ಟರೋಬಾ: ಬಲಿಷ್ಠ ತಂಡಗಳನ್ನು ಮಣಿಸಿ ಇದೇ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ ಪ್ರವೇಶ ಮಾಡಿದ್ದ ಅಫ್ಘಾನಿಸ್ತಾನ ತಂಡವು ನಿರ್ಣಾಯಕ ಹಂತದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಟರೋಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ಬಾರಿಗೆ ಐಸಿಸಿ ಕೂಟವೊಂದರ ಫೈನಲ್ ತಲುಪಿದೆ.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ 11.5 ಓವರ್ ಗಳಲ್ಲಿ 56 ರನ್ ಗೆ ಆಲೌಟಾಯಿತು. ದಕ್ಷಿಣ ಆಫ್ರಿಕಾ ತಂಡವು 1 ವಿಕೆಟ್ ನಷ್ಟಕ್ಕೆ 8.5 ಓವರ್ ಗಳಲ್ಲಿ 60 ರನ್ ಗಳಿಸಿ ವಿಜಯಿಯಾಯಿತು.
ಇಡೀ ಪಂದ್ಯದಲ್ಲಿ ಅಫ್ಘಾನ್ ಪರವಾಗಿದ್ದು ಟಾಸ್ ಮಾತ್ರ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ರಶೀದ್ ಖಾನ್ ಗೆ ಯಾವುದೂ ಎಣಿಸಿದಂತೆ ನಡೆಯಲಿಲ್ಲ. ಕೂಟದ ಅತಿ ಹೆಚ್ಚಿನ ರನ್ ಸ್ಕೋರರ್ ಗುರ್ಬಾಜ್ ಮೊದಲ ಓವರ್ ನಲ್ಲಿಯೇ ಔಟಾದರು. ಆಫ್ರಿಕಾದ ವೇಗಿಗಳ ಎದುರು ನಿಲ್ಲಲಾಗದೆ ತರಗೆಲೆಗಳಂತೆ ವಿಕೆಟ್ ಉದುರುತ್ತಾ ಹೋಯಿತು. ಅತಿ ಹೆಚ್ಚಿನ ಸ್ಕೋರ್ ಬಂದಿದ್ದು ಎಕ್ಸ್ಟ್ರಾ ಮೂಲಕ. ಅದು 13 ರನ್. 11 ಆಟಗಾರರಲ್ಲಿ ಎರಡಂಕಿ ಮೊತ್ತ ಗಳಿಸಿದ್ದು ಅಜ್ಮತುಲ್ಲಾ ಮಾತ್ರ, ಅವರದ್ದು 10 ರನ್ ಗಳ ಕೊಡುಗೆ.
ದಕ್ಷಿಣ ಆಫ್ರಿಕಾ ಪರ ಮಾರ್ಕೋ ಎನ್ಸನ್ ಮತ್ತು ಶಮ್ಸಿ ತಲಾ ಮೂರು ವಿಕೆಟ್ ಕಿತ್ತರೆ, ನೋಕ್ಯಾ ಮತ್ತು ರಬಾಡಾ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್ ನಲ್ಲಿಯೇ ಡಿಕಾಕ್ ರೂಪದಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ ಗೆ ಜೊತೆಯಾದ ನಾಯಕ ಮಾರ್ಕ್ರಮ್ ಮತ್ತು ರೀಜಾ ಹೆಂಡ್ರಿಕ್ಸ್ ತಂಡಕ್ಕೆ ಆಧಾರವಾದರು. ರೀಜಾ ಅಜೇಯ 29 ಮತ್ತು ಮಾರ್ಕ್ರಮ್ ಅಜೇಯ 23 ರನ್ ಗಳಿಸಿದರು.
ಇದುವರೆಗೆ 7 ಸೆಮಿ ಫೈನಲ್ ಗಳಲ್ಲಿ ವಿಫಲವಾಗಿದ್ದ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಐಸಿಸಿ ಫೈನಲ್ ತಲುಪಿದೆ.