Advertisement

Voters ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರ : ಉಭಯ ಜಿಲ್ಲಾ ಮತದಾರರ ಅಂತಿಮ ಪಟ್ಟಿ ಪ್ರಕಟ

11:17 PM Dec 31, 2023 | Team Udayavani |

ಮಂಗಳೂರು: ವಿಧಾನ ಪರಿಷತ್‌ ನೈಋತ್ಯ ಕ್ಷೇತ್ರಗಳ ಚುನಾವಣೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಪದವೀಧರ ಕ್ಷೇತ್ರದಲ್ಲಿ ದ.ಕ. ಜಿಲ್ಲೆಯಲ್ಲಿ 16,869 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 6,753 ಮತದಾರರು ಇದ್ದಾರೆ.

Advertisement

ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ ಕುಮಾರ್‌ ಅವರು ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ವಿತರಿಸಿದರು.

ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳೆರಡಲ್ಲೂ ದ.ಕ. ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಪದವೀಧರ ಕ್ಷೇತ್ರದಲ್ಲಿ 7,075 ಪುರುಷರು ಮತ್ತು 9,793 ಮಹಿಳೆಯರಿದ್ದಾರೆ. 1 ಲಿಂಗತ್ವ ಅಲ್ಪಸಂಖ್ಯಾಕರಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ 2,233 ಪುರುಷರಿದ್ದರೆ, ಅದರ ದುಪ್ಪಟ್ಟು 4,520 ರಷ್ಟು ಮಹಿಳಾ ಮತದಾರರಿರುವುದು ಗಮನಾರ್ಹ.

ಕರಡು ಮತದಾರರ ಪಟ್ಟಿ ಪ್ರಕಟವಾದ ಅನಂತರ ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ 2417 ಹಕ್ಕು ಮತ್ತು ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಈ ಪೈಕಿ 2318 ಸ್ವೀಕೃತವಾಗಿದ್ದು, 93 ತಿರಸ್ಕೃತಗೊಂಡಿವೆ. ಶಿಕ್ಷಕರ ಕ್ಷೇತ್ರದಲ್ಲಿ 1420 ಹಕ್ಕು ಮತ್ತು ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಈ ಪೈಕಿ 1259 ಸ್ವೀಕೃತವಾಗಿದ್ದು, 161 ತಿರಸ್ಕೃತಗೊಂಡಿವೆ. ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

ಪದವೀಧರ ಕ್ಷೇತ್ರ (ಉಡುಪಿ): 14,763 ಮತದಾರರು
ಮಣಿಪಾಲ: ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯ ಪದವೀಧರ ಕ್ಷೇತ್ರದ ಕರಡು ಪಟ್ಟಿಯಲ್ಲಿ 13,981 ಮತದಾರರಿದ್ದು, ಅಂತಿಮವಾಗಿ 14,763 ಮತದಾರರು ಸೇರಿದ್ದಾರೆ. ಶಿಕ್ಷಕರ ಕ್ಷೇತ್ರದ ಕರಡು ಪಟ್ಟಿಯಲ್ಲಿ 2,632 ಮತದಾರರಿದ್ದು, ಅಂತಿಮವಾಗಿ 2,937 ಮತದಾರರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಲ್ಲಿ 8,600 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 2,400 ಮತದಾರರಿದ್ದರು. ಈ ಬಾರಿ ಮತದಾರರ ಸಂಖ್ಯೆ ಹೆಚ್ಚಾಗಿದೆ. 2024ರ ಜೂನ್‌ ಅನಂತರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದರು.
ಪದವೀಧರರ ಕ್ಷೇತ್ರದ ಪಟ್ಟಿಗೆ 420 ಹಾಗೂ ಶಿಕ್ಷಕರ ಕ್ಷೇತ್ರದ ಪಟ್ಟಿಗೆ 55 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಆಕ್ಷೇಪಣೆ ಸಮಯದಲ್ಲಿ ಪದವೀಧರರ ಕ್ಷೇತ್ರಕ್ಕೆ 1,202 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 360 ಮತದಾರರ ಸೇರ್ಪಡೆಯಾಗಿದೆ. ಐಟಿಐ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಶಿಕ್ಷಕರು ಇದೀಗ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಲು ಅವಕಾಶ ಕಲ್ಪಿಸಲಾಗಿದೆ. ಅರ್ಹರು ಮತದಾರರ ಪಟ್ಟಿಗೆ ಸೇರಲು ಅರ್ಜಿ ಸಲ್ಲಿಸಬಹುದಾಗಿದೆ. ಲೋಕಸಭೆ ಚುನಾವಣೆಯ ಮತದಾರರ ಪಟ್ಟಿಗೆ ಹೆಸರು ನೋಂದಣಿ ಹಾಗೂ ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next