ಜೋಹಾನ್ಸ್‌ಬರ್ಗ್ : ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 14) ರಂದು ನಡೆಯಬೇಕಿದ್ದ ಪ್ರವಾಸಿ ಪಾಕಿಸ್ಥಾನ ವಿರುದ್ಧದ 3ನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಮೊದಲ ಎರಡು ಪಂದ್ಯ ಗೆದ್ದಿರುವ ದಕ್ಷಿಣ ಆಫ್ರಿಕಾ ಸರಣಿಯನ್ನು ತನ್ನದಾಗಿಸಿಕೊಂಡಿದೆ. 3ನೇ ಪಂದ್ಯ ಟಾಸ್ ಕೂಡ ಸಾಧ್ಯವಾಗದೆ ರದ್ದಾಗಿದೆ.
ಹೆಂಡ್ರಿಕ್ಸ್ ಚೊಚ್ಚಲ ಶತಕ
ಆರಂಭ ಕಾರ ರೀಝ ಹೆಂಡ್ರಿಕ್ಸ್ ಅವರ ಚೊಚ್ಚಲ ಶತಕದ ನೆರವಿನಿಂದ 2ನೇ ಟಿ20 ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ ದಕ್ಷಿಣ ಆಫ್ರಿಕಾ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.
ಪಾಕಿಸ್ಥಾನ 5 ವಿಕೆಟಿಗೆ 206 ರನ್ನುಗಳ ದೊಡ್ಡ ಮೊತ್ತ ಪೇರಿಸಿತ್ತು. ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ 19.3 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 210 ರನ್ ಬಾರಿಸಿತು. ಇದರಲ್ಲಿ ಹೆಂಡ್ರಿಕ್ಸ್ ಗಳಿಕೆ 63 ಎಸೆತಗಳಿಂದ 117 ರನ್. ಪಾಕ್ ಎಸೆತಗಳನ್ನು ಪುಡಿಗಟ್ಟಿದ ಹೆಂಡ್ರಿಕ್ಸ್ 10 ಪ್ರಚಂಡ ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಸಿದರು.
4 ಓವರ್ ಅಂತ್ಯಕ್ಕೆ ಹರಿಣಗಳ ಪಡೆ 2 ವಿಕೆಟಿಗೆ 28 ರನ್ ಮಾಡಿ ಸಂಕಟಕ್ಕೆ ಸಿಲುಕಿತ್ತು. 3ನೇ ವಿಕೆಟಿಗೆ ಜತೆಗೂಡಿದ ಹೆಂಡ್ರಿಕ್ಸ್ ಮತ್ತು ರಸ್ಸಿ ವಾನ್ ಡರ್ ಡುಸೆನ್ 13.4 ಓವರ್‌ಗಳಲ್ಲಿ 167 ರನ್ ಪೇರಿಸಿ ಅಮೋಘ ಚೇಸಿಂಗ್‌ಗೆ ಸಾಕ್ಷಿಯಾದರು. ಡುಸೆನ್ 38 ಎಸೆತಗಳಿಂದ 66 ರನ್ ಬಾರಿಸಿ ಅಜೇಯರಾಗಿ ಉಳಿದರು (3 ಬೌಂಡರಿ, 5 ಸಿಕ್ಸರ್).
ಪಾಕ್ ಸರದಿಯಲ್ಲಿ ಆರಂಭಕಾರ ಸೈಮ್ ಅಯೂಬ್ ಅಜೇಯ 98 ರನ್ ಹೊಡೆದರು.
ಈ ಪಂದ್ಯದಲ್ಲಿ 416 ರನ್ ಒಟ್ಟುಗೂ ಡಿತು. ಇದು ದಕ್ಷಿಣ ಆಫ್ರಿಕಾದಲ್ಲಿ ಆಡಲಾದ ಟಿ20 ಪಂದ್ಯದಲ್ಲಿ ಪೇರಿಸಲ್ಪಟ್ಟ ಅತ್ಯಧಿಕ ರನ್ ದಾಖಲೆ ಆಗಿದೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-5 ವಿಕೆಟಿಗೆ 206 (ಅಯೂಬ್ ಔಟಾಗದೆ 98, ಬಾಬರ್ 31, ಇರ್ಫಾನ್ ಖಾನ್ 30, ಡಯಾನ್ ಗಾಲೀಮ್ 21ಕ್ಕೆ 2, ಬಾರ್ಟ್‌ಮನ್ 51ಕ್ಕೆ 2). ದಕ್ಷಿಣ ಆಫ್ರಿಕಾ-19.3 ಓವರ್‌ಗಳಲ್ಲಿ 3 ವಿಕೆಟಿಗೆ 210 (ಹೆಂಡ್ರಿಕ್ಸ್ 117, ಡುಸೆನ್ ಔಟಾಗದೆ 66, ಜಹಾಂದಾದ್ ಖಾನ್ 40ಕ್ಕೆ 2).