ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಮೊಬೈಲ್ ಫೋನ್ ಕಳುವಾಗಿದೆ. ಪೋನ್ ನಲ್ಲಿದ್ದ ಡಾಟಾ ಸಂರಕ್ಷಣೆಗಾಗಿ ಸೌರವ್ ಗಂಗೂಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ಠಾಕೂರ್ಪುಕೂರ್ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಫೋನ್ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಶನಿವಾರ ಬೆಳಿಗ್ಗೆ 11.30 ರಿಂದ ಅವರ ಫೋನ್ ಪತ್ತೆಯಾಗಿಲ್ಲ. ಪ್ರಸ್ತುತ ಬೆಹಲಾ ಚೌರಸ್ತಾದಲ್ಲಿರುವ ಮನೆಗೆ ಬಣ್ಣ ಬಳಿಯುತ್ತಿರುವ ಕೆಲವು ಕಾರ್ಮಿಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೈವ್‌ಮಿಂಟ್ ವರದಿಯ ಪ್ರಕಾರ ಗಂಗೂಲಿ 1.6 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಬಳಸುತ್ತಿದ್ದರು.
“ನನ್ನ ಫೋನ್ ಮನೆಯಿಂದ ಕದ್ದಿದೆ ಎಂದು ನಾನು ಭಾವಿಸುತ್ತೇನೆ. ನಾನು ಬೆಳಿಗ್ಗೆ 11:30 ರ ಸುಮಾರಿಗೆ ಫೋನ್ ಅನ್ನು ಕೊನೆಯದಾಗಿ ನೋಡಿದೆ. ನಾನು ಫೋನ್ ಅನ್ನು ಹುಡುಕಲು ಪ್ರಯತ್ನಿಸಿದೆ ಆದರೆ ಅದು ಸಿಗಲಿಲ್ಲ. ಫೋನ್ ನಲ್ಲಿ ತುಂಬಾ ಸಂಪರ್ಕ ಸಂಖ್ಯೆಗಳೀವೆ. ವೈಯಕ್ತಿಕ ಮಾಹಿತಿ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಪ್ರವೇಶವನ್ನು ಹೊಂದಿದೆ. ಫೋನ್ ಅನ್ನು ಪತ್ತೆಹಚ್ಚಲು ಅಥವಾ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗಂಗೂಲಿ ಹೇಳಿದ್ದಾರೆ.
ಗಂಗೂಲಿ ತನ್ನ ಫೋನ್ ನಲ್ಲಿ ಸೂಕ್ಷ್ಮವಾದ ವೈಯಕ್ತಿಕ ಡೇಟಾ ಇದೆ, ಅದು ಸೋರಿಕೆಯಾದಲ್ಲಿ ತನಗೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಿದರು.