ಮೆಲ್ಬರ್ನ್: ಮುಂಬರುವ ಚಾಂಪಿಯನ್ಸ್ ಟ್ರೋಫಿ ಕೂಟಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ತನ್ನ ಬಲಿಷ್ಠ ತಂಡ ಪ್ರಕಟಿಸಿದೆ. ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ 15 ಜನರ ತಂಡ ಆಯ್ಕೆ ಮಾಡಲಾಗಿದ್ದು, ವೇಗಿ ಜೋಶ್ ಹ್ಯಾಜಲ್ ವುಡ್ ಮರಳಿದ್ದಾರೆ.
ಆಸ್ಟ್ರೇಲಿಯಾ ನಾಯಕ ಕಮಿನ್ಸ್ ತಮ್ಮ ಎರಡನೇ ಮಗುವಿನ ಜನನದ ಹಿನ್ನೆಲೆಯಲ್ಲಿ ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ.
ತಂಡದಲ್ಲಿ ವೇಗಿ ಹ್ಯಾಜಲ್‌ವುಡ್ ಅವರನ್ನು ಸೇರಿಸಲಾಗಿದೆ. ಇತ್ತೀಚೆಗೆ ನಡೆದ ಭಾರತದ ವಿರುದ್ಧ ಸರಣಿಯಲ್ಲಿ ಗಾಯದ ಕಾರಣದಿಂದ ಕೇವಲ ಎರಡು ಟೆಸ್ಟ್‌ಗಳಿಗೆ ಸೀಮಿತರಾಗಿದ್ದರು.
ಪಾಕಿಸ್ತಾನ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಆಡಿದ್ದ ಆರಂಭಿಕ ಆಟಗಾರ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಎಂಟು ದೇಶಗಳ ನಡುವೆ ನಡೆಯುವ ಚಾಂಪಿಯನ್ಸ್ ಟ್ರೋಫಿ ಕೂಟವು ಫೆಬ್ರವರಿ 19ರಂದು ಆರಂಭವಾಗಲಿದೆ. ಪಾಕಿಸ್ತಾನ ಮತ್ತು ಯುಎಇನಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.