Advertisement

ಸೌತ್‌ ಏಶ್ಯನ್‌ ಗೇಮ್ಸ್‌: ಒಂದೇ ದಿನ 29 ಪದಕ ಜಯಿಸಿದ ಭಾರತ

12:07 AM Dec 05, 2019 | Sriram |

ಕಾಠ್ಮಂಡು: ಸೌತ್‌ ಏಶ್ಯನ್‌ ಗೇಮ್ಸ್‌ ನಲ್ಲಿ ಪ್ರಚಂಡ ಪ್ರದರ್ಶನ ಮುಂದುವರಿಸಿದ ಭಾರತ ಬುಧವಾರದ ಸ್ಪರ್ಧೆಗಳಲ್ಲಿ 29 ಪದಕ ಗೆದ್ದ ಸಾಧನೆ ಮಾಡಿದೆ. ಇದರಲ್ಲಿ 15 ಚಿನ್ನದ ಪದಕಗಳಾಗಿವೆ. ಇದರೊಂದಿಗೆ ಭಾರತ ಒಟ್ಟು 32 ಚಿನ್ನ, 26 ಬೆಳ್ಳಿ, 13 ಕಂಚಿನ ಪದಕಗಳೊಂದಿಗೆ ಒಟ್ಟು 71 ಪದಕ ಗೆದ್ದು ಪ್ರಭುತ್ವ ಸಾಧಿಸಿದೆ.

Advertisement

ಬುಧವಾರ ಆ್ಯತ್ಲೆಟಿಕ್ಸ್‌ನಲ್ಲಿ ಭಾರತ 10 ಪದಕ ಜಯಿಸಿತು (5 ಚಿನ್ನ, 3 ಬೆಳ್ಳಿ, 2 ಕಂಚು). ಟೇಬಲ್‌ ಟೆನಿಸ್‌ (3 ಚಿನ್ನ, 3 ಬೆಳ್ಳಿ), ಟೇಕ್ವಾಂಡೊ (3 ಚಿನ್ನ, 2 ಬೆಳ್ಳಿ, 1 ಕಂಚು) ಸ್ಪರ್ಧೆಗಳಲ್ಲಿ ತಲಾ 6, ಟ್ರಯಥ್ಲಾನ್‌ನಲ್ಲಿ 5 (2 ಚಿನ್ನ, 2 ಬೆಳ್ಳಿ, 1 ಕಂಚು), ಖೋ ಖೋದಲ್ಲಿ 2 ಚಿನ್ನದ ಪದಕ ಭಾರತದ ಪಾಲಾಯಿತು.

ಅರ್ಚನಾ 2ನೇ ಚಿನ್ನ
ವನಿತಾ 200 ಮೀ. ರೇಸ್‌ನಲ್ಲಿ ಅರ್ಚನಾ ಸುಧೀಂದ್ರನ್‌ 2ನೇ ಚಿನ್ನದ ಪದಕ ಗೆದ್ದರು. ಅವರು ವನಿತಾ 200 ಮೀ. ಓಟವನ್ನು 23.67 ಸೆಕೆಂಡ್‌ಗಳಲ್ಲಿ ಕ್ರಮಿಸಿ ಮೊದಲಿಗರಾದರು. ಇದಕ್ಕೂ ಮುನ್ನ 100 ಮೀ. ಓಟದಲ್ಲೂ ಅವರು ಬಂಗಾರ ಜಯಿಸಿದ್ದರು.

ಪುರುಷರ 10 ಸಾವಿರ ಮೀ. ರೇಸ್‌ನಲ್ಲಿ ಸುರೇಶ್‌ ಚಿನ್ನಕ್ಕೆ ಕೊರಳೊಡ್ಡಿದರು (29 ನಿಮಿಷ, 32 ಸೆಕೆಂಡ್‌). ಲಾಂಗ್‌ಜಂಪ್‌ನಲ್ಲಿ ಲೋಕೇಶ್‌ ಸತ್ಯನಾಥನ್‌ (7.87 ಮೀ.),ಸ್ವಾಮಿನಾಥನ್‌ (7.77 ಮೀ.) ಚಿನ್ನ ಹಾಗೂ ಬೆಳ್ಳಿಯನ್ನು ತಮ್ಮದಾಗಿಸಿ ಕೊಂಡರು.

ಪುರುಷರ ಡಿಸ್ಕಸ್‌ ತ್ರೋ ಸ್ಪರ್ಧೆಯಲ್ಲೂ ಭಾರತ ಚಿನ್ನ ಹಾಗೂ ಬೆಳ್ಳಿ ಗೆದ್ದಿತು. ಈ ಸಾಧಕರೆಂದರೆ ಕೃಪಾಲ್‌ ಸಿಂಗ್‌ (57.88 ಮೀ.), ಗಗನ್‌ದೀಪ್‌ ಸಿಂಗ್‌ (53.57 ಮೀ.). ವನಿತಾ ಡಿಸ್ಕಸ್‌ ತ್ರೋನಲ್ಲಿ ನವಜೀತ್‌ ಕೌರ್‌ ಧಿಲ್ಲೋನ್‌ ಚಿನ್ನ ಜಯಿಸಿದರು (49.87 ಮೀ.). ಸುರ್ವಿ ಬಿಸ್ವಾಸ್‌ಗೆ ಬೆಳ್ಳಿ ಲಭಿಸಿತು (47.47 ಮೀ.). ಟೇಕ್ವಾಂಡೊ ಸ್ಪರ್ಧೆಯ ಬಂಗಾರ ವಿಜೇತರೆಂದರೆ ಲತಿಕಾ ಭಂಡಾರಿ (ಅಂಡರ್‌ 53 ಕೆಜಿ), ಜರ್ನೇಲ್‌ ಸಿಂಗ್‌ (ಅಂಡರ್‌ 74 ಕೆಜಿ) ಮತ್ತು ರುದಾಲಿ ಬರುವಾ (+73 ಕೆಜಿ).

Advertisement

ಟಿಟಿಯಲ್ಲಿ ಪಾರಮ್ಯ
ಟೇಬಲ್‌ ಟೆನಿಸ್‌ ಸ್ಪರ್ಧೆಯ ಮೂರೂ ವಿಭಾಗಗಳಲ್ಲಿ ಭಾರತ ಪಾರಮ್ಯ ಸಾಧಿಸಿತು. ಪುರುಷರ ಡಬಲ್ಸ್‌ನಲ್ಲಿ ಹರ್ಮೀತ್‌ ದೇಸಾಯಿ-ಅಂಟೋನಿ ಅಮಲ್‌ರಾಜ್‌, ವನಿತಾ ಡಬಲ್ಸ್‌ನಲ್ಲಿ ಮಧುರಿಕಾ ಪಾಟ್ಕರ್‌-ಶ್ರೀಜಾ ಅಕುಲಾ, ಮಿಶ್ರ ಡಬಲ್ಸ್‌ ನಲ್ಲಿ ಹರ್ಮೀತ್‌ ದೇಸಾಯಿ-ಸುತೀರ್ಥ ಮುಖರ್ಜಿ ಚಿನ್ನ ಸಂಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next