Advertisement

ದಕ್ಷಿಣ ಅಮೆರಿಕ ಈಗ ಕೋವಿಡ್‌ ಕೇಂದ್ರ

06:50 PM May 24, 2020 | sudhir |

ಜಿನೇವಾ: ದಕ್ಷಿಣ ಅಮೆರಿಕ ಕೋವಿಡ್‌ ವೈರಸ್‌ ಹರಡುವಿಕೆಯ ಹೊಸ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪೈಕಿ ಬ್ರೆಜಿಲ್‌ ಗರಿಷ್ಠ ಪರಿಣಾಮವನ್ನು ಎದುರಿಸುತ್ತಿದೆ. ಆಫ್ರಿಕಾದ ಕೆಲವು ದೇಶಗಳಲ್ಲೂ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಸಾವಿನ ಸಂಖ್ಯೆ ಇತರ ದೇಶಗಳಿಗೆ ಹೋಲಿಸಿದರೆ ಈವರೆಗೆ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.

Advertisement

ದಕ್ಷಿಣ ಅಮೆರಿಕ ಖಂಡದ ಸ್ಥಿತಿ ಆಶಾದಾಯಕವಾಗಿಲ್ಲ. ಒಂದು ದೃಷ್ಟಿಯಿಂದ ಹೇಳುವುದಾದರೆ ಈ ಖಂಡವು ಹೊಸ ಕೋವಿಡ್‌ ಕೇಂದ್ರವಾಗಿ ಮಾರ್ಪಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿ ಡಾ| ಮೈಕ್‌ ರಿಯಾನ್‌ ಉಲ್ಲೇಖೀಸಿದ್ದಾರೆ.

ಕೋವಿಡ್‌ -19 ವೈರಸ್‌ ಆಫ್ರಿಕಾದಲ್ಲಿ ಇಂದು ಹೊಸ ಮೈಲುಗಲ್ಲನ್ನು ದಾಟಿದೆ. ಇಲ್ಲಿ ಒಂದು ಲಕ್ಷ ಕೇಸುಗಳು ದೃಢಪಟ್ಟಿವೆ. 14 ವಾರಗಳ ಹಿಂದೆ ಮೊದಲ ಪ್ರಕರಣ ಪತ್ತೆಯಾದ ಬಳಿಕ ವೈರಾಣು ವ್ಯಾಪಿಸಿದೆ. ಈವರೆಗೆ 3,100 ಸಾವುಗಳು ದೃಢಪಟ್ಟಿವೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಪ್ರಾದೇಶಿಕ ನಿರ್ದೇಶಕ, ಬೋಟ್ಸಾನಾ ಮೂಲದ ಡಾ| ಮಟ್ಶಿಡಿಸೋ ಮೊಯೆಟಿ ಅವರು, ಈಗ ಆಫ್ರಿಕಾದಲ್ಲಿ ಕೋವಿಡ್‌ ಅಂತಹ ಗಂಭೀರ ಪರಿಣಾಮ ಬೀರಿಲ್ಲ. ವಿಶ್ವದ ಇತರ ದೇಶಗಳಲ್ಲಿ ಕೋವಿಡ್‌ ಮರಣ ಮೃದಂಗವನ್ನೇ ಬಾರಿಸುತ್ತಿದೆ. ಈ ಉಪಖಂಡ ಅಂತಹ ವಿಪತ್ತನ್ನು ಇನ್ನೂ ಎದುರಿಸುವ ಸ್ಥಿತಿ ಬಂದಿಲ್ಲ ಎಂದಿದ್ದಾರೆ.

ಆದರೆ, ನಾವು ಅಷ್ಟಕ್ಕೆ ನಿರಾಳರಾಗಬೇಕಿಲ್ಲ. ಏಕೆಂದರೆ, ನಮ್ಮ ಆರೋಗ್ಯ ವ್ಯವಸ್ಥೆ ಅಷ್ಟು ಉತ್ತಮವಾಗಿಲ್ಲ. ಹಠಾತ್ತಾಗಿ ಪ್ರಕರಣಗಳ ಸಂಖ್ಯೆಯನ್ನು ಎದುರಿಸಲು ಶಕ್ತವಾಗಿಲ್ಲ ಎಂದೂ ಎಚ್ಚರಿಸಿದ್ದಾರೆ. ಆಫ್ರಿಕಾ ಖಂಡದ ಅರ್ಧದಷ್ಟು ದೇಶಗಳಲ್ಲಿ ಕೋವಿಡ್‌ ಈಗ ಸಮುದಾಯದಲ್ಲಿ ಹರಡುತ್ತಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

Advertisement

ಟರ್ಕಿ: ಹೈ-ಸ್ಪೀಡ್‌ ರೈಲು ಸೇವೆ ಶೀಘ್ರ ಆರಂಭ
ಟರ್ಕಿಯ ಹಲವು ಭಾಗಗಳಲ್ಲಿ ಮೇ 28ರಿಂದ ಹೈ-ಸ್ಪೀಡ್‌ ರೈಲು ಸೇವೆ ಪುನರಾರಂಭಗೊಳ್ಳಲಿದೆ. ಕೋವಿಡ್‌ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಎರಡು ತಿಂಗಳ ಕಾಲ ಈ ಸೇವೆಯನ್ನು ರದ್ದುಪಡಿಸಲಾಗಿತ್ತು.

ನಾಲ್ಕು ಮಾರ್ಗಗಳಲ್ಲಿ 16 ಸೇವೆಗಳು ಆರಂಭಗೊಳ್ಳಲಿವೆ. ಅಂಕಾರಾ-ಇಸ್ತಾಂಬುಲ್‌, ಅಂಕಾರಾ-ಎಸ್ಕಿಸೆಹಿರ್‌, ಅಂಕಾರಾ – ಕೊನ್ಯಾ ಹಾಗೂ ಕೊನ್ಯಾ- ಇಸ್ತಾಂಬುಲ್‌ ನಡುವೆ ಹೈ-ಸ್ಪೀಡ್‌ ರೈಲುಗಳು ಓಡಲಿವೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಶೇ. 50 ಪ್ರಯಾಣಿಕರೊಂದಿಗೆ ರೈಲು ಸೇವೆ ಆರಂಭಗೊಳ್ಳಲಿದೆ. ಮಧ್ಯದ ಆಸನವನ್ನು ಖಾಲಿ ಬಿಡಲಾಗುವುದು. 20 ವರ್ಷಗಳಿಗಿಂತ ಕೆಳಗಿನ ಹಾಗೂ 55 ವರ್ಷ ಮೇಲ್ಪಟ್ಟವರ ಪ್ರಯಾಣಕ್ಕೆ ಪೂರ್ವಾನುಮತಿ ಕಡ್ಡಾಯವಾಗಿರಲಿದೆ ಎಂದು ಅಲ್ಲಿನ ಸಾರಿಗೆ ಮತ್ತು ಮೂಲಸೌಕರ್ಯ ಸಚಿವ ಆದಿಲ್‌ ಕರಾಸ್ಮೈ ಲೋಗ್ಲು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next