ಕೇಪ್ ಟೌನ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದ ಬಳಿಕ ಭಾರತದ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಿಸಲಾಗಿದೆ. ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡಿದ್ದ 21 ವರ್ಷದ ಟ್ರಿಸ್ಟನ್ ಸ್ಟಬ್ಸ್ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ.
21 ವರ್ಷದ ಸ್ಟಬ್ಸ್ ಅವರು ಕ್ರಿಕೆಟ್ ದಕ್ಷಿಣ ಆಫ್ರಿಕಾ ಟಿ20 ಚಾಲೆಂಜ್‌ನಲ್ಲಿ ತಮ್ಮ ಪವರ್-ಹಿಟ್ಟಿಂಗ್ ಕೌಶಲ್ಯದಿಂದ ಗಮನ ಸೆಳೆದಿದ್ದರು. ಕೂಟದಲ್ಲಿ ಏಳು ಪಂದ್ಯಗಳಲ್ಲಿ 48.83 ಸರಾಸರಿ ಮತ್ತು 183.12 ಸ್ಟ್ರೈಕ್ ರೇಟ್‌ನಲ್ಲಿ 293 ರನ್ ಗಳಿಸಿದ್ದರು.
ಅಲ್ಲದೆ ಗಾಯದಿಂದ ಗುಣಮುಖರಾದ ವೇಗಿ ಆರ್ನಿಚ್ ನೋರ್ಜೆ ಕೂಡಾ ಮರಳಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರೀಜಾ ಹೆಂಡ್ರಿಕ್ಸ್ ಮತ್ತು ಹೆನ್ರಿಚ್ ಕ್ಲಾಸೆನ್ ಹರಿಣಗಳ ತಂಡಕ್ಕೆ ಮರಳಿದ್ದಾರೆ. 2017 ರ ಬಳಿಕ ಮೊದಲ ಬಾರಿಗೆ ವೇಗಿ ವೇಯ್ನ್ ಪಾರ್ನೆಲ್ ದ.ಆಫ್ರಿಕಾ ಟಿ20 ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಮತ್ತು ಮಾರ್ಕೊ ಜಾನ್ಸೆನ್ ಅವರಂತಹ ಐಪಿಎಲ್ ನ ಇತರ ಆಟಗಾರರನ್ನು ಸಹ ಟೆಂಬಾ ಬವುಮಾ ನೇತೃತ್ವದ ತಂಡದಲ್ಲಿ ಸೇರಿಸಲಾಗಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಜೂನ್ 9 ರಂದು ದೆಹಲಿಯಲ್ಲಿ ಪ್ರಾರಂಭವಾಗಲಿದ್ದು, ಉಳಿದ ಪಂದ್ಯಗಳು ಕ್ರಮವಾಗಿ ಕಟಕ್, ವಿಶಾಖಪಟ್ಟಣಂ, ರಾಜ್‌ಕೋಟ್ ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ.
ದಕ್ಷಿಣ ಆಫ್ರಿಕಾ ತಂಡ
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನೋರ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್.