Advertisement

ಭಾವಪೂರ್ಣ ವಿದಾಯ

11:52 AM Nov 14, 2018 | |

ಬೆಂಗಳೂರು: ಅನಂತ ಕುಮಾರ್‌ ಅವರ ಪಾರ್ಥಿವ ಶರೀರ ಚಾಮರಾಜಪೇಟೆಯ ಹಿಂದೂ ರುದ್ರಭೂಮಿ ಪ್ರವೇಶಿಸುತ್ತಿದ್ದಂತೆ ಕಾರ್ಯಕರ್ತರಿಂದ “ಅನಂತ ಕುಮಾರ್‌ ಅಮರ್‌ ರಹೇ’ ಎಂಬ ಘೋಷಣೆ ಒಂದು ಕಡೆ, ಮತ್ತೂಂದೆಡೆ ನೀರವ ಮೌನ.

Advertisement

ನ್ಯಾಷನಲ್‌ ಕಾಲೇಜು ಮೈದಾನದಿಂದ ಮೆರವಣಿಗೆಯಲ್ಲಿ ನೇರವಾಗಿ ಪಾರ್ಥಿವ ಶರೀರವನ್ನು ಹಿಂದೂ ರುದ್ರಭೂಮಿಗೆ ತರಲಾಯಿತು. ಅಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಮಾಜಿ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಸಹತ ಕೇಂದ್ರ ಸಚಿವರು, ರಾಜ್ಯದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌ ಮೊದಲಾದವರು ಪಾರ್ಥಿವ ಶರೀರಕ್ಕೆ ಅಂತಿಮವಾಗಿ ಪುಷ್ಪ ನಮನ ಸಲ್ಲಿಸಿದರು.

ಪಾರ್ಥಿವ ಶರೀರ ರುದ್ರಭೂಮಿ ಪ್ರವೇಶಕ್ಕೂ ಮೊದಲೇ ಪುರೋಹಿತರು ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಬ್ರಾಹ್ಮಣ ವೈದಿಕ ವಿಧಿವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿದ್ದು, ಅನಂತಕುಮಾರ್‌ ಅವರ ಸಹೋದರ ನಂದಕುಮಾರ್‌ ಅಂತ್ಯಕ್ರಿಯೆ ನೆರವೇರಿಸಿದರು.

ಇದಕ್ಕೂ ಮುನ್ನ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಸೈನ್ಯದ ಮುಖ್ಯಸ್ಥರು ಅನಂತಕುಮಾರ್‌ ಅವರ ಕುಟುಂಬದ ಸದಸ್ಯರಿಗೆ ನೀಡಿದರು. ಸರ್ಕಾರ ಮತ್ತು ಸೈನ್ಯದಿಂದ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ವರ್ಗಾಯಿಸಿದ ನಂತರ ಧಾರ್ಮಿಕ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ನೆರವೇರಿಸಿ, ಸರಿಸುಮಾರು ಮಧ್ಯಾಹ್ನ 2.50ರ ವೇಳೆಗೆ ಅಗ್ನಿ ಸ್ಪರ್ಶ ಮಾಡಲಾಯಿತು.

ಪಾರ್ಥಿವ ಶರೀರ ರುದ್ರಭೂಮಿ ಪ್ರವೇಶಿಸುವ ಮೊದಲೆ ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ಅಂತ್ಯಕ್ರಿಯೆ ವೀಕ್ಷಿಸಲು ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿತ್ತು. ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರದ ಪ್ರಕ್ರಿಯೆಗಳು ಆರಂಭವಾಗಿ, ಅಗ್ನಿ ಸ್ಪರ್ಶದವರೆಗೂ ಸ್ಮಶಾನದ ಒಳಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಅನಂತಕುಮಾರ್‌ ಅವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಅನಂತಕುಮಾರ್‌ ಅಮರ್‌ ರಹೇ, ವಂದೇ ಮಾತರಂ ಇತ್ಯಾದಿ ಘೋಷಣೆ ಮುಗಿಲು ಮುಟ್ಟಿತ್ತು.

Advertisement

ಭಾವಪೂರ್ಣ ಮೆರವಣಿಗೆ: ಅನಂತಕುಮಾರ್‌ ಅವರ ಅಂತಿಮ ಯಾತ್ರೆಯ ಹೊಣೆ ಸೇನಾಪಡೆಗೆ ವಹಿಸಲಾಗಿತ್ತು. ಮಂಗಳವಾರ ಬೆಳಗ್ಗೆ 7.45ರ ಸುಮಾರಿಗೆ ಭೂ ಸೇನೆ, ವಾಯು ಸೇನೆ ಮತ್ತು ನೌಕದಳದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಬಸವನಗುಡಿಯಲ್ಲಿರುವ ಸಚಿವರ ಮನೆಯಿಂದ ರಾಣೋಜಿ ರಾವ್‌ ರಸ್ತೆ, ಎಚ್‌.ಬಿ.ಸಮಾಜ ರಸ್ತೆ, ಲಾಲ್‌ಬಾಗ್‌ ಪಶ್ಚಿಮ ದ್ವಾರ ರಸ್ತೆ ಮಾರ್ಗವಾಗಿ ಮಿನರ್ವ ಸರ್ಕಲ್‌, ಜೆ.ಸಿ. ರಸ್ತೆ, ಭಾರತ್‌ ಜಂಕ್ಷನ್‌ ಮೂಲಕ ಸಂಪಿಗೆ ರಸ್ತೆ ಮಾರ್ಗವಾಗಿ ಬೆಳಗ್ಗೆ 9 ಗಂಟೆ ಸುಮಾರಿಗೆ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ತರಲಾಯಿತು.

ಬಳಿಕ ಸುಮಾರು ಒಂದೂವರೆ ತಾಸು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ಸಂಪಿಗೆ ರಸ್ತೆ ಮಾರ್ಗವಾಗಿ ಲಾಲ್‌ಬಾಗ್‌ ಪಶ್ಚಿಮ ದ್ವಾರ, ಶೇಷ ಮಹಲ್‌ ಜಂಕ್ಷನ್‌-ಮೇಲು ಸೇತುವೆ ಮೂಲಕ ಶಂಕರಮಠ, ವಾಣಿವಿಲಾಸ ಜಂಕ್ಷನ್‌ ಮಾರ್ಗವಾಗಿ 11 ಗಂಟೆ ಸುಮಾರಿಗೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮತ್ತೂಮ್ಮೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ಅಪರಾಹ್ನ 12.30ರ ಸುಮಾರಿಗೆ ನ್ಯಾಷನಲ್‌ ಕಾಲೇಜು ಮೈದಾನದಿಂದ ಪಿಎಂಕೆ ರಸ್ತೆ ಜಂಕ್ಷನ್‌ ಮಾರ್ಗವಾಗಿ ರಾಮಕೃಷ್ಣ ಆಶ್ರಮ ಬಿ.ಟಿ.ರಸ್ತೆ ಚಾಮರಾಜಪೇಟೆ 5ನೇ ಮುಖ್ಯ ರಸ್ತೆ ಜಂಕ್ಷನ್‌,ಟಿ.ಆರ್‌.ಮಿಲ್‌ ರಸ್ತೆ ಜಂಕ್ಷನ್‌ ವಿಠಲನಗರ ಜಂಕ್ಷನ್‌ ಮಾರ್ಗವಾಗಿ ಚಾಮರಾಜಪೇಟೆಯ ಹಿಂದೂ ರುದ್ರಭೂಮಿವರೆಗೆ ಮೆರವಣಿಗೆ ಮಾಡಲಾಯಿತು. ರಸ್ತೆಯುದಕ್ಕೂ ಸೇನಾ ಬ್ಯಾಂಡ್‌ ಬಾರಿಸುವ ಮೂಲಕ ಅಂತಿಮ ಗೌರವ ಸೂಚಿಸಲಾಯಿತು.

ಇದಕ್ಕೂ ಮೊದಲು ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯ ಸುತ್ತ-ಮುತ್ತ ಭಾರೀ ಪೊಲೀಸ್‌ ಬಂದೋ ಬಸ್ತ್ ನಿಯೋಜಿಸಲಾಗಿತ್ತು. ಮಧ್ಯಾಹ್ನ 1 ಗಂಟೆಯಿಂದಲೇ ಟಿ.ಆರ್‌.ಮಿಲ್‌ ಜಂಕ್ಷನ್‌ನಿಂದ ಜಿಂಕೆ ಪಾರ್ಕ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. 

ನ್ಯಾಷನಲ್‌ ಕಾಲೇಜು ಮೈದಾನ ಹಾಗೂ ಚಾಮರಾಜಪೇಟೆಯ ಹಿಂದೂರುದ್ರಭೂಮಿ ಸುತ್ತ-ಮುತ್ತ ಮೂವರು ಡಿಸಿಪಿಗಳ ನೇತೃತ್ವದಲ್ಲಿ ಸಂಚಾರಿ ವಿಭಾಗದ ಪೊಲೀಸರು, ಕೆಎಸ್‌ಆರ್‌ಪಿ ತುಕಡಿ, ಸ್ಥಳೀಯ ಪೊಲೀಸರು ಸೇರಿದಂತೆ 1,300 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಲ್ಲೇಶ್ವರ ಬಿಜೆಪಿ ಕಚೇರಿ ಎದುರು ಉತ್ತರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ನೇತೃತ್ವದಲ್ಲಿ ಮೂವರು ಎಸಿಪಿ, 10 ಮಂದಿ ಇನ್‌ಸ್ಪೆಕ್ಟರ್‌, 20 ಮಂದಿ ಪಿಎಸ್‌ಐ ಸೇರಿದಂತೆ 300ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಸಾಂತ್ವನ ಹೇಳಿ ಸಂತೈಸಿದ ಅಡ್ವಾಣಿ: ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿ ಹಾಗೂ ಅವರ ಪುತ್ರಿ ಪ್ರತಿಭಾ ಅಡ್ವಾಣಿಯವರು ಅನಂತಕುಮಾರ್‌ ಕುಟುಂಬದ ಸದಸ್ಯರನ್ನು ಆತ್ಮೀಯವಾಗಿ ಸಂತೈಸಿ, ಸಾಂತ್ವನ ಹೇಳಿದರು. ತೇಜಸ್ವಿನಿ ಅನಂತ ಕುಮಾರ್‌ ಅವರ ಕೈ ಹಿಡಿದು, ಸಾಂತ್ವಾನ ಹೇಳುವಾಗ ಅಡ್ವಾಣಿಯವರ ಕಣ್ಣಂಚು ತೇವವಾಗಿತ್ತು.

ಅಡ್ವಾಣಿಯವರ ಮಗಳು ಪ್ರತಿಭಾ, ಅಂತ್ಯ ಸಂಸ್ಕಾರದ ವಿಧಿ ವಿಧಾನ ಮುಗಿಯುವವರೆಗೂ ತೇಜಸ್ವಿನಿ ಅವರ ಜತೆಗೇ ಇದ್ದು ಸಂತೈಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಪಿಯುಷ್‌ ಗೋಯಲ್‌, ರಾಮದಾಸ್‌ ಅಠಾವಳೆ, ಧರ್ಮೇಂದ್ರ ಪ್ರಧಾನ್‌ ಮೊದಲಾದವರು ಅನಂತ ಕುಮಾರ್‌ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಾ.ರ.ಮಹೇಶ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಏರ್‌ ಮಾರ್ಷಲ್‌ ಆರ್‌.ಕೆ.ಎಸ್‌.ಬಡೂರಿಯಾ, ಸೇನಾ ಸಿಬ್ಬಂದಿ ಮುಖ್ಯಸ್ಥ ಎಸ್‌.ಪಿ.ಯಾದವ್‌ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next