Advertisement

ಸೂಪ್‌ ಸೂಪರ್‌!

12:30 AM Feb 20, 2019 | |

ಊಟಕ್ಕೂ ಮುನ್ನ ಬಡಿಸುವ ಸೂಪ್‌, ಹಸಿವನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಅಷ್ಟೇ ಅಲ್ಲದೆ, ಕ್ಯಾಲೊರಿಗಳನ್ನು ಶೀಘ್ರವಾಗಿ ದಹಿಸಲೂ ನೆರವಾಗುತ್ತದೆ ಅನ್ನುತ್ತಾರೆ ಆಹಾರ ತಜ್ಞರು. ಪ್ರತಿನಿತ್ಯ ಸೇವಿಸುವ ಸೊಪ್ಪು, ತರಕಾರಿಗಳಿಂದಲೇ ರುಚಿಕಟ್ಟಾದ ಸೂಪ್‌ ತಯಾರಿಸಬಹುದು. ಅಂಥ ಕೆಲವು ರೆಸಿಪಿ ಇಲ್ಲಿದೆ. 

Advertisement

1. ಸೋರೆಕಾಯಿ ಸೂಪ್‌
ಬೇಕಾಗುವ ಸಾಮಗ್ರಿ:
ಬೇಯಿಸಿದ ಸೋರೆಕಾಯಿ ಹೋಳು- 2 ಬಟ್ಟಲು, ಬಾದಾಮಿ-5, ಕಾಳುಮೆಣಸಿನ ಪುಡಿ- ಅರ್ಧ ಚಮಚ, ಶುಂಠಿ- ಒಂದು ಇಂಚು, ಹಾಲು- ಅರ್ಧ ಲೋಟ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಬಾದಾಮಿಯನ್ನು ಬಿಸಿನೀರಿನಲ್ಲಿ ನೆನೆಸಿಟ್ಟು ಸಿಪ್ಪೆ ತೆಗೆದು, ಬೆಂದ ಸೋರೆಕಾಯಿ, ಶುಂಠಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಮಿಶ್ರಣವನ್ನು ಒಲೆಯ ಮೇಲೆ ಕುದಿಯಲು ಇಡಿ. ಅದಕ್ಕೆ ಮೆಣಸಿನ ಪುಡಿ, ಉಪ್ಪು, ಬೇಕಾದಷ್ಟು ನೀರು ಸೇರಿಸಿ ಕುದಿಸಿ. ಕುದಿ ಬಂದ ಮೇಲೆ ಹಾಲು ಹಾಕಿ, ಒಲೆ ಆರಿಸಿದರೆ ಸೂಪ್‌ ರೆಡಿ.

2. ಸಿಹಿಗುಂಬಳ ಸೂಪ್‌
ಬೇಕಾಗುವ ಸಾಮಗ್ರಿ:
ಬೇಯಿಸಿದ ಸಿಹಿಗುಂಬಳ- 2 ಕಪ್‌, ಶುಂಠಿ- ಒಂದು ಇಂಚು, ಕಾಳುಮೆಣಸಿನ ಪುಡಿ- ರುಚಿಗೆ ತಕ್ಕಷ್ಟು, ಗರಂ ಮಸಾಲ- ಕಾಲು ಚಮಚ, ಉಪ್ಪು ರುಚಿಗೆ ತಕ್ಕಷ್ಟು. 

ಮಾಡುವ ವಿಧಾನ: ಸಿಹಿಗುಂಬಳಕಾಯಿ ಹಾಗೂ ಶುಂಠಿಯನ್ನು ಒಟ್ಟಿಗೆ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ.ಅದಕ್ಕೆ ತಕ್ಕಷ್ಟು ನೀರು ಸೇರಿಸಿ ಕುದಿಸಿ. ಕುದಿಯುವಾಗ ಮೆಣಸಿನ ಪುಡಿ, ಉಪ್ಪು, ಗರಂ ಮಸಾಲ ಸೇರಿಸಿ.

Advertisement

3. ಕೊತ್ತಂಬರಿ ಸೊಪ್ಪಿನ ಸೂಪ್‌
ಬೇಕಾಗುವ ಸಾಮಗ್ರಿ:
ಹೆಚ್ಚಿದ ಕೊತ್ತಂಬರಿ ಸೊಪ್ಪು- 2 ಕಪ್‌, ಕಾಳುಮೆಣಸಿನ ಪುಡಿ- ಒಂದು ಚಮಚ, ಶುಂಠಿ- ಒಂದು ಇಂಚು, ಕಾರ್ನ್ಫ್ಲೋರ್‌ (ಜೋಳದ ಹಿಟ್ಟು)- ಒಂದು ಚಮಚ, ತೆಂಗಿನ ಹಾಲು/ ಹಾಲು- ಅರ್ಧ ಕಪ್‌, ಉಪ್ಪು ರುಚಿಗೆ

ಮಾಡುವ ವಿಧಾನ: ಕೊತ್ತಂಬರಿ ಸೊಪ್ಪು ಹಾಗೂ ಶುಂಠಿಯನ್ನು ಒಟ್ಟಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ, ಸೋಸಿಕೊಳ್ಳಿ. ಸೋಸಿದ್ದನ್ನು ಒಲೆಯ ಮೇಲೆ ಕುದಿಯಲು ಇಡಿ. ನೀರಲ್ಲಿ  ಕದಡಿದ ಕಾರ್ನ್ ಫ್ಲೋರ್‌, ಮೆಣಸಿನ ಪುಡಿ, ಉಪ್ಪು, ಗರಂ ಮಸಾಲ ಪುಡಿ  ಹಾಕಿ ಕುದಿಸಿ, ತೆಂಗಿನ ಹಾಲು ಹಾಕಿ ಒಲೆ ಆರಿಸಿ.

4. ನುಗ್ಗೆಕಾಯಿ ಸೂಪ್‌
ಬೇಕಾಗುವ ಸಾಮಗ್ರಿ:
ಚೆನ್ನಾಗಿ ತಿರುಳು ಇರುವ ನುಗ್ಗೆಕಾಯಿ- 2, ಕಾಳು ಮೆಣಸಿನ ಪುಡಿ- ಅರ್ಧ ಚಮಚ, ಉಪ್ಪು ರುಚಿಗೆ, ಕಾರ್ನ್ ಫ್ಲೋರ್‌- ಅರ್ಧ ಚಮಚ

ಮಾಡುವ ವಿಧಾನ: ನುಗ್ಗೆಕಾಯಿಯನ್ನು ತುಂಡು ಮಾಡಿ, ಬೇಯಿಸಿ. ಬೇಯಿಸಿದ ನುಗ್ಗೆಕಾಯಿಯನ್ನು ಭಾಗ ಮಾಡಿ, ತಿರುಳನ್ನು ಚಮಚದಿಂದ  ಕೆರೆದು ತೆಗೆದು, ಅದಕ್ಕೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ರುಬ್ಬಿಕೊಂಡ ಮಿಶ್ರಣಕ್ಕೆ ಸ್ವಲ್ಪ ನೀರು, ಮೆಣಸಿನಪುಡಿ, ಉಪ್ಪು, ನೀರಲ್ಲಿ ಕದಡಿದ ಕಾರ್ನ್ ಫ್ಲೋರ್‌ ಹಾಕಿ ಕುದಿಸಿದರೆ ರುಚಿಕರವಾದ ಸೂಪ್‌ ರೆಡಿ. 

ಶಾರದಾ ಮೂರ್ತಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next