Advertisement

ಸದ್ದು ಮಾಡಲು ಸಿದ್ಧವಾಗುತ್ತಿರುವ ಸಾರಂಗ

11:34 AM Feb 11, 2017 | Team Udayavani |

ಬೆಂಗಳೂರು: ಲೋಹದ ಹಕ್ಕಿಗಳ ಮೇಲೆ ಬೆಕ್ಕಿನ ನಡಿಗೆಯ ಸಾಹಸ, ಬಾನಂಗಳದಲ್ಲಿ ರಂಗೋಲಿ ಬಿಡಿಸಲಿರುವ “ರೆಡ್‌ ಆ್ಯರೋಸ್‌’, ಸದ್ದುಮಾಡಲಿರುವ ಸಾರಂಗಗಳು…  ಇಂತಹ ಹತ್ತು ಹಲವು ಮೈನವಿರೇಳಿಸುವ ಪ್ರದರ್ಶನಗಳಿಗೆ ಏಷ್ಯಾದ ಅತೀ ದೊಡ್ಡ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ-2017′ ಸಾಕ್ಷಿಯಾಗಲಿದೆ. ಯಲಹಂಕದ ವಾಯುನೆಲೆಯಲ್ಲಿ ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ. 

Advertisement

ಭಾರತೀಯ ರಕ್ಷಣಾ ಇಲಾಖೆಯು ಭಾರತೀಯ ಕೈಗಾರಿಕೆಗಳ ಒಕ್ಕೂಟ, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟ (ಫಿಕ್ಕಿ) ಮತ್ತಿತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಫೆ.14ರಿಂದ 18ರವರೆಗೆ ನಡೆಯಲಿರುವ 11ನೇ ವೈಮಾನಿಕ ಪ್ರದರ್ಶನದಲ್ಲಿ ಸ್ವಿಡನ್‌ನ ಸ್ಕ್ಯಾಂಡಿನೇವಿಯನ್‌ ಏರ್‌ ಶೋ ತಂಡ, ಇಂಗ್ಲೆಂಡ್‌ನ‌ ರೆಡ್‌ ಆ್ಯರೋಸ್‌, ಭಾರತೀಯ ವಾಯುಸೇನೆಯ ಸಾರಂಗ ಮತ್ತು ಸೂರ್ಯಕಿರಣ್‌ ತಂಡಗಳ ಪ್ರದರ್ಶನಗಳು ಪ್ರೇಕ್ಷಕರನ್ನು ಮೋಡಿ ಮಾಡಲಿವೆ. 

ಈಗಾಗಲೇ ವಾಯುನೆಲೆಯಲ್ಲಿ ವಿಮಾನಗಳು ತಾಲೀಮು ನಡೆಸಿವೆ. ಈ ಬಾರಿ ವೈಮಾನಿಕ ಪ್ರದರ್ಶನದ ವ್ಯಾಪ್ತಿಯು 24,403 ಚದರ ಕಿ.ಮೀ.ನಿಂದ 27,678 ಚದರ ಕಿ.ಮೀ.ಗೆ ವಿಸ್ತಾರಗೊಂಡಿದ್ದು, 2 ಲಕ್ಷ ಜನ ಭೇಟಿ ನೀಡುವ ಸಾಧ್ಯತೆ ಇದೆ. ಸುಮಾರು 72 ವಿಮಾನಗಳು ಈ ಬಾರಿಯ ಏರೋ ಇಂಡಿಯಾ ಶೋನಲ್ಲಿ ಪ್ರದರ್ಶನಗೊಳ್ಳಲಿದ್ದು, ಅಮೆರಿಕ, ಇಂಗ್ಲೆಂಡ್‌, ಇಸ್ರೇಲ್‌, ಜರ್ಮನಿ, ಬೆಲ್ಜಿಯಂ, ಸಿಂಗಪುರ, ಸ್ವೀಡನ್‌ ಸೇರಿದಂತೆ ಹತ್ತಾರು ದೇಶಗಳ ವಿವಿಧ ಕಂಪೆನಿಗಳ 51 ರಾಷ್ಟ್ರಗಳು ಮಳಿಗೆಗಳನ್ನು ಹಾಕಲಿದ್ದಾರೆ. ಈ ಪೈಕಿ ಈಗಾಗಲೇ 30 ರಾಷ್ಟ್ರಗಳು ದೃಢಪಡಿಸಿವೆ ಎಂದು ಪತ್ರಿಕಾ ಮಂಡಳಿ (ರಕ್ಷಣಾ ವಿಭಾಗ)ಯ ಪ್ರಕಟಣೆ ತಿಳಿಸಿದೆ. 

549 ಕಂಪನಿಗಳು ಭಾಗಿ: ಬ್ರೆಜಿಲ್‌, ಜಪಾನ್‌, ಮಲೇಷಿಯಾ, ಇಂಡೋನೇಷಿಯಾ, ಫ್ರಾನ್ಸ್‌ ಒಳಗೊಂಡಂತೆ ನಾನಾ ದೇಶಗಳ ರಕ್ಷಣಾ ಸಚಿವರು, ಸೇವಾ ಮುಖ್ಯಸ್ಥರು ಸೇರಿದಂತೆ 65 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 270 ದೇಶೀಯ ಮತ್ತು 279 ವಿದೇಶಿ ಕಂಪನಿಗಳು ಸೇರಿದಂತೆ 549 ಕಂಪನಿಗಳು ಭಾಗವಹಿಸಲಿವೆ. ಇಂಡೊ-ಸ್ವಿಸ್‌ ಬ್ಯುಸಿನೆಸ್‌ ಸಭೆ, ಇಂಗ್ಲೆಂಡ್‌, ಪಾಲಿಷ್‌ ಜತೆ ಬಿ2ಬಿ ಸಭೆಗಳು,

“ಭಾರತೀಯ ವೈಮಾನಿಕ ಕ್ಷೇತ್ರ ಮತ್ತು ಹೂಡಿಕೆದಾರರು’, “ಮೇಕ್‌ ಇನ್‌ ಇಂಡಿಯಾದಲ್ಲಿ ವೈಮಾಂತರಿಕ್ಷ ಕ್ಷೇತ್ರವು ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಉತ್ತೇಜನ ಆಗಬಹುದೆ?’ ಎಂಬುದು ಸೇರಿದಂತೆ ಹಲವು ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಕೇಂದ್ರ ಸಚಿವರಾದ ಮನೋಹರ್‌ ಪರಿಕ್ಕರ್‌, ಅಶೋಕ ಗಜಪತಿರಾಜು, ವೈ.ಎಸ್‌. ಚೌಧರಿ, ರಾಜೀವ್‌ ಪ್ರತಾಪ್‌ ರೂಡಿ, ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಮತ್ತಿತರ ಗಣ್ಯರು ಕೂಡ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.

Advertisement

“ಏರೋ ಇಂಡಿಯಾ ಶೋ’ ನೇರ ಪ್ರಸಾರ
ನಗರದ ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ ಶೋ-2017’ರ ಉದ್ಘಾಟನಾ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರ ಆಗಲಿದೆ. 14ರಂದು ಬೆಳಿಗ್ಗೆ 9.15ರಿಂದ 11.20ರವರೆಗೆ ಉದ್ಘಾಟನೆ ಮತ್ತು ನಂತರ ನಡೆಯುವ ಪ್ರದರ್ಶನದ ನೇರ ಪ್ರಸಾರ ದೂರದರ್ಶನದಲ್ಲಿ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next