ಬೆಂಗಳೂರು: ರಾಜ್ಯ ಸರ್ಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮೈಸೂರು ಮೂಲದ ಅತಿಥಿ ಉಪನ್ಯಾಸಕಿ ಸೌಮ್ಯಳನ್ನು ಮಲ್ಲೇಶ್ವರ ಪೊಲೀಸರು 13 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಸೌಮ್ಯಳನ್ನು ಮಂಗಳವಾರ 1ನೇ ಎಸಿಎಂಎಂಎ ನ್ಯಾಯಾಲಯಕ್ಕೆ ಹಾಜರಿಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯ 13 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.
ಸೌಮ್ಯಳ ಹಿನ್ನೆಲೆಯ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಿದ್ದು, ಪ್ರಶ್ನೆ ಪತ್ರಿಕೆ ಕಳುಹಿಸಿದ್ದು ಯಾರು? ನಿಮ್ಮ ಮೊಬೈಲ್‌ನಿಂದ ಯಾರಿಗೆಲ್ಲ ಕಳುಹಿಸಿದ್ದೀರಿ? ಜತೆಗೆ ಯಾವ ಕಾರಣಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ. ಹಣ ಅಥವಾ ಬೇರೆ ಯಾವ ಕಾರಣಕ್ಕೆ ಕೃತ್ಯ ಎಸಗಿದ್ದಿರಿ? ಎಂಬೆಲ್ಲ ಪ್ರಶ್ನೆಗಳ ಬಗ್ಗೆ ವಿಚಾರಣೆ ನಡೆಸಲು ಆಡುಗೋಡಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್)ಆಕೆಯನ್ನು ಕರೆದೊಯ್ಯಲಾಗಿದೆ.
ಬಂಧಿತೆ ಸೌಮ್ಯ ಮುಂದೆ ಐಎಎಸ್ ವ್ಯಾಸಂಗ ಮಾಡುವ ಕನಸು ಕಂಡಿದ್ದರು ಎಂದು ಹೇಳಲಾಗಿದೆ. ಆಕೆಯ ಮನೆ ಶೋಧಿಸಿದಾಗ ಕೊಠಡಿ ಗ್ರಂಥಾಲಯ ಮಾದರಿ ವಿನ್ಯಾಸ ಮಾಡಿಕೊಂಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜ್ಞಾನ ಹೊಂದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಭವಿಷ್ಯದಲ್ಲಿ ಐಎಎಸ್ ವ್ಯಾಸಂಗ ಮಾಡುವ ಆಸೆ ಇತ್ತು ಎಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಸೌಮ್ಯಳ ಆಪ್ತರು ಹಾಗೂ ಆಕೆಯ ಮೊಬೈಲ್‌ನಿಂದ ಯಾರಿಗೆಲ್ಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೋ ಎಲ್ಲರಿಗೂ ನೋಟಿಸ್ ಕೊಡಲಾಗಿದೆ ಎಂದು ಪೊಲೀಸರು ಹೇಳಿದರು.