Advertisement
ಬಯಲುಸೀಮೆ ಮತ್ತು ಕರಾವಳಿ ಪ್ರದೇಶಕ್ಕೆ ವ್ಯಾಪಾರ-ವಹಿವಾಟು, ಪ್ರವಾಸೋದ್ಯಮ ಸಂಪರ್ಕ ಇನ್ನಷ್ಟು ಸುಲಭವಾಗಲು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಮಹತ್ವದ ಪಾತ್ರ ವಹಿಸಲಿದೆ. ಹಲವು ದಶಕಗಳಿಂದ ವಿವಾದ ಹಾಗೂ ಉದಾಸೀನತೆಗೆ ಸಿಲುಕಿದ್ದ ಯೋಜನೆ ಇದೀಗ ಅನುಷ್ಠಾನವಾಗುವ ಆಶಾಭಾವನೆ ಗಟ್ಟಿಗೊಳ್ಳತೊಡಗಿದೆ.
ಹುಬ್ಬಳ್ಳಿ-ಅಂಕೋಲಾ ನಡುವೆ ಸುಮಾರು 164.44 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಿಸಬೇಕಾಗಿದೆ. ಸುಮಾರು 45 ಕಿ.ಮೀ. ಮಾರ್ಗ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಯೋಜನೆಗೆ ಹುಬ್ಬಳ್ಳಿಯಿಂದ ಯಲ್ಲಾಪುರ ವರೆಗೆ ಸುಮಾರು 75 ಕಿ.ಮೀ. ಅರಣ್ಯವಲ್ಲದ ಬಯಲು ಪ್ರದೇಶವಿದೆ. ಯಲ್ಲಾಪುರದಿಂದ ಸುಂಕಸಾಳ ನಡುವೆ ಸುಮಾರು 56 ಕಿ.ಮೀ. ಪಶ್ಚಿಮ ಘಟ್ಟದ ಸಹ್ಯಾದ್ರಿ ಬೆಟ್ಟಗಳ ಘಾಟ್ ವಲಯವಾಗಿದೆ. ಸುಂಕಸಾಳದಿಂದ ಅಂಕೋಲಾವರೆಗೆ ಪ್ರತ್ಯೇಕ ಬೆಟ್ಟಗಳಿಂದ ಕೂಡಿದ ಪ್ರದೇಶವಿದೆ. ಯೋಜನೆಗೆ ಒಟ್ಟಾರೆ ಸುಮಾರು 995.64 ಹೆಕ್ಟೇರ್ ಭೂಸ್ವಾಧೀನ ಅಗತ್ಯವಿದ್ದು. ಸುಮಾರು 595.64 ಹೆಕ್ಟೇರ್ ಅರಣ್ಯಭೂಮಿ, 184.60 ಹೆಕ್ಟೇರ್ ತೇವಾಂಶ ಇರುವ ಭೂಮಿ (ವೆಟ್ ಲ್ಯಾಂಡ್), 190 ಹೆಕ್ಟೇರ್ ಒಣ ಭೂಮಿ (ಡ್ರೈ ಲ್ಯಾಂಡ್) ಆಗಿದೆ. ಶೇ. 80ರಷ್ಟು ಅರಣ್ಯ ಪ್ರದೇಶ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಅರಣ್ಯ ಪ್ರದೇಶದ ಬಳಕೆ ಕುಗ್ಗಿಸಲಾಗಿದೆ. ಕೆಲ ಕಡೆ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜಿಸಲಾಗಿದ್ದು. ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ತಗ್ಗಿಸಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಲವು ಸಲಹೆ-ಶಿಫಾರಸುಗಳ ಅಳವಡಿಕೆಗೆ ಯೋಜಿಸಲಾಗಿದೆ.
Related Articles
ಉತ್ತರ ಕರ್ನಾಟಕ ಹಾಗೂ ಕರಾವಳಿ ಪ್ರದೇಶಕ್ಕೆ ವ್ಯಾಪಾರ-ವಹಿವಾಟು ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಅನುಕೂಲವಾಗಲಿದೆ. ಕಾರವಾರ, ಬೇಲೇಕೇರಿ, ಮರ್ಮ್ ಗೋವಾ ಹಾಗೂ ಮಂಗಳೂರು ಬಂದರುಗಳಿಗೆ ಸಂಪರ್ಕದ ಕೊಂಡಿಯಾಗಲಿರುವ ಮಾರ್ಗ, ಕಬ್ಬಿಣ ಅದಿರು, ಸಿಮೆಂಟ್, ವಿದೇಶಕ್ಕೆ ರಫ್ತಾಗುವ ಮೆಕ್ಕೆಜೋಳ ಇನ್ನಿತರ ಕೃಷಿ ಉತ್ಪನ್ನಗಳನ್ನು ಬಂದರುಗಳ ಮೂಲಕ ಸಾಗಿಸಲು, ವಿವಿಧ ಉತ್ಪನ್ನಗಳನ್ನು ಉತ್ತರ ಕರ್ನಾಟಕಕ್ಕೆ ತರಲು, ಕರಾವಳಿ ಪ್ರದೇಶದ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಿಗೂ ಈ ಯೋಜನೆ ಸಂಪರ್ಕ ಕಲ್ಪಿಸಲಿದೆ.
Advertisement
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕುರಿತಾಗಿ ಹಲವು ವರ್ಷಗಳಿಂದ ಧ್ವನಿ ಎತ್ತುತ್ತ ಬಂದಿದ್ದೇನೆ. ಹಲವು ಸಭೆಗಳನ್ನು ನಡೆಸಿದ್ದೆ. ಬೇಲೇಕೇರಿ ಬಂದರು ಅಭಿವೃದ್ಧಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾಗ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಜಾರಿಗೊಳ್ಳಬೇಕು ಎಂಬ ಷರತ್ತಿನೊಂದಿಗೆ ನೆರವಿಗೆ ಒಪ್ಪಿದ್ದರು. ರಾಷ್ಟ್ರೀಯ ಹಸಿರು ನ್ಯಾಯಪೀಠ ಹಾಗೂ ಕೇಂದ್ರ ಅರಣ್ಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ ಹಸಿರು ನಿಶಾನೆ ತೋರಿಸಿವೆ. ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಯೋಜನೆ ಅನುಷ್ಠಾನಕ್ಕೆ ಸಿದ್ಧರಿರುವುದಾಗಿ ತಿಳಿಸಿದ್ದಾರೆ. ರಾಜ್ಯ ಸರಕಾರ ಯೋಜನೆಗೆ ಎಷ್ಟು ಅರಣ್ಯ ಪ್ರದೇಶ ಬಳಕೆ, ಎಷ್ಟು ಮರಗಳು ಕಡಿಯಬೇಕಾಗುತ್ತದೆ. ಪರ್ಯಾಯ ಅರಣ್ಯ ಭೂಮಿಗೆ ಕೈಗೊಂಡ ಕ್ರಮಗಳ ಬಗ್ಗೆ ಸ್ಪಷ್ಟ ಪ್ರಸ್ತಾವನೆ ಸಲ್ಲಿಸಿದಲ್ಲಿ, ಭೂ ಸ್ವಾಧೀನಕ್ಕೆ ಅನುಮೋದನೆ ದೊರೆತು ಯೋಜನೆ ಅನುಷ್ಠಾನಕ್ಕೆ ತೀವ್ರತೆ ಬರಲಿದೆ.– ಪ್ರಹ್ಲಾದ ಜೋಶಿ, ಸಂಸದ – ಅಮರೇಗೌಡ ಗೋನವಾರ