ಮುಂಬೈ: ಭಾರತ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲೊಬ್ಬ ಎಂದು ಕರೆಸಿಕೊಳ್ಳಲ್ಪಡುವ ಸೌರವ್ ಗಂಗೂಲಿ ಪಟ್ಟು ಬಿಡದ ವ್ಯಕ್ತಿತ್ವಕ್ಕೆ ಹೆಸರುವಾಸಿ. ಆಟಗಾರರ ಹಿತಕ್ಕಾಗಿ ಎಂತಹ ಹೋರಾಟ ಮಾಡಲು ಅವರು ಸಿದ್ಧವಾಗಿದ್ದರು. ಅಂತಹ ಗಂಗೂಲಿ ಮಾಜಿ ನಾಯಕ ಅನಿಲ್ ಕುಂಬ್ಳೆಯನ್ನು ತಂಡದಲ್ಲಿ ಉಳಿಸಿಕೊಳ್ಳಲು ತಾವು ನಾಯಕತ್ವವನ್ನೇ ಪಣವಾಗಿಟ್ಟ ಘಟನೆಯನ್ನು ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.
2003-04ರ ಆಸೀಸ್ ಪ್ರವಾಸಕ್ಕೆ ಕುಂಬ್ಳೆಯನ್ನು ಆಯ್ಕೆ ಮಾಡಲು ಬಿಸಿಸಿಐ ಸುತಾರಾಂ ಸಿದ್ಧವಿರಲಿಲ್ಲ, ಆದರೆ ಗಂಗೂಲಿ ತನ್ನ ನಾಯಕತ್ವವನ್ನೇ ಪಣವಾಗಿಟ್ಟ ಪರಿಣಾಮ ಮುಂದೆ ಕುಂಬ್ಳೆ ಆಯ್ಕೆಯಾಗಿದ್ದು ಮಾತ್ರ ವಿಶ್ವದಾಖಲೆಯನ್ನೂ ನಿರ್ಮಿಸಿದರು!
ಗಂಗೂಲಿ ಹೇಳಿದ ಕಥೆ: 2003-04ರ ಆಸ್ಟ್ರೇಲಿಯಾ ಪ್ರವಾಸ ಅತ್ಯಂತ ಕಠಿಣವಾಗಿತ್ತು. ಬಲಗೈ ಲೆಗ್‌ಸ್ಪಿನ್ನರ್‌ಗೆ ಆಸ್ಟ್ರೇಲಿಯನ್ನರು ಉತ್ತಮವಾಗಿ ಆಡುತ್ತಾರೆ, ಆದ್ದರಿಂದ ಎಡಗೈ ಲೆಗ್‌ಸ್ಪಿನ್ನರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಿತ್ತು. ಇದನ್ನು ಗಂಗೂಲಿ ವಿರೋಧಿಸಿದರು, ಕುಂಬ್ಳೆಯನ್ನು ತಂಡಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಪಟ್ಟು ಹಿಡಿದರು. ಸತತ 2 ಗಂಟೆಯಾದರೂ ವಿಷಯ ಬಗೆ ಹರಿಯದಾಗ ಅಂದು ಕೋಚ್ ಆಗಿದ್ದ ಜಾನ್ ರೈಟ್ ಮಧ್ಯಪ್ರವೇಶಿಸಿ, ಬಿಟ್ಟುಬಿಡಿ ಅವರು ಕೊಟ್ಟ ತಂಡದೊಂದಿಗೆ ಆಡೋಣ ಎಂದು ಸೌರವ್‌ಗೆ ಹೇಳಿದರು. ಆದರೆ ಈಗ ಕುಂಬ್ಳೆಯನ್ನು ಬಿಟ್ಟುಬಿಟ್ಟರೆ ಅವರು ಮತ್ತೆಂದೂ ಭಾರತ ತಂಡವನ್ನು ಪ್ರವೇಶಿಸುವುದಿಲ್ಲವೆಂದು ಗಂಗೂಲಿಗೆ ಅನಿಸಿತು. ಆದ್ದರಿಂದ ಕುಂಬ್ಳೆಯನ್ನು ತಂಡಕ್ಕೆ ಸೇರಿಸಿಕೊಳ್ಳದಿದ್ದರೆ ತಂಡದ ಪಟ್ಟಿಗೆ ಸಹಿ ಹಾಕಲು ಸಾಧ್ಯವೇ ಇಲ್ಲ ಎಂದು ಅವರು ತಮ್ಮ ಹಠವನ್ನು ಮುಂದುವರಿಸಿದರು.
ಕಡೆಗೂ ಆಯ್ಕೆ ಮಂಡಳಿ ಮಣಿದು ಕುಂಬ್ಳೆಯನ್ನು ತಂಡಕ್ಕೆ ಸೇರಿಸಿಕೊಂಡಿತು. ಅದರೊಂದಿಗೆ ಷರತ್ತನ್ನೂ ವಿಧಿಸಿತು. ಒಂದು ವೇಳೆ ಕುಂಬ್ಳೆ ವಿಫಲರಾದರೆ, ಭಾರತ ತಂಡ ವಿಫಲರಾದರೆ ಮೊದಲನೇ ಬಲಿಪಶು ನೀವೇ ಆಗುತ್ತೀರಿ ಗಂಗೂಲಿಗೆ ಎಚ್ಚರಿಸಿತು. ಇದಕ್ಕೆ ಗಂಗೂಲಿ ತಲೆಯಾಡಿಸಿ ಎದ್ದು ಹೊರಬಂದರು. ಮುಂದೆ ನಡೆದಿದ್ದು ಇತಿಹಾಸ.
ಭಾರತ ಸರಣಿಯನ್ನು 1-1ರಿಂದ ಡ್ರಾ ಮಾಡಿಕೊಂಡು ಐತಿಹಾಸಿಕ ಸಾಧನೆ ಮಾಡಿತು. ಈ ಸರಣಿಯಲ್ಲಿ ಅತಿಹೆಚ್ಚು ಅಂದರೆ 24 ವಿಕೆಟ್ ಪಡೆದ ಬೌಲರ್ ಆಗಿ ಕುಂಬ್ಳೆ ಮೂಡಿಬಂದರು. ಅಷ್ಟು ಮಾತ್ರವಲ್ಲ ಆ ವರ್ಷದಲ್ಲಿ 80 ವಿಕೆಟ್ ಪಡೆದು, ವರ್ಷವೊಂದರಲ್ಲಿ ಗರಿಷ್ಠ ವಿಕೆಟ್ ಪಡೆದ ವಿಶ್ವದಾಖಲೆ ನಿರ್ಮಿಸಿದರು.
ಗಂಗೂಲಿ ಇದೇ ರೀತಿ ಹಲವು ಆಟಗಾರರನ್ನು ತಮ್ಮ ನಾಯಕತ್ವದಲ್ಲಿ ರಕ್ಷಿಸಿದ್ದಾರೆ. ಆ ಆಟಗಾರರೆಲ್ಲರೂ ಅದ್ಭುತ ರೀತಿಯಲ್ಲಿ ಗಂಗೂಲಿಯ ತೀರ್ಮಾನವನ್ನು ಸಮರ್ಥಿಸಿದ್ದಾರೆನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಷ್ಟುಮಾತ್ರವಲ್ಲ ಕುಂಬ್ಳೆಯನ್ನು ಭಾರತ ತಂಡದ ಕೋಚ್ ಆಗಿಸಲು ಕಾರಣವೇ ಗಂಗೂಲಿ ಎನ್ನುವುದು ಇಲ್ಲಿ ಗಮನಾರ್ಹ.