Advertisement

ವಿಮಾನ ಯಾನದಿಂದ ಕೋವಿಡ್; ಗಂಗೂಲಿ ಅನುಮಾನ

11:11 PM May 06, 2021 | Team Udayavani |

ಹೊಸದಿಲ್ಲಿ: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೀಡಾಗಿರುವ ವಿಷಯವೆಂದರೆ, ಐಪಿಎಲ್‌ ಮುಂದೂಡಿಕೆ ಮತ್ತು ಕೋವಿಡ್ ವೈರಸ್‌ ಐಪಿಎಲ್‌ ಬಯೋ ಬಬಲ್‌ಗೆ ಹೇಗೆ ಪ್ರವೇಶಿಸಿತು ಎಂಬುದು. ಈ ಕುರಿತು ಹಲವು ಮಂದಿ ಹಲವು ಅಭಿ ಪ್ರಾಯಗಳನ್ನು ಹರಿಯಬಿಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮೊದಲ ಸಲ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಆಟಗಾರರ ವಿಮಾನ ಪ್ರಯಾಣದಿಂದಲೇ ಐಪಿಎಲ್‌ ಬಯೋಬಬಲ್‌ಗೆ ಕೋವಿಡ್ ಸೋಂಕು ಪ್ರವೇಶಿಸಿರಬಹುದು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

“ಐಪಿಎಲ್‌ ಪಂದ್ಯಗಳನ್ನು 6 ವಿವಿಧ ನಗರಗಳಲ್ಲಿ ಆಯೋಜನೆ ಮಾಡಲಾದ ಕಾರಣ ಆಟಗಾರರು ವಿಮಾನ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಇತ್ತು. ಕಳೆದ ಬಾರಿ ಯುಎಇಯ ಮೂರು ಸ್ಥಳಗಳಲ್ಲಷ್ಟೇ ಐಪಿಎಲ್‌ ಪಂದ್ಯಗಳನ್ನು ಆಯೋಜನೆ ಮಾಡಲಾಗಿತ್ತು ಹಾಗೂ ಅಲ್ಲಿ ವಿಮಾನ ಪ್ರಯಾಣದ ಅಗತ್ಯವಿರಲಿಲ್ಲ. ಹೀಗಾಗಿ ಯುಎಇ ಬಯೋಬಬಲ್‌ ಹೆಚ್ಚು ಸುರಕ್ಷಿ ತವಾಗಿತ್ತು. ಆದರೆ ಈ ಸಲದ ಪಂದ್ಯಾವಳಿ ವೇಳೆ ಕ್ರಿಕೆಟಿಗರು 3 ಸಲ ವಿಮಾನ ಪ್ರಯಾಣ ಮಾಡಬೇಕಿತ್ತು. ಪಂದ್ಯಾವಳಿ ರದ್ದುಗೊಳ್ಳುವ ಮೊದಲು ಆಟಗಾರರು ಚೆನ್ನೈ ಮತ್ತು ಮುಂಬಯಿಯಿಂದ ಅಹ್ಮದಾಬಾದ್‌ ಮತ್ತು ಹೊಸದಿಲ್ಲಿಗೆ ವಿಮಾನ ಸಂಚಾರ ಮಾಡಿದ್ದರು. ಈ ವೇಳೆಯಲ್ಲೇ ಕೊರೊನಾ ವೈರಸ್‌ ನುಸುಳಿರಬಹುದು’ ಎಂಬುದಾಗಿ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ಗೂ ಮುನ್ನ ಐಪಿಎಲ್‌? :

ಅರ್ಧಕ್ಕೆ ನಿಂತಿರುವ ಐಪಿಎಲ್‌ ಟೂರ್ನಿಯ ಪುನರಾರಂಭ ಕುರಿತು ಮಾಹಿತಿ ನೀಡಿದ ಗಂಗೂಲಿ, “ಐಪಿಎಲ್‌ ಮುಂದೂಡಲ್ಪಟ್ಟು ಕೇವಲ ಎರಡು ದಿನ ಮಾತ್ರ ಕಳೆದಿದೆ. ವಿವಿಧ ಕ್ರಿಕೆಟ್‌ ಮಂಡಳಿಗಳ ಜತೆ ಮಾತುಕತೆ ನಡೆಸಿ ಟಿ20 ವಿಶ್ವಕಪ್‌ಗೆ ಮುನ್ನ ಐಪಿಎಲ್‌ ಮುಂದುವರಿಸಲು ಅವಕಾಶವಿದೆಯೇ ಎಂಬುದನ್ನು ಕಂಡುಕೊಳ್ಳುತ್ತೇವೆ’ ಎಂದು ಸೌರವ್‌ ಗಂಗೂಲಿ ತಿಳಿಸಿದ್ದಾರೆ.

Advertisement

ಆರೋಗ್ಯ ಮೊದಲು, ಬಳಿಕ ಐಪಿಎಲ್‌: ಲಕ್ಷ್ಮಣ್‌ :

ಕೋವಿಡ್ ಕಾರಣದಿಂದ ಐಪಿಎಲ್‌ ಪಂದ್ಯಾವಳಿಯನ್ನು ಮುಂದೂಡಿದ ಬಿಸಿಸಿಐ ನಿರ್ಧಾರಕ್ಕೆ ಭಾರತದ ಮಾಜಿ ಆಟಗಾರ ವಿವಿಎಸ್‌ ಲಕ್ಷ್ಮಣ್‌ ಬೆಂಬಲ ಸೂಚಿಸಿದ್ದಾರೆ. “ಐಪಿಎಲ್‌ನ ಜೈವಿಕ ಸುರಕ್ಷಾ ವಲಯದಲ್ಲಿ ಕೋವಿಡ್ ಪ್ರಕರಣ ಕಂಡುಬಂದದ್ದು ದುರದೃಷ್ಟಕರ. ಇಂಥ ಸಂಕಷ್ಟದ ಸಮಯದಲ್ಲಿ ಜನರ ಆರೋಗ್ಯ ಮುಖ್ಯ. ಐಪಿಎಲ್‌ ಆಮೇಲೆ…’ ಎಂದು ಲಕ್ಷ್ಮಣ್‌ ಹೇಳಿದ್ದಾರೆ.

ಹಸ್ಸಿ, ಬಾಲಾಜಿ ಪ್ರಯಾಣಕ್ಕೆ ಏರ್‌ ಆ್ಯಂಬುಲೆನ್ಸ್‌ :

ಚೆನ್ನೈ: ಕೋವಿಡ್‌ ಸೋಂಕಿಗೆ ಒಳಗಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ಯಾಟಿಂಗ್‌ ಕೋಚ್‌ ಮೈಕಲ್‌ ಹಸ್ಸಿ ಮತ್ತು ಬೌಲಿಂಗ್‌ ಕೋಚ್‌ ಲಕ್ಷ್ಮೀಪತಿ ಬಾಲಾಜಿ ಅವರನ್ನು ಏರ್‌ ಆ್ಯಂಬುಲೆನ್ಸ್‌ ಮೂಲಕ ಹೊಸದಿಲ್ಲಿಯಿಂದ ಚೆನ್ನೈಗೆ ಕರೆತರಲಾಗಿದೆ. ಇಬ್ಬರಿಗೂ ಬಯೋ ಬಬಲ್‌ ಏರಿಯಾದಲ್ಲಿ ಸೋಂಕು ತಗುಲಿತ್ತು. “ಚೆನ್ನೈಯಲ್ಲಿ ಉತ್ತಮ ಮಟ್ಟದ ಚಿಕಿತ್ಸೆ ಲಭಿಸುವುದರಿಂದ ಈ ನಿರ್ಧಾರಕ್ಕೆ ಬರಲಾಯಿತು. ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಹಸ್ಸಿ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಬಂದೊಡನೆ ಭಾರತದಿಂದ ಹೊರಡಲಿದ್ದಾರೆ. ಇವರಿಗಾಗಿ ನಾವು ವಿಶೇಷ ವಿಮಾನ ವ್ಯವಸ್ಥೆ ಮಾಡಲಿದ್ದೇವೆ’ ಎಂದು ಚೆನ್ನೈ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಹೇಳಿದರು.

ಇದೇ ವೇಳೆ ಚೆನ್ನೈ ತಂಡದ ಉಳಿದ ಆಟಗಾರರು ಅವರವರ ಊರು ತಲುಪಿದ್ದಾರೆ. ನಾಯಕ ಧೋನಿ ಅಪರಾಹ್ನ ರಾಂಚಿಗೆ ಬಂದಿಳಿದರು.

ಊರು ತಲುಪಿದ ಆರ್‌ಸಿಬಿ ಆಟಗಾರರು :

ರಾಯಲ್‌ ಚಾಲೆಂಜರ್ ತಂಡದ ಆಟಗಾರರು ಮತ್ತು ಸಹಾಯಕ ಸಿಬಂದಿಯೆಲ್ಲ ತಮ್ಮ ತಮ್ಮ ನಗರವನ್ನು ಸೇರಿಕೊಂಡಿದ್ದಾರೆ. ತಂಡದ ವಿದೇಶಿ ಕ್ರಿಕೆಟಿಗರು ವಿಶೇಷ ವಿಮಾನದಲ್ಲಿ ತವರಿಗೆ ಪಯಣಿಸಿದರು.

ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಮಂಗಳವಾರವೇ ಮುಂಬಯಿ ಸೇರಿಕೊಂಡರು. ಬಿಸಿಸಿಐ ಜತೆ ಮಾತುಕತೆ ನಡೆಸಿದ ಆರ್‌ಸಿಬಿ ತನ್ನ ತಂಡದ ದೇಶಿ ಕ್ರಿಕೆಟಿಗರ ಪ್ರಯಾಣಕ್ಕೆ ವಿಶೇಷ ವಿಮಾನವನ್ನು ವ್ಯವಸ್ಥೆಗೊಳಿಸಿತ್ತು.

 ಐಪಿಎಲ್‌ ಕೃತಜ್ಞತೆ :“ಪ್ರಸಕ್ತ ಐಪಿಎಲ್‌ ಋತುವಿನಲ್ಲಿ ಪಾಲ್ಗೊಂಡು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಎಲ್ಲರ ಸುರಕ್ಷತೆ ಹಾಗೂ ಆರೋಗ್ಯವನ್ನು ನಾವು ಬಯಸುತ್ತೇವೆ’ ಎಂಬುದಾಗಿ ಐಪಿಎಲ್‌ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next