ಚತ್ತೋಗ್ರಾಮ್: ಆಲ್ರೌಂಡ್ ಆಟದ ಪ್ರದರ್ಶನ ನೀಡಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ತಂಡದ ಮೂವರು ಆಟಗಾರರು ಚೊಚ್ಚಲ ಶತಕ ಬಾರಿಸುವ ಮೂಲಕ ಪ್ರವಾಸಿ ತಂಡ ಬೃಹತ್ ಮೊತ್ತ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಪಂದ್ಯದ ದ್ವಿತೀಯ ದಿನ ಟೋನಿ ಡಿ. ಝೋರ್ಜಿ 177 ರನ್ ಸಿಡಿಸಿದರೆ ವಿಯಾನ್ ಮುಲ್ಡರ್ ಅಜೇಯ 105 ಗಳಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾವು ಮೊದಲ ಇನ್ನಿಂಗ್ಸ್ನಲ್ಲಿ ಆರು ವಿಕೆಟಿಗೆ 575 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೊದಲು ಟ್ರಿಸ್ಟನ್ ಸ್ಟಬ್ಸ್ 106 ರನ್ ಹೊಡೆದಿದ್ದರು.
ಹರಿಣಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶವು ವೇಗಿಗಳ ದಾಳಿಗೆ ತತ್ತರಿಸಿದೆ. ದಿನದಾಟದ ಅಂತ್ಯಕ್ಕೆ 38 ರನ್ ತಲಪುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದೆ ಮಾತ್ರವಲ್ಲದೇ ಫಾಲೋಆನ್ ಭೀತಿಯಲ್ಲಿದೆ.
ಝೋರ್ಜಿ ಮತ್ತು ವಿಯಾನ್ ಮುಲ್ಡರ್ ಅವರ ಆಟ ದಿನದ ಆಕರ್ಷಣೆಯಾಗಿತ್ತು. ಎರಡು ವಿಕೆಟಿಗೆ 307 ರನ್ನುಗಳಿಂದ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾವನ್ನು ಝೋರ್ಜಿ ಆಧರಿಸಿದರು. ಝೋರ್ಜಿ ಮತ್ತು ಡೇವಿಡ್ ಬೆಡಿಂಗಂ ಮೂರನೇ ವಿಕೆಟಿಗೆ 116 ರನ್ ಪೇರಿಸಿ ಬೇರ್ಪಟ್ಟರು. ಆಬಳಿಕ ತಂಡ ಐದು ರನ್ ಗಳಿಸುವಷ್ಟರಲ್ಲಿ ಇನ್ನೆರಡು ವಿಕೆಟನ್ನು ಕಳೆದುಕೊಂಡಿತ್ತು.
ಬಿಗು ದಾಳಿ ಸಂಘಟಿಸಿದ ತೈಜುಲ್ ಇಸ್ಲಾಮ್ 198 ರನ್ನಿಗೆ 5 ವಿಕೆಟ್ ಕಿತ್ತು ಗಮನ ಸೆಳೆದರು. ಅವರು ಈ ಸರಣಿಯಲ್ಲಿ ಎರಡನೇ ಬಾರಿ ಐದು ವಿಕೆಟ್ಗಳ ಗೊಂಚಲನ್ನು ಪಡೆದರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾ ಪ್ರಥಮ ಇನ್ನಿಂಗ್ಸ್ 6 ವಿಕೆಟಿಗೆ 575 ಡಿಕ್ಲೇರ್x (ಝೋರ್ಜಿ 177, ಸ್ಟಬ್ಸ್ 106, ಮುಲ್ಡರ್ 105 ಔಟಾಗದೆ, ತೈಜುಲ್ ಇಸ್ಲಾಮ್ 198ಕ್ಕೆ 5); ಬಾಂಗ್ಲಾದೇಶ 4 ವಿಕೆಟಿಗೆ 38 (ರಬಾಡ 8ಕ್ಕೆ 2).