ಕಚ್ಚಿದೆ. ಇದರೊಂದಿಗೆ 13ನೇ ವಿಶ್ವಕಪ್ ಮೂರೇ ದಿನದಲ್ಲಿ ಮತ್ತೂಂದು ಏರು ಪೇರಿನಾಟಕ್ಕೆ ಸಾಕ್ಷಿಯಾಯಿತು. ರವಿವಾರ ಅಫ್ಘಾನಿಸ್ಥಾನ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಆಘಾತವಿಕ್ಕಿತ್ತು.
ಇದು ವಿಶ್ವಕಪ್‌ನಲ್ಲಿ ಇತ್ತಂಡಗಳ ನಡುವಿನ ಮೊದಲ ಮುಖಾಮುಖೀಯಾಗಿತ್ತು. ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿತ್ತು. ಆದರೆ ಡಚ್ಚರ ಹೊಡೆತಕ್ಕೆ ಸಿಲುಕಿ ಅಪ್ಪಚ್ಚಿಯಾಯಿತು. 2 ಸೋಲುಗಳನ್ನು ಕಂಡಿದ್ದ ನೆದರ್ಲೆಂಡ್ಸ್ ಮೊದಲ ಗೆಲುವಿನ ಮಹಾಸಂಭ್ರಮವನ್ನು ಆಚರಿಸಿತು.
Advertisement
ಮಳೆಯಿಂದಾಗಿ ಈ ಪಂದ್ಯವನ್ನು 43 ಓವರ್‌ಗಳಿಗೆ ಇಳಿಸಲಾಗಿತ್ತು.
Related Articles
Advertisement
ಎಡ್ವರ್ಡ್ಸ್ ಕಪ್ತಾನನ ಆಟನೆದರ್ಲೆಂಡ್ಸ್ ಇನ್ನಿಂಗ್ಸ್‌ನ ಹೈಲೈಟ್ಸ್ ಅಂದರೆ ಸ್ಕಾಟ್ ಎಡ್ವರ್ಡ್ಸ್ ಅವರ ನಾಯಕನ ಆಟ. ಇವರ ಬ್ಯಾಟಿಂಗ್ ಸಾಹಸದಿಂದ ನೂರೈವತ್ತರ ಆಸುಪಾಸಿನಲ್ಲಿ ಕುಸಿಯುವ ಸ್ಥಿತಿಯಲ್ಲಿದ್ದ ಡಚ್ಚರ ಪಡೆ ಇನ್ನೂರೈವತ್ತರ ಗಡಿಯನ್ನು ಸಮೀಪಿಸಿ ಹರಿಣಗಳಿಗೆ ಸವಾಲೊಡ್ಡಿತು. 7ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಎಡ್ವರ್ಡ್ಸ್ ಜವಾಬ್ದಾರಿಯುತ ಆಟವಾಡಿ ಅಜೇಯ 78 ರನ್ ಬಾರಿಸಿದರು. ಡಚ್ಚರ ಪಡೆಯ ಈ ಚೇತೋಹಾರಿ ಪ್ರದರ್ಶನ ದಕ್ಷಿಣ ಆಫ್ರಿಕಾದ ಬೌಲಿಂಗ್ ಸರದಿಗೊಂದು ಹಿನ್ನಡೆಯೇ ಸರಿ. ಆರಂಭದಲ್ಲಿ ಹರಿಣಗಳ ಬೌಲಿಂಗ್ ಚೇತೋಹಾರಿಯಾಗಿಯೇ ಇತ್ತು. ರಬಾಡ, ಜಾನ್ಸೆನ್, ಎನ್‌ಗಿಡಿ, ಕೋಟಿ ಸೇರಿಕೊಂಡು ತಮ್ಮ ಛಾತಿಗೆ ತಕ್ಕ ಬೌಲಿಂಗ್ ದಾಳಿಯನ್ನೇ ಸಂಘಟಿಸಿದ್ದರು. ನೆದರ್ಲೆಂಡ್ಸ್‌ನ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಇವರ ದಾಳಿಯನ್ನು ತಡೆದು ನಿಲ್ಲಲಾಗಲಿಲ್ಲ. ವಿಕ್ರಮ್‌ಜೀತ್ ಸಿಂಗ್ (2), ಮ್ಯಾಕ್ಸ್ ಓ’ಡೌಡ್ (18), ಕಾಲಿನ್ ಆ್ಯಕರ್‌ಮನ್ (13), ಬಾಸ್ ಡಿ ಲೀಡ್ (2), ಸಿಬ್ರಾಂಡ್ ಎಂಗಲ್‌ಬ್ರೆಟ್ (19), ತೇಜ ನಿಡಮನೂರು (20) ಸಣ್ಣ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. 34ನೇ ಓವರ್ ವೇಳೆ 140ಕ್ಕೆ 7 ವಿಕೆಟ್ ಉರುಳಿತ್ತು. ಸ್ಕಾಟ್ ಎಡ್ವರ್ಡ್ಸ್ ಪ್ರವೇಶದೊಂದಿಗೆ ನೆದರ್ಲೆಂಡ್ಸ್ ಇನ್ನಿಂಗ್ಸ್‌ನ ಚಿತ್ರಣವೇ ಬದಲಾಯಿತು. ಅವರು ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಬಹಳ ಜಾಣ್ಮೆಯಿಂದ ನಿಭಾಯಿಸುತ್ತ ಇನ್ನಿಂಗ್ಸ್ ಕಟ್ಟತೊಡಗಿದರು. ರೋಲ್ಫ್ ವಾನ್ ಡರ್ ಮರ್ವ್ (29) ಮತ್ತು ಆರ್ಯನ್ ದತ್ (ಅಜೇಯ 23) ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಪರಿಣಾಮ, ಡೆತ್ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಬೌಲಿಂಗ್ ಹಳಿ ತಪ್ಪಿತು. 7 ವಿಕೆಟ್ ಪತನದ ಬಳಿಕ 105 ರನ್ ಪೇರಿಸಿದ್ದು ನೆದರ್ಲೆಂಡ್ಸ್ ಬ್ಯಾಟಿಂಗ್ ಸಾಹಸಕ್ಕೆ ಸಾಕ್ಷಿಯಾಯಿತು. ಇದು ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ತಂಡದ ವಿರುದ್ಧ 7ನೇ ವಿಕೆಟ್ ಉರುಳಿದ ಬಳಿಕ ದಾಖಲಾದ ಅತ್ಯಧಿಕ ಮೊತ್ತ. ಈ ಅವಧಿಯಲ್ಲಿ ನೆದರ್ಲೆಂಡ್ಸ್ ಕಳೆದುಕೊಂಡದ್ದು ಒಂದೇ ವಿಕೆಟ್. ಕೊನೆಯ 5 ಓವರ್‌ಗಳಲ್ಲಿ 68 ರನ್ ಹರಿದು ಬಂತು. ಸ್ಕಾಟ್ ಎಡ್ವರ್ಡ್ಸ್ 69 ಎಸೆತಗಳಿಂದ ಅಜೇಯ 78 ರನ್ ಬಾರಿಸಿ ಮೆರೆದರು. ಸಿಡಿಸಿದ್ದು 10 ಬೌಂಡರಿ ಮತ್ತು ಒಂದು ಸಿಕ್ಸರ್. ಇದು ಏಕದಿನದಲ್ಲಿ ದಕ್ಷಿಣ ಆಫ್ರಿಕಾ ನಾಯಕ 4ನೇ ಅತ್ಯಧಿಕ ಗಳಿಕೆ. 84 ರನ್ ಬಾರಿಸಿದ ಪೀಟರ್ ಬೋರೆನ್ ಅಗ್ರಸ್ಥಾನದಲ್ಲಿದ್ದಾರೆ. ಅನಂತರದ ಮೂರೂ ಸ್ಥಾನಗಳನ್ನು ಸ್ಕಾಟ್ ಎಡ್ವರ್ಡ್ಸ್ ಆಕ್ರಮಿಸಿಕೊಂಡಿರುವುದು ವಿಶೇಷ. ಎಡ್ವರ್ಡ್ಸ್-ವಾನ್ ಡರ್ ಮರ್ವ್ ಕೇವಲ 37 ಎಸೆತಗಳಿಂದ 64 ರನ್ ಬಾರಿಸಿದರು. ಕೊನೆಯಲ್ಲಿ ಎಡ್ವರ್ಡ್ಸ್-ಆರ್ಯನ್ ದತ್ 3.1 ಓವರ್‌ಗಳಲ್ಲಿ 41 ರನ್ ಪೇರಿಸಿ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಬೆಂಡೆತ್ತಿದರು.