Advertisement

ಸುರಕ್ಷಿತ ಹೂಡಿಕೆಗೆ ಸವರಿನ್‌ ಗೋಲ್ಡ್‌ ಬಾಂಡ್‌: ಏನು? ಹೇಗೆ? ಇಲ್ಲಿದೆ ಮಾಹಿತಿ

09:39 AM May 13, 2020 | Hari Prasad |

ಕೋವಿಡ್ ವೈರಸ್ ಕಾರಣದಿಂದ ಮಾರುಕಟ್ಟೆ ಚಂಚಲವಾಗಿದೆ. ಎಲ್ಲಿ ಹೂಡಿಕೆ ಮಾಡುವುದೆಂದು ತಿಳಿಯುತ್ತಿಲ್ಲ.
ಜನ ಚಿನ್ನದ ಮೇಲೆ ಹೂಡಿಕೆ ಮಾಡುವುದೇ ಸುರಕ್ಷಿತ ಎಂದು ಭಾವಿಸುತ್ತಿದ್ದಾರೆ.

Advertisement

ಇಂತಹ ವೇಳೆ ಆರ್‌ಬಿಐ, ಇತ್ತೀಚೆಗೆ ಜನಪ್ರಿಯವಾಗಿರುವ ಸಾವರಿನ್‌ ಗೋಲ್ಡ್‌ ಬಾಂಡ್‌ (ಎಸ್‌ಜಿಬಿ) ಬಿಡುಗಡೆ ಮಾಡಿದೆ. ಇದು ಚಿನ್ನದ ಮೌಲ್ಯ ಹೊಂದಿರುವ ಬಾಂಡ್‌ಗಳು.

ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರು ತಿಳಿಯಬೇಕಾದ ಸಂಗತಿಗಳು ಇಲ್ಲಿವೆ:

1. ಭಾರತ ಚಿನಿವಾರ ಪೇಟೆ ಹಾಗೂ ಶುದ್ಧ ಚಿನ್ನದ ಆಭರಣ ವರ್ತಕರು (ಜುವೆಲರ್ಸ್‌ ಅಸೋಸಿಯೇಶನ್‌ ಲಿಮಿಟೆಡ್‌) ನಿಗದಿಪಡಿಸಿದ ಬೆಲೆಯ ಪ್ರಕಾರ ಬಾಂಡ್‌ಗಳನ್ನು ವಿತರಿಸಲಾಗುವುದು. ಅಂದರೆ ಚಿನಿವಾರ ಪೇಟೆ ಕಾರ್ಯಾಚರಣೆ ಮಾಡುತ್ತಿರುವಾಗಿನ (ರಜಾದಿನಗಳನ್ನು ಬಿಟ್ಟು) ಕೊನೆಯ ಮೂರು ದಿನಗಳ ಸರಾಸರಿ ಬೆಲೆಯನ್ನು ನಿಗದಿ ಮಾಡಲಾಗುವುದು. ಸದ್ಯ 1 ಗ್ರಾಮ್‌ ಚಿನ್ನದ ಬೆಲೆ 4,590 ರೂ.

2. ಸದ್ಯ ಬಿಡುಗಡೆ ಮಾಡಿರುವ ಬಾಂಡ್‌ಗಳನ್ನು ಮೇ11ರಿಂದ 15ರ ವರೆಗೆಕೊಳ್ಳಬಹುದು. ಇದು ಕಳೆದ ತಿಂಗಳು ಆರ್‌ಬಿಐ ಪ್ರಕಟಿಸಿದ, 6 ಬಾಂಡ್‌ಗಳ ಸರಣಿಯ 2ನೇ ಭಾಗ. ಮೊದಲನೇ ಭಾಗವನ್ನು ಎ.20ರಿಂದ 24ರವರೆಗೆ ಪ್ರಕಟಿಸಲಾಗಿತ್ತು.

Advertisement

3. ಸರಣಿಯ ಮೊದಲ ಭಾಗದ ಬಾಂಡ್‌ಗಳು 2016ರ ನಂತರ ದಾಖಲೆ ಮಾರಾಟ ಕಂಡಿವೆ. 822 ಕೋಟಿ ರೂ. ಮೌಲ್ಯದ 17.73 ಲಕ್ಷ ಬಾಂಡ್‌ಗಳು ಮಾರಾಟಗೊಂಡಿವೆ.

4. ವಾಣಿಜ್ಯ ಬ್ಯಾಂಕ್‌ಗಳು, ಅಂಚೆ ಕಚೇರಿ, ಬಿಎಸ್‌ಇ, ಎನ್‌ಎಸ್‌ಇ ಮತ್ತು ನ್ಯಾಷನಲ್‌ ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೋರೇಷನ್‌ನಲ್ಲಿ ಎಸ್‌ಜಿಬಿಗಳನ್ನು ಕೊಳ್ಳಬಹುದು. ವ್ಯಕ್ತಿಗತವಾಗಿ, ಟ್ರಸ್ಟ್‌ಗಳು, ಸಾಮಾಜಿಕ ಸಂಘಟನೆಗಳು, ಅವಿಭಕ್ತ ಹಿಂದು ಕುಟುಂಬಗಳು, ವಿಶ್ವವಿದ್ಯಾಲಯಗಳಿಗೆ ಕೊಳ್ಳುವ ಅವಕಾಶವಿದೆ.

5. ಕನಿಷ್ಠ 1 ಬಾಂಡ್‌ ಕೊಳ್ಳಬೇಕು. ಇದು 8 ವರ್ಷದ ಅನಂತರ ಕೈಗೆ ಸಿಗುತ್ತದೆ. ಬಯಸಿದರೆ ಈ ಯೋಜನೆಯನ್ನು 5 ವರ್ಷಕ್ಕೇ ಮುಗಿಸಿಕೊಳ್ಳಬಹುದು.

6. ಗರಿಷ್ಠ 4 ಕೆಜಿ ಮೌಲ್ಯದ ಎಸ್‌ಜಿಬಿಯನ್ನು ವ್ಯಕ್ತಿಗತವಾಗಿ ಅಥವಾ ಹಿಂದು ಅವಿಭಕ್ತ ಕುಟುಂಬಗಳು ಖರೀದಿಸಬಹುದು. ಇನ್ನು ಟ್ರಸ್ಟ್‌ ಗಳು, ಇದಕ್ಕೆ ಸರಿಸಮಾನವಾದ ಸಂಸ್ಥೆಗಳು ಒಂದು ವಿತ್ತೀಯ ವರ್ಷದಲ್ಲಿ ಗರಿಷ್ಠ 20 ಕೆಜಿ ಮೌಲ್ಯದ ಎಸ್‌ಜಿಬಿ ಖರೀದಿಸಬಹುದು.

7. ಆರ್‌ಬಿಐ ನಿರ್ದೇಶನದ ಪ್ರಕಾರ, ಅರ್ಜಿಯನ್ನು ಅಂತರ್ಜಾಲದ ಮೂಲಕ ಸಲ್ಲಿಸಿ, ಹಾಗೆಯೇ ಹಣ ಪಾವತಿಸುವವರಿಗೆ 50 ರೂ. ರಿಯಾಯ್ತಿ ಇದೆ.

8. 2020ರ ಸರಣಿಯ ಮುಂದಿನ ಬಾಂಡ್‌ಗಳನ್ನು ಜೂನ್‌ 8ರಂದು ಆರ್‌ಬಿಐ ಬಿಡುಗಡೆ ಮಾಡಲಿದೆ. ಹಾಗೆಯೇ ಕೊನೆಯ ಬಾಂಡ್‌ಗಳನ್ನು ಆ.31ರಂದು ಬಿಡುಗಡೆ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next