Advertisement

ಕೇಪ್‌ಟೌನ್‌: ಎಲ್ಗರ್‌ ಶತಕ

07:30 AM Mar 23, 2018 | Team Udayavani |

ಕೇಪ್‌ಟೌನ್‌: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಕೇಪ್‌ಟೌನ್‌ನಲ್ಲಿ ಗುರುವಾರ ಆರಂಭಗೊಂಡ 3ನೇ ಟೆಸ್ಟ್‌ ಪಂದ್ಯದಲ್ಲಿ ಆರಂಭಕಾರ ಡೀನ್‌ ಎಲ್ಗರ್‌ ಆಕರ್ಷಕ ಶತಕ ಬಾರಿಸಿ ದಕ್ಷಿಣ ಆಫ್ರಿಕಾದ ನೆರವಿಗೆ ನಿಂತಿದ್ದಾರೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆತಿಥೇಯ ತಂಡ 8 ವಿಕೆಟಿಗೆ 266 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿದೆ. ಎಲ್ಗರ್‌ 121 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ಎಬಿ ಡಿ ವಿಲಿಯರ್ (64), ಹಾಶಿಮ್‌ ಆಮ್ಲ (31) ಆಫ್ರಿಕಾ ಸರದಿಯ ಇತರ ಪ್ರಮುಖ ಸ್ಕೋರರ್‌ಗಳು. ಆರಂಭಕಾರ ಐಡನ್‌ ಮಾರ್ಕ್‌ರಮ್‌ ಅವರನ್ನು ಶೂನ್ಯಕ್ಕೆ ಕಳೆದುಕೊಂಡ ಬಳಿಕ ಎಲ್ಗರ್‌ ಆಫ್ರಿಕಾ ಸರದಿಯನ್ನು ಆಧರಿಸುತ್ತ ಹೋದರು. ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಉತ್ತಮ ಮಟ್ಟದಲ್ಲಿತ್ತು. ಎಲ್ಗರ್‌-ಆಮ್ಲ 2ನೇ ವಿಕೆಟಿಗೆ 86 ರನ್‌ ಪೇರಿಸಿದರೆ ಎಲ್ಗರ್‌-ಎಬಿಡಿ ಜತೆಯಾಟದಲ್ಲಿ 3ನೇ ವಿಕೆಟಿಗೆ 128 ರನ್‌ ಒಟ್ಟುಗೂಡಿತು. ಅನಂತರ ಪ್ಯಾಟ್‌ ಕಮಿನ್ಸ್‌ ದಾಳಿಗೆ ತತ್ತರಿಸಿದ ಆಫ್ರಿಕಾ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು. ಒಂದು ಹಂತದಲ್ಲಿ 2 ವಿಕೆಟಿಗೆ 220 ರನ್‌ ಮಾಡಿದ್ದ ಡು ಪ್ಲೆಸಿಸ್‌ ಪಡೆ 34 ರನ್‌ ಅಂತರದಲ್ಲಿ 5 ವಿಕೆಟ್‌ಗಳನ್ನು ಉದುರಿಸಿಕೊಂಡಿತು. ಇದರಲ್ಲಿ 4 ವಿಕೆಟ್‌ ಕಮಿನ್ಸ್‌ ಬುಟ್ಟಿಗೆ ಬಿತ್ತು. ಡು ಪ್ಲೆಸಿಸ್‌ (5), ಬವುಮ (1), ಡಿ ಕಾಕ್‌ (3) ಅವರನ್ನು ಕಮಿನ್ಸ್‌ ಅಗ್ಗಕ್ಕೆ ಉರುಳಿಸಿದರು. ಎಬಿಡಿ ವಿಕೆಟ್‌ ಕೂಡ ಕಮಿನ್ಸ್‌ ಪಾಲಾಯಿತು.

ಎಡಗೈ ಆರಂಭಕಾರ ಡೀನ್‌ ಎಲ್ಗರ್‌ 48ನೇ ಟೆಸ್ಟ್‌ ಪಂದ್ಯದಲ್ಲಿ ಬಾರಿಸಿದ 11ನೇ ಶತಕ ಇದಾಗಿದೆ. ಮೊದಲ ಟೆಸ್ಟ್‌ ಪಂದ್ಯವನ್ನು ಆಸ್ಟ್ರೇಲಿಯ ಜಯಿಸಿದ್ದರೆ, ದ್ವಿತೀಯ ಟೆಸ್ಟ್‌ ಪಂದ್ಯವನ್ನು ಗೆದ್ದ ದಕ್ಷಿಣ ಆಫ್ರಿಕಾ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next