Advertisement

ಮೂರನೇ ಟಿ20: ಭಾರತಕ್ಕೆ 9 ವಿಕೆಟ್ ಗಳ ಸೋಲು ; ಸರಣಿ ಸಮಬಲ

09:34 AM Sep 23, 2019 | Hari Prasad |

ಬೆಂಗಳೂರು: ಮೂರನೇ ಮತ್ತು ಅಂತಿಮ ಟಿ20 ಪಂದ್ಯವನ್ನು 9 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಕ್ವಿಂಟನ್ ಡಿ ಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ಟಿ20 ಸರಣಿಯನ್ನು ಸಮಬಲಗೊಳಿಸಿದೆ. ಈ ಮೂಲಕ ಡಿ ಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ತನ್ನ ಭಾರತ ಪ್ರವಾಸವನ್ನು ಶುಭಾರಂಭಗೊಳಿಸಿದೆ.

Advertisement

ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಯ ಕಾರಣ ಒಂದೂ ಎಸೆತವನ್ನು ಕಾಣದೆ ರದ್ದುಗೊಂಡಿತ್ತು. ಬಳಿಕ ಮೊಹಾಲಿಯಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ಭಾರತ 7 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಈ ಮೂಲಕ ಟಿ20 ಸರಣಿ 1-1 ಅಂತರದಲ್ಲಿ ಸಮಬಲಗೊಂಡಿತು.

 ಭಾರತ ನೀಡಿದ 134 ರನ್ನುಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ನಾಯಕ ಡಿ ಕಾಕ್ ಅವರ ಭರ್ಜರಿ ಆಟದ ನೆರವಿನಿಂದ 16.5 ಓವರುಗಳಲ್ಲಿ ಕೇವಲ 1 ವಿಕೆಟ್ ನಷ್ಟದಲ್ಲಿ ಗುರಿ ತಲುಪಿ ಗೆಲುವಿನ ನಗು ಬೀರಿತು.

ಸ್ಪೋಟಕ ಆಟವಾಡಿದ ಕ್ವಿಂಟನ್ ಡಿ ಕಾಕ್ ಅವರು ಕೇವಲ 52 ಎಸೆತಗಳಲ್ಲಿ ಅಜೇಯ 79 ರನ್ನುಗಳನ್ನು ಬಾರಿಸಿ ಹರಿಣಗಳ ಪಾಲಿನ ಗೆಲುವಿನ ರೂವಾರಿ ಆಗಿ ಮೂಡಿಬಂದರು. ಇವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 06 ಬೌಂಡರಿ ಮತ್ತು 05 ಭರ್ಜರಿ ಸಿಕ್ಸರ್ ಗಳು ಸೇರಿದ್ದವು. ಇನ್ನೋರ್ವ ಆರಂಭಿಕ ಆಟಗಾರ ಹೆಂಡ್ರಿಕ್ಸ್ 28 ರನ್ನುಗಳನ್ನು ಬಾರಿಸಿದರು. ಡಿ ಕಾಕ್ ಅವರಿಗೆ ಉತ್ತಮ ಬೆಂಬಲ ನೀಡಿದ ಟೆಂಬಾ ಬವುಮಾ 27 ರನ್ನುಗಳನ್ನು ಬಾರಿಸಿ ಔಟಾಗದೇ ಉಳಿದರು.

ಹರಿಣಗಳ ಒಂದು ವಿಕೆಟ್ ಹಾರ್ಧಿಕ್ ಪಾಂಡ್ಯ ಪಾಲಾಯಿತು.

Advertisement

ತೃತೀಯ ಟಿ-20 ಭಾರತದ ಸಾಧಾರಣ ಮೊತ್ತ


ಪ್ರವಾಸಿ ದಕ್ಷಿಣ ಅಫ್ರಿಕಾ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಕೊಹ್ಲಿ ಪಡೆ ಪ್ರವಾಸಿಗರ ನಿಖರ ದಾಳಿಗೆ ತತ್ತರಿಸಿದೆ. ಭಾರತದ ಬ್ಯಾಟ್ಸ್ ಮನ್ ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಈ ಮೂಲಕ ಭಾರತ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು 134 ರನ್ ಗಳಷ್ಟನ್ನೇ ಕಲೆ ಹಾಕಿತು.

ಭಾರತದ ಬ್ಯಾಟಿಂಗ್ ಸರದಿಯಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ (36), ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ (19), ಆಲ್ ರೌಂಡರ್ ರವೀಂದ್ರ ಜಡೇಜಾ (19) ಮತ್ತು ಹಾರ್ಧಿಕ್ ಪಾಂಡ್ಯ (14) ಮಾತ್ರವೇ ಎರಡಂಕೆ ಮೊತ್ತವನ್ನು ದಾಟಿದರು. ಉಳಿದಂತೆ ರೋಹಿತ್ ಶರ್ಮಾ (9), ನಾಯಕ ವಿರಾಟ್ ಕೊಹ್ಲಿ (9), ಶ್ರೇಯಸ್ ಐಯ್ಯರ್ (5) ಮೊದಲಾದವರದ್ದು ಕಳಪೆ ಬ್ಯಾಟಿಂಗ್ ಪ್ರದರ್ಶನವಾಗಿತ್ತು.

ದಕ್ಷಿಣ ಆಫ್ರಿಕಾ ಪರ ಯುವ ವೇಗಿ ರಬಾಡಾ 3 ವಿಕೆಟ್ ಪಡೆದು ಮಿಂಚಿದರೆ, ಸ್ಪಿನ್ನರ್ ಕಾರ್ಲ್ ಫೋರ್ಚುನ್, ಬ್ಯುರಾನ್ ಹೆಂಡ್ರಿಕ್ಸ್ ತಲಾ 2 ವಿಕೆಟ್ ಪಡೆದರು.


Advertisement

Udayavani is now on Telegram. Click here to join our channel and stay updated with the latest news.

Next