Advertisement

ಚುಟುಕು ಐಪಿಎಲ್‌: ಗಂಗೂಲಿ ಸುಳಿವು

10:09 AM Mar 16, 2020 | Sriram |

ಮುಂಬಯಿ: ಹದಿಮೂರನೇ ಐಪಿಎಲ್‌ ಭವಿಷ್ಯವೇನು ಎಂಬುದು ಶನಿವಾರದ ಬಿಸಿಸಿಐ ಹಾಗೂ ಫ್ರಾಂಚೈಸಿಗಳ ನಡುವಿನ ಸಭೆಯಲ್ಲಿ ಪ್ರಶ್ನೆಯಾಗಿಯೇ ಉಳಿಯಿತು. ಈ ಬಾರಿ ಐಪಿಎಲ್‌ ನಡೆಯುತ್ತದೋ ಇಲ್ಲವೋ ಎಂಬುದು ಕೂಡ ಇತ್ಯರ್ಥಗೊಳ್ಳಲಿಲ್ಲ. ಆದರೆ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, “ಈ ಐಪಿಎಲ್‌ ನಡೆದರೆ ಅದು ಚುಟುಕಾಗಿರುತ್ತದೆ’ ಎಂಬ ಸುಳಿವು ನೀಡಿದರು.

Advertisement

ಮಾ. 29ರಂದು ಆರಂಭವಾಗಬೇಕಿದ್ದ ಈ ಬಾರಿಯ ಐಪಿಎಲ್‌ ಪಂದ್ಯಾವಳಿಯನ್ನು ಬಿಸಿಸಿಐ ಎ. 15ರ ತನಕ ಅಮಾನತಿನಲ್ಲಿರಿಸಿದೆ. ಅನಂತರ ಐಪಿಎಲ್‌ ಸಭೆ ನಡೆದಿದ್ದು, ಇದರಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲ ಫ್ರಾಂಚೈಸಿಗಳ ಮಾಲಕರು, ಐಪಿಎಲ್‌ ಹಾಗೂ ಬಿಸಿಸಿಐ ಅಧಿಕಾರಿಗಳೆಲ್ಲ ಈ ಸಭೆಯಲ್ಲಿ ಭಾಗವಹಿಸಿದ್ದರು. ಐಪಿಎಲ್‌ ಬೇಕು, ಆದರೆ ಕ್ರಿಕೆಟಿಗರ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಮೊದಲ ಆದ್ಯತೆ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.

ಮೇ 31ರ ತನಕ ವಿಸ್ತರಣೆ?
ಬಿಸಿಸಿಐ ನಿರ್ಧಾರದಂತೆ ಐಪಿಎಲ್‌ ಆರಂಭದಲ್ಲಿ 18 ದಿನ ವಿಳಂಬವಾಗಲಿದೆ. ಆದರೆ ಇದು ನಡೆಯುವ ಬಗ್ಗೆ ಯಾವುದೇ ಖಾತರಿ ಇಲ್ಲ. ಎ. 20ರ ತನಕ ಕಾದು ನೋಡಿ ಕೂಟವನ್ನು ನಡೆಸಬಹುದು. ಅನಂತರ ಪೂರ್ಣ ಪ್ರಮಾಣದಲ್ಲಿ ನಡೆಸುವುದು ಅಸಾಧ್ಯವಾಗುತ್ತದೆ. ಹೀಗಾಗಿ ಮೇ 24ರಂದು ಮುಗಿಯುವ ಕೂಟವನ್ನು ಮೇ 31ರ ತನಕ ವಿಸ್ತರಿಸುವ ಪ್ರಸ್ತಾವ ಕೂಡ ಬಿಸಿಸಿಐ ಮುಂದಿತ್ತು. ಆದರೆ ಸಭೆಯಲ್ಲಿ ಈ ಕುರಿತೂ ಖಚಿತ ನಿರ್ಧಾರಕ್ಕೆ ಬರಲಾಗಲಿಲ್ಲ.

“ನಾವು ಎಲ್ಲ ಸಂಗತಿಗಳನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. 18 ದಿನಗಳ ವಿಳಂಬ ವೆಂದರೆ ಆಗ ಪಂದ್ಯಾವಳಿಯನ್ನು ಕಿರಿದು ಗೊಳಿಸಲೇ ಬೇಕಾಗುತ್ತದೆ. ಆದರೆ ಇದು ಹೇಗೆ, ಆಗ ಎಷ್ಟು ಪಂದ್ಯಗಳಿರುತ್ತವೆ… ಎಂಬುದನ್ನೆಲ್ಲ ನನಗೀಗ ಹೇಳಲು ಸಾಧ್ಯವಿಲ್ಲ’ ಎಂದು ಸೌರವ್‌ ಗಂಗೂಲಿ ತಿಳಿಸಿದರು.

“ಎಲ್ಲ ಫ್ರಾಂಚೈಸಿಗಳ ಮಾಲಕರೊಂದಿಗೆ ಮಾತುಕತೆ ನಡೆಸಿ, ಅವರ ಅಭಿಪ್ರಾಯಗಳನ್ನು ಕ್ರೋಡೀಕರಿಸಿದ ಬಳಿಕ ಸ್ಪಷ್ಟ ನಿರ್ಧಾರವೊಂದಕ್ಕೆ ಬರಲಾಗುವುದು. ಇದಕ್ಕೆ ಇನ್ನೂ ಕಾಲಾವಕಾಶವಿದೆ’ ಎಂದು ಗಂಗೂಲಿ ಹೇಳಿದರು.

Advertisement

ದೇಶಿ ಕ್ರಿಕೆಟ್‌ ಕೂಟಗಳಿಗೂ
ಕೊರೊನಾ ಕಂಟಕ
ಕೊರೊನಾ ಭೀತಿಯಿಂದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ರದ್ದುಗೊಳಿಸಿದ ಒಂದೇ ದಿನದಲ್ಲಿ ಪ್ರಸಕ್ತ ಋತುವಿನ ಯಾವುದೇ ದೇಶಿ ಕ್ರಿಕೆಟ್‌ ಪಂದ್ಯಾವಳಿಗಳನ್ನು ಆಡಿಸದಿರಲು ಬಿಸಿಸಿಐ ನಿರ್ಧರಿಸಿದೆ. ಇದರಲ್ಲಿ ರಣಜಿ ಚಾಂಪಿಯನ್‌ ಸೌರಾಷ್ಟ್ರ ಮತ್ತು ಶೇಷ ಭಾರತ ತಂಡಗಳ ನಡುವಿನ ಇರಾನಿ ಕಪ್‌ ಪಂದ್ಯವೂ ಸೇರಿದೆ.

ಶನಿವಾರ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ನಿರ್ಧಾರವನ್ನು ಪ್ರಕಟಿಸಿದರು. ಉಳಿದಂತೆ ವಿಜಿ ಟ್ರೋಫಿ, ವನಿತೆಯರ ಸೀನಿಯರ್‌ ಏಕದಿನ ನಾಕೌಟ್‌ ಹಾಗೂ ಏಕದಿನ ಚಾಲೆಂಜರ್‌ ಸರಣಿಗಳು ಇದರಲ್ಲಿ ಸೇರಿವೆ.

ಮುಂದಿನ ಆದೇಶದ ತನಕ ವನಿತೆಯರ ಜೂನಿಯರ್‌ ಕ್ರಿಕೆಟ್‌ ಟೂರ್ನಿಗಳನ್ನು ಅಮಾನತಿನಲ್ಲಿ ಇಡಲಾಗಿದೆ. ಇದರಲ್ಲಿ ಅಂಡರ್‌-19 ಏಕದಿನ ನಾಕೌಟ್‌, ಅಂಡರ್‌-19 ಟಿ20 ಲೀಗ್‌, ಸೂಪರ್‌ ಲೀಗ್‌ ಮತ್ತು ನಾಕೌಟ್‌, ಅಂಡರ್‌-19 ಟಿ20 ಚಾಲೆಂಜರ್‌ ಟ್ರೋಫಿ, ಅಂಡರ್‌-23 ನಾಕೌಟ್‌ ಮತ್ತು ಏಕದಿನ ಚಾಲೆಂಜರ್‌ ಪಂದ್ಯಾವಳಿಗಳು ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next