Advertisement

ಎಲ್ಲೆಡೆ ಕನ್ನಡದ ಕೂಗು, ಕನ್ನಡಾಂಬೆಯ ಹಾಡು..

12:41 PM Nov 03, 2019 | Lakshmi GovindaRaju |

ರಾಜ್ಯದೆಲ್ಲೆಡೆ ಶುಕ್ರವಾರ ಸಂಭ್ರಮ, ಸಡಗರ, ಉತ್ಸಾಹದಿಂದ 64ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದರೆ, ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು/ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿ, ಕನ್ನಡ ನಾಡು, ನುಡಿಯ ಬೆಳವಣಿಗೆಗೆ ಕರೆ ಕೊಟ್ಟರು. ಸಂಘ-ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡಪರ ಸಂಘಟನೆಗಳಿಂದ ರಾಜ್ಯೋತ್ಸವ ಆಚರಿಸಲಾಯಿತು. ಇದೇ ವೇಳೆ, ನಾಡಹಬ್ಬದಂದು ಕನ್ನಡ ಧ್ವಜಾರೋಹಣಕ್ಕೆ ಪ್ರಾಧಾನ್ಯತೆ ನೀಡದೆ, ರಾಷ್ಟ್ರ ಧ್ವಜಾರೋಹಣಕ್ಕೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ, ಕೆಲವೆಡೆ ಪ್ರತಿಭಟನೆಗಳು ನಡೆದ ಬಗ್ಗೆಯೂ ವರದಿಯಾಗಿದೆ.

Advertisement

ಕನ್ನಡದ ನೆಲದಲ್ಲಿ ಕನ್ನಡ ಭಾಷೆಯೇ “ಅಲ್ಪಸಂಖ್ಯಾತ’
ಬೆಂಗಳೂರು: ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿ ಕನ್ನಡದ ನೆಲದಲ್ಲಿ ಕನ್ನಡ ಭಾಷೆ “ಅಲ್ಪಸಂಖ್ಯಾತ’ ಆಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. 64ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕನ್ನಡ ಮರೆತರೆ ಸಂಸ್ಕೃತಿ ಮರೆತಂತೆ. ಕನ್ನಡ ಹೃದಯ ಮತ್ತು ಬುದ್ಧಿಯ ಭಾಷೆ ಆಗಿದ್ದರೆ, ಇಂಗ್ಲಿಷ್‌ ಮತ್ತಿತರ ಭಾಷೆಗಳು ಕೇವಲ ಬುದ್ಧಿಯ ಭಾಷೆಗಳಾಗಿವೆ. ಆದರೆ, ಇಂಗ್ಲೀಷ್‌ ಭಾಷೆಯ ವ್ಯಾಮೋಹ ಇಂದು ಬಹುತೇಕರಿಗೆ ಆವರಿಸಿದೆ. ವಿಶೇಷವಾಗಿ “ಕಾಸ್ಮೋಪಾಲಿಟನ್‌ ಸಿಟಿ’ ಎಂದು ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಅಲ್ಪಸಂಖ್ಯಾತವಾಗುತ್ತಿರುವುದು ಆತಂಕದ ವಿಷಯ. ಆದ್ದರಿಂದ ಕನ್ನಡ ಭಾಷೆಯ ಜೊತೆಗೆ ಕಡ್ಡಾಯ ಮಾಧ್ಯಮ ಭಾಷೆಯಾಗಬೇಕು ಎಂದು ಪ್ರತಿಪಾದಿಸಿದರು.

ಇಂಗ್ಲಿಷ್‌ ಸಂಬಳದ ಭಾಷೆ, ಕನ್ನಡ ಉಂಬಳದ ಭಾಷೆ ಎಂಬ ಮಾತು ಇತ್ತೀಚಿಗೆ ಬಹಳ ಪ್ರಚಲಿತದಲ್ಲಿದೆ. ಆದರೆ, ಕನ್ನಡ ಸಂಬಳಕ್ಕೂ ಆಗಬೇಕು, ಉಂಬಳಕ್ಕೂ ಆಗಬೇಕು ಎಂಬುದು ನನ್ನ ಅಪೇಕ್ಷೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕನ್ನಡಿಗರಿಗೆ ಹೆಚ್ಚು ಉದ್ಯೋಗ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಆದ್ಯತೆ. ಕನ್ನಡ ನಾಡು-ನುಡಿ, ಜಲ-ಜನ ರಕ್ಷಣೆಗೆ ಸರ್ಕಾರ ಸದಾ ಬದ್ಧ ಮತ್ತು ಸಿದ್ಧ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ನ್ಯಾ.ಎನ್‌.ಕುಮಾರ್‌, ಕನ್ನಡ ಉಳಿಸಲು ಕೇವಲ ಸರ್ಕಾರವನ್ನು ನೆಚ್ಚಿಕೊಂಡರೆ ಸಾಲದು. ಪ್ರತಿಯೊಬ್ಬ ಕನ್ನಡಿಗ ಸರ್ಕಾರದ ಜತೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿಸೂರ್ಯ, ಶಾಸಕ ಉದಯ ಗರುಡಾಚಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್‌.ಆರ್‌. ಜನ್ನು, ನಿರ್ದೇಶಕ ಎಸ್‌.ರಂಗಪ್ಪ ಮತ್ತಿತರರು ಇದ್ದರು.

Advertisement

62 ಮಂದಿಗೆ ಪ್ರಶಸ್ತಿ ಪ್ರದಾನ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ 64 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೇವಲ 62 ಮಂದಿಯನ್ನು ಮಾತ್ರ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಡಾ.ಕೆ.ಚಿದಾನಂದಗೌಡರು ಸದ್ಯ ವಿದೇಶದಲ್ಲಿರುವುದರಿಂದ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ಅದೇ ರೀತಿ ಜನಪದ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದ ಉಸ್ಮಾನ್‌ ಸಾಬ್‌ ಖಾದರ್‌ ಸಾಬ್‌ ಅವರಿಗೆ 43 ವರ್ಷ ವಯಸ್ಸು ಇದ್ದಿದ್ದರಿಂದ ಅವರೇ ಪ್ರಶಸ್ತಿ ಬೇಡವೆಂದು ತಿಳಿಸಿದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಸ್ಪಷ್ಟನೆ ನೀಡಿದರು.

ಕರ್ನಾಟಕದ ಕೊಡುಗೆ ಅಪಾರ: ಪ್ರಧಾನಿ
ನವದೆಹಲಿ: ರಾಷ್ಟ್ರದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಭ ಹಾರೈಸಿ ಪ್ರಧಾನಿಯವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ. “ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಹರ್ಯಾಣ, ಕೇರಳ, ಮಧ್ಯಪ್ರದೇಶ ರಾಜ್ಯೋತ್ಸವ ದಿನ ಪ್ರಯುಕ್ತವೂ ಅವರು ಶುಭ ಹಾರೈಸಿ ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರಪತಿ ಹಾರೈಕೆ: ಇದೇ ವೇಳೆ, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಕೂಡ ಕರ್ನಾಟಕದ ಜನತೆಗೆ ಶುಭ ಹಾರೈಸಿ ಟ್ವೀಟ್‌ ಮಾಡಿದ್ದಾರೆ. “ಕರ್ನಾಟಕ ರಾಜ್ಯೋತ್ಸವದ ಈ ದಿನದಂದು, ಕರ್ನಾಟಕದ ಜನತೆಗೆ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ ಕರ್ನಾಟಕ ರಾಜ್ಯ ಹಾಗೂ ನಮ್ಮ ದೇಶ ಇನ್ನೂ ಉನ್ನತ ಮಟ್ಟಕ್ಕೇರಲಿ’ ಎಂದು ರಾಷ್ಟ್ರಪತಿ ಬರೆದುಕೊಂಡಿದ್ದಾರೆ.

ನಾಡಧ್ವಜ ಹಾರಿಸದ್ದಕ್ಕೆ ಪ್ರಶಸ್ತಿ ತಿರಸ್ಕಾರ
ಶೃಂಗೇರಿ: ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಾರಿಸದಿರುವುದನ್ನು ವಿರೋಧಿ ಸಿ ವಿದ್ಯಾರ್ಥಿಯ ತಂದೆ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದ ಪ್ರಸಂಗ ಶೃಂಗೇರಿಯಲ್ಲಿ ನಡೆದಿದೆ. ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಶುಕ್ರವಾರ ಪಪಂ ಎದುರಿನ ಗೌರಿಶಂಕರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ ಬಿಜಿಎಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸಂಕೀರ್ತ್‌ನನ್ನು ಅಭಿನಂದಿಸಲು ಆಹ್ವಾನಿಸಲಾಗಿತ್ತು. ಈತ ಸದ್ಯ ಕಾರ್ಕಳ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಈತನ ಬದಲು ವಿದ್ಯಾರ್ಥಿ ತಂದೆ ನವೀನ್‌ ಕರುವಾನೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಇತರ ವಿದ್ಯಾರ್ಥಿಗಳೊಂದಿಗೆ ಅಭಿನಂದನೆ ಸ್ವೀಕರಿಸಲು ವೇದಿಕೆಗೆ ಬರುವಂತೆ ಕಾರ್ಯಕ್ರಮ ಆಯೋಜಕರು ಆಹ್ವಾನಿಸಿದ್ದಾರೆ. ಆಗ ನವೀನ್‌ ಕರುವಾನೆ ಸಭೆಯಲ್ಲಿ ಎದ್ದು ನಿಂತು, “ಕನ್ನಡ ರಾಜ್ಯೋತ್ಸವ ದಿನದಂದೂ ಸಹ ಮಗನ ಹೆಸರನ್ನು ತಪ್ಪಾಗಿ ಸಂಕೇತ್‌ ಎಂದು ಉಚ್ಚರಿಸಿದ್ದೀರಿ, ಬೇಸರವಿಲ್ಲ. ಅಭಿನಂದನೆಗೆ ಆಯ್ಕೆ ಮಾಡಿದ ಸಮಿತಿಗೂ ಹಾಗೂ ಹೆಚ್ಚು ಅಂಕ ಗಳಿಸಲು ಶ್ರಮಿಸಿದ ಶಿಕ್ಷಕರಿಗೂ ಅಭಿನಂದಿಸುತ್ತೇನೆ. ಆದರೆ ಇಲ್ಲಿ ನಾಡಧ್ವಜ ಹಾರಿಸಿಲ್ಲ. ರಾಜ್ಯದ 20 ಜಿಲ್ಲೆಯಲ್ಲಿ ರಾಜ್ಯೋತ್ಸವದ ದಿನವೂ ಕನ್ನಡ ಬಾವುಟ ಹಾರಿಸಲು ಬಿಡದಿರುವುದು ಸರಿಯಲ್ಲ. ಹೀಗಾಗಿ ಅಭಿನಂದನೆ ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ’ ಎಂದು ಹೇಳಿ ವೇದಿಕೆಗೆ ತೆರಳದೆ ಪ್ರಶಸ್ತಿ ನಿರಾಕರಿಸಿದರು.

ಚಪ್ಪಲಿ ಧರಿಸಿ ಸವದಿ ಧ್ವಜಾರೋಹಣ
ಕೊಪ್ಪಳ: ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ನಡೆದ ರಾಷ್ಟ್ರಧ್ವಜಾರೋಹಣ ವೇಳೆ ಡಿಸಿಎಂ ಲಕ್ಷ್ಮಣ ಸವದಿಯವರು ಚಪ್ಪಲಿ ಧರಿಸಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ನಿಯಮ ಹಾಗೂ ಸಂಪ್ರದಾಯವಿದ್ದರೂ ಚಪ್ಪಲಿ ಧರಿಸಿಯೇ ನೆರವೇರಿಸಿ, ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಂಸ್ಕೃತಿ ಮತ್ತು ಭಾಷೆ ಒಂದನ್ನೊಂದು ಬಿಟ್ಟು ಇರಲಾರವು. ಭಾಷೆ ಕಳೆದುಕೊಂಡರೆ ಸಂಸ್ಕೃತಿ ಕಳೆದುಕೊಂಡಂತೆ. ಇವೆರಡನ್ನೂ ಉಳಿಸಿಕೊಳ್ಳುವುದು ವರ್ತಮಾನದ ಸವಾಲು. ಈ ಸವಾಲನ್ನು ಪ್ರತಿಯೊಬ್ಬ ಕನ್ನಡಿಗನೂ ಸ್ವೀಕರಿಸಲೇಬೇಕು.
-ಸಿ.ಟಿ.ರವಿ ಸಚಿವ

ಉಡುಪಿಯಲ್ಲಿ ಕನ್ನಡ ಧ್ವಜ ಹಾರಿಸಿಲ್ಲ. ಮುಂದಿನ ವರ್ಷದಿಂದ ಎರಡೂ ಬಾವುಟ ಹಾರಿಸಲು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದೇನೆ. ಇದರ ಬಗ್ಗೆ ರಾಜ್ಯ ಸರಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಧ್ವಜ ಬದಲಾವಣೆ ವಿಷಯವಾಗಿ ಒಣ ಗುದ್ದಾಟಕ್ಕೆ ಹೋಗಬೇಡಿ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ಸರ್ಕಾರ ಬದಲಾದಂತೆ ಕನ್ನಡ ಧ್ವಜದ ಗೊಂದಲ ಸೃಷ್ಟಿ ಮಾಡುತ್ತಿವೆ. ಈ ಹಿಂದೆ ಸಿದ್ದರಾಮಯ್ಯ ರಾಜ್ಯಧ್ವಜ ವಿಚಾರವಾಗಿ ಕೆಲವೊಂದು ನಿರ್ಣಯಕ್ಕೆ ಮುಂದಾಗಿದ್ದಾಗ, ಇಂತಹ ಕೆಲಸ ಮಾಡಬೇಡಿ ಎಂದು ಹೇಳಿದ್ದೆ. ಇದೀಗ ಬಿಜೆಪಿ ಸರ್ಕಾರ ಮತ್ತೂಂದು ರೀತಿ ನಿರ್ಣಯಕ್ಕೆ ಮುಂದಾಗಿದೆ. ಸರ್ಕಾರಗಳು ಬದಲಾದಾಗ ಧ್ವಜ ವಿಚಾರದಲ್ಲಿ ಒಂದೊಂದು ರೀತಿ ಮಾಡುವುದು ಸರಿಯಲ್ಲ.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next