Advertisement

ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಗೆಲುವು

11:14 AM Feb 26, 2017 | Harsha Rao |

– ನ್ಯೂಜಿಲ್ಯಾಂಡಿಗೆ 159 ರನ್ನುಗಳ ಭಾರೀ ಸೋಲು
– ದ. ಆಫ್ರಿಕಾ 8ಕ್ಕೆ 271; ನ್ಯೂಜಿಲ್ಯಾಂಡ್‌ 112
– 2-1 ಸರಣಿ ಮುನ್ನಡೆಯಲ್ಲಿ ದಕ್ಷಿಣ ಆಫ್ರಿಕಾ
– ಗಂಗೂಲಿ ಸಾಧನೆ ಹಿಂದಿಕ್ಕಿದ ಡಿ’ವಿಲಿಯರ್

Advertisement

ವೆಲ್ಲಿಂಗ್ಟನ್‌: ಡಿ’ ವಿಲಿಯರ್ ಅವರ ಅಮೋಘ ಬ್ಯಾಟಿಂಗಿನಿಂದಾಗಿ ದಕ್ಷಿಣ ಆಫ್ರಿಕಾ ತಂಡವು ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು 159 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. 

ದ್ವಿತೀಯ ಪಂದ್ಯ ಸೋತ ಬಳಿಕ ವಿಶ್ವದ ನಂಬರ್‌ ವನ್‌ ತಂಡ ದಕ್ಷಿಣ ಆಫ್ರಿಕಾ ಮೂರನೇ ಪಂದ್ಯದಲ್ಲಿ ತನ್ನ ಘನತೆಗೆ ತಕ್ಕಂತೆ ರೀತಿ ದಿಟ್ಟ ಉತ್ತರ ನೀಡಿದೆ. ಡಿ’ವಿಲಿಯರ್ ಮತ್ತು ಕ್ವಿಂಟನ್‌ ಡಿ ಕಾಕ್‌ ಅವರ ಉತ್ತಮ ಆಟದಿಂದಾಗಿ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 271 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಈ ನಡುವೆ ಡಿ’ವಿಲಿಯರ್ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 9 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆ ಮಾಡಿ ಸೌರವ್‌ ಗಂಗೂಲಿ ಹೆಸರಲ್ಲಿದ್ದ ದಾಖಲೆಯನ್ನು ಮುರಿದರು.

ದಕ್ಷಿಣ ಆಫ್ರಿಕಾದ ನಿಖರ ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್‌ ತಂಡವು ಯಾವುದೇ ಹಂತದಲ್ಲೂ ಹೋರಾಟದ ಲಕ್ಷಣ ತೋರ್ಪಡಿಸದೇ 32.2 ಓವರ್‌ಗಳಲ್ಲಿ 112 ರನ್ನಿಗೆ ಆಲೌಟಾಯಿತು.

ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಸರಣಿಯ ನಾಲ್ಕನೇ ಪಂದ್ಯ ಮಾ. 1ರಂದು ಹಾಮಿಲ್ಟನ್‌ನಲ್ಲಿ ನಡೆಯಲಿದೆ.

Advertisement

ಕಾಕ್‌ ಸತತ 5ನೇ ಅರ್ಧಶತಕ: ಹಾಶಿಮ್‌ ಆಮ್ಲ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ಕಾಕ್‌ ಮತ್ತು ಡಿ’ವಿಲಿಯರ್ ತಂಡವನ್ನು ಆಧರಿಸಿದರು. ಸತತ ಐದನೇ ಅರ್ಧಶತಕ ಹೊಡೆದ ಕಾಕ್‌ ಅವರು ದ್ವಿತೀಯ ವಿಕೆಟಿಗೆ 73 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಶ್ರೀಲಂಕಾ ವಿರುದ್ಧ 55 ಮತ್ತು 109 ರನ್‌ ಗಳಿಸಿದ್ದ ಕಾಕ್‌ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 69 ಮತ್ತು 57 ರನ್‌ ಗಳಿಸಿದ್ದರು. ಈ ಪಂದ್ಯದಲ್ಲಿ ಎರಡು ಸಿಕ್ಸರ್‌ ಮತ್ತು ಆರು ಬೌಂಡರಿ ನೆರವಿನಿಂದ 68 ರನ್‌ ಹೊಡೆದಿದ್ದರು.

ಡಿ’ವಿಲಿಯರ್ ಕೊನೆ ಹಂತದಲ್ಲಿ ವೇಯ್ನ ಪಾರ್ನೆಲ್‌ ಜತೆ ಬಿರುಸಿನ ಆಟವಾಡಿದ್ದರಿಂದ ದಕ್ಷಿಣ ಆಫ್ರಿಕಾ ಉತ್ತಮ ಮೊತ್ತ ಪೇರಿಸುವಂತಾಯಿತು. ಅಂತಿಮ ಓವರಿನಲ್ಲಿ ಔಟಾಗುವ ಮೊದಲು ಡಿ’ವಿಲಿಯರ್ 80 ಎಸೆತ ಎದುರಿಸಿದ್ದು 85 ರನ್‌ ಹೊಡೆದಿದ್ದರು. 7 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ್ದರು. ಲಾಕಿ ಫೆರ್ಗ್ಯುಸನ್‌ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅವರು ತನ್ನ 205ನೇ ಇನ್ನಿಂಗ್ಸ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 9 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಈ ಹಿಂದೆ 228 ಇನ್ನಿಂಗ್ಸ್‌ನಲ್ಲಿ ಸೌರವ್‌ ಗಂಗೂಲಿ 9 ಸಾವಿರ ರನ್‌ ಪೂರ್ತಿಗೊಳಿಸಿದ ದಾಖಲೆ ಹೊಂದಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ 18 ಆಟಗಾರರು 9 ಸಾವಿರ ರನ್‌ ಪೂರ್ತಿಗೊಳಿಸಿದದ್ದಾರೆ. ಆದರೆ ಡಿ’ವಿಲಿಯರ್ ಉತ್ತಮ ಸರಾಸರಿ (54.04) ಮತ್ತು ಸ್ಟ್ರೈಕ್‌ ರೇಟ್‌ (1900.00) ಹೊಂದಿದ್ದಾರೆ.

ಆರಂಭದಲ್ಲಿಯೇ ಕುಸಿತ ಕಂಡ ನ್ಯೂಜಿಲ್ಯಾಂಡ್‌ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ವಿಫ‌ಲವಾಯಿತು. ಆಗಾಗ್ಗೆ ವಿಕೆಟ್‌ ಕಳೆದುಕೊಂಡ ನ್ಯೂಜಿಲ್ಯಾಂಡ್‌ 32.2 ಓವರ್‌ಗಳಲ್ಲಿ 112 ರನ್ನಿಗೆ ಸರ್ವಪತನ ಕಂಡಿತು. ಬಿಗು ದಾಳಿ ಸಂಘಟಿಸಿದ ಡ್ವೇಯ್ನ ಪ್ರಿಟೋರಿಯಸ್‌ ತನ್ನ 5.2 ಓವರ್‌ಗಳ ದಾಳಿಯಲ್ಲಿ ಕೇವಲ 5 ರನ್ನಿಗೆ 3 ವಿಕೆಟ್‌ ಕಿತ್ತು ನ್ಯೂಜಿಲ್ಯಾಂಡಿನ ಕುಸಿತಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 8 ವಿಕೆಟಿಗೆ 271 (ಕಾಕ್‌ 68, ಫಾ ಡು ಪ್ಲೆಸಿಸ್‌ 36, ಡಿ’ವಿಲಿಯರ್ 85, ವೇಯ್ನ ಪಾರ್ನೆಲ್‌ 35, ಗ್ರ್ಯಾಂಡ್‌ಹೋಮ್‌ 40ಕ್ಕೆ 2); ನ್ಯೂಜಿಲ್ಯಾಂಡ್‌ 32.2 ಓವರ್‌ಗಳಲ್ಲಿ 112 ಆಲೌಟ್‌ (ಕೇನ್‌ ವಿಲಿಯಮ್ಸನ್‌ 23, ಗ್ರ್ಯಾಂಡ್‌ಹೋಮ್‌ 34 ಔಟಾಗದೆ, ಕಾಗಿಸೊ ರಬಡ 39ಕ್ಕೆ 2, ವೇಯ್ನ ಪಾರ್ನೆಲ್‌ 33ಕ್ಕೆ 2, ಫೆಹುಲ್‌ಕ್ವಾಯೊ 12ಕ್ಕೆ 2, ಪ್ರಿಟೋರಿಯಸ್‌ 5ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next