Advertisement
16 ವರ್ಷಗಳ ಹಿಂದೆ ಜುಲೈನಲ್ಲೇ (ಜು. 13) ಭಾರತ ನಾಟ್‌ವೆಸ್ಟ್ ಚಾಂಪಿಯನ್ ಆಗಿ ಮೂಡಿ ಬಂದಿತ್ತು. ಈ ಸಂಭ್ರಮದ ವೇಳೆ ಗಂಗೂಲಿ ಟೀಮ್ ಇಂಡಿಯಾದ ಜೆರ್ಸಿಯನ್ನು ತೆಗೆದು ಸಂಭ್ರಮಿಸಿದ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
“ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್’ ವೆಬ್ ಸರಣಿಯಲ್ಲಿ ಸೌರವ್ ಗಂಗೂಲಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ; ತಾನು ವಿವಿಎಸ್ ಲಕ್ಷ್ಮಣ್‌ಗೂ ಅಂಗಿ ಕಳಚುವಂತೆ ಸೂಚಿಸಿದ್ದೆ ಎಂದಿದ್ದಾರೆ. “ಘಟನೆಯ ವೇಳೆ ಲಕ್ಷ್ಮಣ್ ನನ್ನ ಎಡ ಭಾಗದಲ್ಲಿದ್ದರು, ಹರ್ಭಜನ್ ನನ್ನ ಹಿಂದಿದ್ದರು. ನಾನು ಶರ್ಟ್ ತೆಗೆಯುತ್ತಿರುವುದನ್ನು ಕಂಡು ದಂಗಾದ ಲಕ್ಷ್ಮಣ್, “ಬೇಡ, ಹಾಗೆ ಮಾಡ ಬೇಡ…’ ಎಂದು ನನಗೆ ಹೇಳಲು ಪ್ರಯತ್ನಿಸು ತ್ತಿದ್ದರು. ನಾನು ಅಂಗಿ ತೆಗೆದ ಬಳಿಕ ಅವರು “ನಾನೀಗ ಏನು ಮಾಡಬೇಕು?’ ಎಂದು ಕೇಳಿ ದರು. ನೀವೂ ಶರ್ಟ್ ತೆಗೆದುಬಿಡಿ ಎಂದು ನಾನು ಲಕ್ಷ್ಮಣ್‌ಗೆ ಹೇಳಿದೆ….’ ಎಂಬುದಾಗಿ ಗಂಗೂಲಿ ಅಂದಿನ ವಿದ್ಯಮಾನವನ್ನು ವಿವರಿಸಿದರು. “ಹೀಗೆ ಅಂಗಿ ತೆಗೆದು ಸಂಭ್ರಮಿಸಬೇಕೆಂಬ ಯೋಚನೆ ನನಗೆ ಹೊಳೆದದ್ದೇ ಅಂತಿಮ ಕ್ಷಣದಲ್ಲಿ. ಇದಕ್ಕೂ ಹಿಂದಿನ ಭಾರತ ಪ್ರವಾಸದ ವೇಳೆ ಇಂಗ್ಲೆಂಡ್ ಮುಂಬಯಿ ಏಕದಿನ ಗೆದ್ದು ಸರಣಿಯನ್ನು 3-3 ಸಮಬಲಕ್ಕೆ ತಂದಾಗ ಆ್ಯಂಡ್ರೂé ಫ್ಲಿಂಟಾಫ್ ವಾಂಖೇಡೆಯಲ್ಲಿ ಇದೇ ರೀತಿ ವರ್ತಿಸಿದ್ದರು. ನಾನೇಕೆ ಲಾರ್ಡ್ಸ್‌ನಲ್ಲಿ ಇದನ್ನು ಪುನರಾವರ್ತಿಸಬಾರದು ಎಂದು ತೀರ್ಮಾನಿಸಿದೆ…’ ಎಂದು ಈ ಘಟನೆಯ ಹಿಂದಿನ “ಪ್ರೇರಣೆ’ಯನ್ನು ತೆರೆದಿಟ್ಟರು.
Related Articles
“ಈ ವರ್ತನೆಯಿಂದ ನನಗೂ ನಾಚಿಕೆಯಾ ಗಿದೆ. ಒಮ್ಮೆ ನನ್ನ ಮಗಳು ಕೂಡ ಇದನ್ನು ಪ್ರಶ್ನಿಸಿದ್ದಳು-ನೀನೇಕೆ ಹಾಗೆ ಮಾಡಿದೆ ಅಪ್ಪ, ಕ್ರಿಕೆಟ್‌ನಲ್ಲಿ ಹೀಗೆಲ್ಲ ಮಾಡಲೇಬೇಕೇ? ಎಂದು ಕೇಳಿದ್ದಳು. ಇಲ್ಲ, ಅರಿವಿಲ್ಲದೆ ಹೀಗೆ ಮಾಡಿದೆ ಎಂದು ಉತ್ತರಿಸಿದ್ದೆ. ಕೆಲವೊಮ್ಮೆ ಬದುಕಿನಲ್ಲಿ ನಮ್ಮ ಮೇಲೆಯೇ ನಮಗೆ ನಿಯಂತ್ರಣ ಇರುವುದಿಲ್ಲ. ಆಗ ಇಂಥದ್ದೆಲ್ಲ ಸಂಭವಿಸುತ್ತದೆ’ ಎಂದು ಗಂಗೂಲಿ ಕಾರ್ಯಕ್ರಮದಲ್ಲಿ ಹೇಳಿದರು.
Advertisement