀಸ್, ಮಹಿಳಾ ಪೊಲೀಸ್, ಗೃಹ ರಕ್ಷಕದಳ, ಅಶ್ವಾರೋಹಿ ದಳ, ಪೋಲೀಸ್ ಬ್ಯಾಂಡ್ ಸಿಬ್ಬಂದಿಯೊಂದಿಗೆ ಅಲಿಲ್ ಜೇಮ್ಸ್ ಶಾಲೆ, ಗಣಪತಿ ಸಚ್ಚಿದಾನಂದ ಶಾಲೆ, ಸಾವಿತ್ರಿ ಕಾನ್ವೆಂಟ್ ಶಾಲಾ, ಕರುಣಾಮಯಿ ಶಾಲೆ ಸೇರಿದಂತೆ ಇನ್ನಿತರ ಶಾಲೆಗಳ ಮಕ್ಕಳು ಪ್ರಧಾನ ದಳಪತಿ ಎಂ.ಜಿ.ನಾಗರಾಜ್ ನೇತೃತ್ವದಲ್ಲಿ ಶಿಸ್ತುಬದ್ಧ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.
ಕಲಾತಂಡಗಳ ಮೆರಗು: ಸಮಾರಂಭದ ಅಂಗವಾಗಿ ನಡೆದ ತಾಯಿ ಭುವನೇಶ್ವರಿ ದೇವಿಯ ಪುತ್ಥಳಿ ಮೆರವಣಿಗೆ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು. ನಂದಿಧ್ವಜ, ವೀರಭದ್ರನ ಕುಣಿತ, ಡೊಳ್ಳು ಕುಣಿತ, ನಾದಸ್ವರ, ಪೂಜಾ ಕುಣಿತ ಹಾಗೂ ಕಂಸಾಳೆ ತಂಡಗಳ ಜತೆಗೆ ಭುವನೇಶ್ವರಿ ದೇವಿ, ವಿಜಯನಗರ ಸಾಮ್ರಾಜ್ಯದ ದರ್ಬಾರ್ ನೆನಪಿಸುವ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ಮೆರವಣಿಗೆ ಕೆ.ಆರ್.ವೃತ್ತ, ಸಯ್ನಾಜಿರಾವ್ ರಸ್ತೆ, ಕೆ.ಆರ್. ಆಸ್ಪತ್ರೆ ವೃತ್ತ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮಾರ್ಗದಲ್ಲಿ ಸಾಗಿ ಪುರಭವನದ ಆವರಣದಲ್ಲಿ ಅಂತ್ಯಗೊಂಡಿತು. ಸಮಾರಂಭದಲ್ಲಿ ಶಾಸಕರಾದ ರಾಮದಾಸ್, ತನ್ವೀರ್ ಸೇಠ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಇನ್ನಿತರರು ಹಾಜರಿದ್ದರು.