Advertisement

ಸೌತಡ್ಕ: ಬೆಳ್ಳಿ ಪ್ರಭಾವಳಿ ಸಮರ್ಪಣೆ, ಗೋಶಾಲೆ ಕಟ್ಟಡ ಉದ್ಘಾಟನೆ

10:08 PM Jan 29, 2020 | mahesh |

ಕೊಕ್ಕಡ: ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ. 29ರಂದು ಬ್ರಹ್ಮಶ್ರೀ ವೇ| ಮೂ| ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 108 ಕಾಯಿ ಗಣಪತಿ ಹೋಮ, ಬೆಳ್ಳಿಯ ಪ್ರಭಾವಳಿ ಸಮ ರ್ಪಣೆ, ಗೋಶಾಲೆಯ ನೂತನ ಕಟ್ಟಡ ಉದ್ಘಾಟನೆ ನಡೆಯಿತು.

Advertisement

ಪೂರ್ವಶಿಷ್ಟ ಸಂಪ್ರದಾಯದಂತೆ ಬೆಳಗ್ಗೆ 7ರಿಂದ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ 108 ಕಾಯಿ ಗಣಪತಿ ಹೋಮ ನಡೆಯಿತು. ಸೌತಡ್ಕ ಶ್ರೀ ಕಾಮಧೇನು ಗೋಶಾಲೆಯಿಂದ ಅದ್ದೂರಿ ಮೆರವಣಿಗೆಯಲ್ಲಿ 7.5 ಕೆ.ಜಿ. ತೂಕದ ಬೆಳ್ಳಿಯ ಪ್ರಭಾವಳಿಯನ್ನು ಶ್ರೀ ಮಹಾಗಣಪತಿ ದೇಗುಲಕ್ಕೆ ತರಲಾಯಿತು. ಬಳಿಕ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸೌತಡ್ಕ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಸದಸ್ಯರು ಹಾಗೂ ಕಾರ್ಯ ನಿರ್ವಹಣಾಧಿಕಾರಿ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ನೂತನ ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಿಸಲಾಯಿತು.

“ಕಾಮಧೇನು’ ಗೋಶಾಲೆ ಕಟ್ಟಡ ಉದ್ಘಾಟನೆ
ಗೋಶಾಲೆಯ ನೂತನ ಕಟ್ಟಡ “ಕಾಮಧೇನು’ ಅನ್ನು ಮುಂಬಯಿ ಉದ್ಯಮಿ ಸೀತಾರಾಮ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಸೌತಡ್ಕ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಮಾತನಾಡಿ, ಕ್ಷೇತ್ರದಲ್ಲಿ ಕೇರಳದ ಪ್ರಸಿದ್ಧ ಜೋತಿಷಿ ವಿದ್ವಾನ್‌ ವಿಷ್ಣು ಪೂಚಕ್ಕಾಡ್‌ ನೇತೃತ್ವದಲ್ಲಿ, ಕಟೀಲು ಶ್ರೀ ಅನಂತ ಆಸ್ರಣ್ಣ ಅವರ ಮಾರ್ಗದರ್ಶನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಪೂರ್ವಶಿಷ್ಟ ಸಂಪ್ರದಾಯ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಗೋಸೇವೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಕಂಡು ಬಂದ ಹಿನ್ನೆಲೆಯಲ್ಲಿ ಗೋವುಗಳ ಬಗ್ಗೆ ವಿಶೇಷ ಕಾಳಜಿ ತೆಗೆದು ಕೊಳ್ಳಲಾಗುತ್ತಿದ್ದು, ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.

ಮಧ್ಯಾಹ್ನ ಹರಿಕಥಾ ವಿದುಷಿ ಲಲಿತಾ ಉಳಿಯಾರು, ಶ್ರೀಹರಿ ಉಳಿಯಾರು ಅವರಿಂದ “ದಾಸರೆಂದರೆ ಪುರಂದರ ದಾಸರಯ್ಯ’ ಹರಿಕಥೆ, ಸಂಜೆ ಶಿಶು ಮಂದಿರದ ಮಕ್ಕಳಿಂದ “ಚಿಣ್ಣರ ಚಿಲಿಪಿಲಿ’, ಬಳಿಕ ಪುಷ್ಪರಾಜ್‌ ಕಟ್ಟೆಮಜಲು ಅವರಿಂದ ವಿಸ್ಮಯ ಲೋಕ ಜಾದೂ ಪ್ರದರ್ಶನ, ಪುತ್ತೂರಿನ ಬೊಳುವಾರು ಭಾವನಾ ಕಲಾ ಆರ್ಟ್ಸ್ ತಂಡದವರಿಂದ ಸಾಂಸ್ಕೃತಿಕ ವೈಭವ ನಡೆಯಿತು.

ರಾತ್ರಿ ಹನುಮಗಿರಿ ಶ್ರೀ ಕೋದಂಡ ರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಯವರಿಂದ “ಓಂ ನಮಃ ಶಿವಾಯ-ವೀರ ದುಂದುಭಿ’ ಯಕ್ಷಗಾನ ಬಯಲಾಟ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಕಾರ್ಯನಿರ್ವ ಹಣಾಧಿಕಾರಿ ಹರಿಶ್ಚಂದ್ರ ಹಾಗೂ ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ, ಪ್ರಶಾಂತ್‌ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ್‌ ಪಿ.ಕೆ., ಸಿನಿ ಗುರುದೇವನ್‌, ಸೌಮ್ಯಾ ಕೆ. ಸತ್ಯಪ್ರಿಯ ಕಲ್ಲೂರಾಯ ಹಾಗೂ ದೇಗುಲದ ಅರ್ಚಕರು ಹಾಗೂ ಸಾವಿರಾರು ಭಕ್ತರು ರಾತ್ರಿ ನಡೆದ ಸೌತಡ್ಕ ಶ್ರೀ ಮಹಾಗಣಪತಿ ದೇವರ ಮೂಡಪ್ಪ ಸೇವೆಯಲ್ಲಿ ಪಾಲ್ಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next