ಹುಬ್ಬಳ್ಳಿ: ಪ್ರಸ್ತುತ ವಿತ್ತೀಯ ವರ್ಷದ ಮೂರನೇ ತ್ತೈಮಾಸಿಕದ ಕೊನೆಯಲ್ಲಿ ನೈಋತ್ಯ ರೈಲ್ವೆಯ ಪ್ರದರ್ಶನ ಉತ್ತಮವಾಗಿದ್ದು, 4,341 ಕೋಟಿ ರೂ. ಗಳಿಕೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 22 ಕೋಟಿ ರೂ. ಹೆಚ್ಚು ಗಳಿಕೆಯಾಗಿದೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಹೇಳಿದರು.
ಗಣರಾಜ್ಯೋತ್ಸವ ನಿಮಿತ್ತ ರೈಲ್ವೆ ಕ್ರೀಡಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಅವಧಿಯಲ್ಲಿ 27 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿದೆ. ಕಳೆದ ವರ್ಷದ ಸರಕು ಸಾಗಣೆಗಿಂತ ಇದು ಶೇ.1 ಹೆಚ್ಚಾಗಿದೆ. ಈವರೆಗೆ ಪ್ರತಿದಿನ 5 ಲಕ್ಷ ಪ್ರಯಾಣಿಕರು ನೈಋತ್ಯ ರೈಲ್ವೆಯ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಪ್ರಸ್ತುತ ವರ್ಷದಲ್ಲಿ 5 ಜೋಡಿ ಹೊಸ ರೈಲುಗಳು ಹಾಗೂ 15 ಜೋಡಿ ತತ್ಕಾಲ್ ಸ್ಪೇಷಲ್ ರೈಲುಗಳನ್ನು ಪರಿಚಯಿಸಲಾಗಿದೆ. ಅಲ್ಲದೇ 3 ಜೋಡಿ ರೈಲುಗಳ ಸೇವೆ ವಿಸ್ತರಿಸಲಾಗಿದೆ. ಹಲವಾರು ಅಭಿವೃದ್ಧಿ ಕಾಮಗಾರಿ ಹಾಗೂ ಡಬ್ಲಿಂಗ್ ಕಾಮಗಾರಿಗಳ ಹೊರತಾಗಿಯೂ ಸಮಯ ಪರಿಪಾಲನೆಯಲ್ಲಿ ನೈಋತ್ಯ ರೈಲ್ವೆ ಉತ್ತಮ ಸಾಧನೆ ಮಾಡಿದೆ.
ಈ ವರ್ಷ ಶಾಶ್ವತ ವೇಗ ತಡೆಗಳನ್ನು ಮುಕ್ತಗೊಳಿಸಲಾಗಿದೆ. 408 ಕಿಮೀ ವ್ಯಾಪ್ತಿಯಲ್ಲಿ ವಿಭಾಗೀಯ ರೈಲು ವೇಗದ ಮಟ್ಟ ಹೆಚ್ಚಿಸಲಾಗಿದೆ ಎಂದರು.266 ಮುಖ್ಯ ಲೈನ್ ಡಬ್ಲಿಂಗ್ ಗುರಿ ಹೊಂದಿದ್ದು, ಈವರೆಗೆ 106 ಕಿಮೀ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೇ 76 ಕಿಮೀ ಇಲೆಕ್ಟ್ರಿಫಿಕೇಶನ್ ಕಾರ್ಯ ಪೂರ್ಣಗೊಂಡಿದ್ದು, ವರ್ಷಾಂತ್ಯಕ್ಕೆ ಒಟ್ಟು 390 ಕಿಮೀ ಎಲೆಕ್ಟ್ರಿಫಿಕೇಶನ್ ಮಾಡುವ ಗುರಿ ಹೊಂದಲಾಗಿದೆ.
ಪ್ರಸಕ್ತ ವಿತ್ತೀಯ ವರ್ಷದಲ್ಲಿ 3 ರೋಡ್ ಓವರ್‌ಬ್ರಿಡ್ಜ್ಗಳು, 67 ರೋಡ್ ಅಂಡರ್‌ಬ್ರಿಡ್ಜ್ಗಳು/ ಸಬ್‌ವೇ ನಿರ್ಮಿಸಲಾಗಿದೆ. 60 ಮಾನವಸಹಿತ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. 9 ನಿಲ್ದಾಣಗಳಲ್ಲಿ ವಿಡಿಯೋ ಸರ್ವೆಯಲೆನ್ಸ್ ಸಿಸ್ಟಮ್ ಅಳವಡಿಸಿದೆ. 308 ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲಾಗಿದೆ. ಹುಬ್ಬಳ್ಳಿ ಡಿವಿಜನ್‌ನ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹಾಗೂ ವಾಸ್ಕೋಡಗಾಮ ನಿಲ್ದಾಣಗಳು ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಪ್ರಮಾಣಪತ್ರ ಪಡೆದುಕೊಂಡಿವೆ.
ನವೆಂಬರ್ ಕೊನೆವರೆಗೆ 4663 ಗ್ರೂಪ್ “ಸಿ’ ಹಾಗೂ ಗ್ರೂಪ್ “ಡಿ’ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೈಋತ್ಯ ರೈಲ್ವೆ ಮಹಿಳಾ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ರೈಲ್ವೆ ಆಸ್ಪತ್ರೆಗೆ ವಾಟರ್ ಪ್ಯುರಿಫಾಯರ್ ನೀಡಲಾಯಿತು. ಸುಜಾತಾ ಸಿಂಗ್, ಪಿ.ಕೆ. ಮಿಶ್ರಾ ಇದ್ದರು.