ಮ್ಯಾಂಚೆಸ್ಟರ್: ವಿಶ್ವಕಪ್ ಕೂಟದ ಕೊನೆಯಲ್ಲಿ ಮೈಕೊಡವಿ ಮೇಲೆದ್ದ ದಕ್ಷಿಣ ಆಫ್ರಿಕಾ ಅಂತಿಮ ಪಂದ್ಯದಲ್ಲಿ ಬಲಿಷ್ಟ ಆಸೀಸ್ ವಿರುದ್ಧ 10 ರನ್ ಗಳ ಅಂತರದ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಇಮ್ರಾನ್ ತಾಹೀರ್ ಮತ್ತು ಜೀನ್ ಪಾಲ್ ಡ್ಯುಮಿನಿ ಗೆ ಗೆಲುವಿನ ವಿದಾಯ ಹೇಳಿದೆ.
ಇಲ್ಲಿನ ಓಲ್ಡ್ ಟ್ರಾಫೋರ್ಡ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹರಿಣಗಳ ನಾಯಕ ಫಾಫ್ ಡುಪ್ಲೆಸ್ ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ಮಾಡಿದರು. ಅದರಂತೆ ಬ್ಯಾಟಿಂಗ್ ಮಾಡಿದ ಆರಂಭಿಕ ಜೋಡಿ ಆಡೆನ್ ಮಾಕ್ರಮ್ ಮತ್ತು ಕ್ವಿಂಟನ್ ಡಿ ಕಾಕ್ ಸರಣಿಯಲ್ಲಿ ಮೊದಲ ಬಾರಿಗೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಗೆ 79 ರನ್ ಈ ಜೋಡಿ ಪೇರಿಸಿತ್ತು. ಡಿಕಾಕ್ ಅರ್ಧಶತಕ ಬಾರಿಸಿ ಮಿಂಚಿದರು. ಮೂರನೇ ವಿಕೆಟ್ ಗೆ ಜೊತೆಗೂಡಿದ ನಾಯಕ ಫಾಫ್ ಮತ್ತು ವ್ಯಾನ್ ಡರ್ ಡ್ಯೂಸೆನ್ ಅದ್ಭುತ ಜೊತೆಯಾಟ ನಡೆಸಿದರು. ಫಾಫ್ ಭರ್ಜರಿ ಶತಕ ಬಾರಿಸಿದರು. 94 ಎಸೆತಗಳಿಂದ 100 ಬಾರಿಸಿದ ಫಾಫ್, ವೇಗಿ ಬೆಹ್ರಾಂಡಫ್ ಗೆ ವಿಕೆಟ್ ನೀಡಿದರು. ಡ್ಯೂಸೆನ್ 95 ರನ್ ಗೆ ಔಟಾಗಿ ಶತಕದಿಂದ ವಂಚಿತರಾದರು. ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿತು.
ಆಫ್ರಿಕಾ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಆಸೀಸ್ ಗೆ ಆರಂಭಿಕ ಆಘಾತ ಎದುರಾಯಿತು. 32 ರನ್ ಗೆ ಎರಡು ವಿಕೆಟ್ ಕಳೆದುಕೊಂಡ ಕಾಂಗರೂಗಳನ್ನು ಮೇಲಕ್ಕೆತ್ತಿದ್ದು ಡೇವಿಡ್ ವಾರ್ನರ್. ವಾರ್ನರ್ 122 ರನ್ ಗಳಿಸಿದರು. ಅಂತಿಮವಾಗಿ ಕೀಪರ್ ಅಲೆಕ್ಸ್ ಕ್ಯಾರಿ 85 ರನ್ ಗಳಿಸಿ ಹೋರಾಟ ನಡೆಸಿದರು. ಆದರೆ ಅಂತಿಮವಾಗಿ ಆಸೀಸ್ 49.5 ಓವರ್ ಗಳಲ್ಲಿ 2015 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಹರಿಣಗಳಿಗೆ 10 ರನ್ ಗಳಿಂದ ಶರಣಾಯಿತು.
ಶತಕ ಬಾರಿಸಿದ ಫಾಫ್ ಡು ಪ್ಲೆಸಿಸ್ ಪಂದ್ಯಪುರುಷ ಪ್ರಶಸ್ತಿ ಪಡೆದರು. ಈ ಸೋಲಿನಿಂದ ಆಸೀಸ್ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿತು.
ತಾಹೀರ್, ಡ್ಯುಮಿನಿ ನಿವೃತ್ತಿ: ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹೀರ್ ಮತ್ತು ಆಲ್ ರೌಂಡರ್ ಜೀನ್ ಪಾಲ್ ಡ್ಯುಮಿನಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಹೇಳಿದರು. ಇವರಿಬ್ಬರು ಮುಂದೆ ಫ್ರಾಂಚೈಸಿ ಕೂಟಗಳಲ್ಲಿ ಪಾಲ್ಗೊಳ್ಳುವ ಅಭಿಲಾಷೆ ಹೊಂದಿದ್ದಾರೆ. ಆಪ್ರಿಕಾ ಜಯದೊಂದಿಗೆ ಅವರಿಬ್ಬರಿಗೂ ವಿದಾಯ ಹೇಳಿತು.