Advertisement

ನೃತ್ಯಾಂತರಂಗದಲ್ಲಿ ಭರವಸೆ ಮೂಡಿಸಿದ ಸೌಜನ್ಯಾ

09:30 PM May 09, 2019 | mahesh |

ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ(ರಿ.) ಪುತ್ತೂರಿನಲ್ಲಿ ಆಯೋಜಿಸುವ ನೃತ್ಯಾಂತರಂಗದ 63ನೇ ಸರಣಿಯು ಇತ್ತೀಚೆಗೆ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ವಿ| ಸೌಜನ್ಯಾ ವಿ. ಪಡ್ವಟ್ನಾಯರವರ ಏಕವ್ಯಕ್ತಿ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು.

Advertisement

ಮಧುರೈ ಮುರಳೀಧರನ್‌ ವಿರಚಿತ ಷಣ್ಮುಖಪ್ರಿಯರಾಗದ ಪುಷ್ಪಾಂಜಲಿಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ತಾಯಿ ಪಾರ್ವತಿ ಹಾಗೂ ಬಾಲಗಣಪನ ವಾತ್ಸಲ್ಯಪೂರಿತ ಶ್ಲೋಕ ಅಗಜಾನನ ಪದ್ಮಾರ್ಕಂ ಮನದಲ್ಲಿ ನೆಲೆಯೂರಿತು. ನಂತರ ನರ್ತಿಸಿದ ನರಸಿಂಹ ಕೌತುವ (ರಾಗಮಾಲಿಕೆ, ಖಂಡಛಾಪುತಾಳ) ನರ್ತಕಿಯ ನರ್ತನಾ-ಗಾಂಭೀರ್ಯವನ್ನು ಎತ್ತಿಹಿಡಿಯಿತು. ಕೌತುವದಲ್ಲಿ ಅಭಿನಯಕ್ಕೆ ವಿಶೇಷ ಪ್ರಾಧಾನ್ಯತೆ ಇಲ್ಲದಿದ್ದರೂ ಹಾಡು-ಶೊಲ್ಕಟ್ಟು-ಸಾಹಿತ್ಯ ಒಂದಕ್ಕೊಂದು ಉತ್ತಮವಾಗಿ ಬೆರೆತು ಕ್ಲಿಷ್ಟಕರವಾದ ಮುಕ್ತಾಯದೊಂದಿಗೆ ನರಸಿಂಹನನ್ನು ವರ್ಣಿಸುತ್ತಾ, ಹಿಮ್ಮೇಳ ಹಾಗೂ ಕಲಾವಿದೆಯ ಹೆಜ್ಜೆಗಳ ಸಮ್ಮೇಳ ಸೆಳೆಯಿತು.

ನಂತರದ ಪ್ರಧಾನ ಭಾಗ, ಕಲಾವಿದೆಯ ಕಲಾಸಾಮರ್ಥ್ಯವನ್ನು ಸೂಕ್ಷ್ಮವಾಗಿ ಎಳೆಎಳೆಯಾಗಿ ಪ್ರಸ್ತುತಪಡಿಸುವ ಪದವರ್ಣವು ಲಾಲಿತ್ಯಪೂರ್ಣ ರಾಗ ವಾಚಸ್ಪತಿಯಲ್ಲಿತ್ತು. ಇದರಲ್ಲಿ ನಾಯಕಿಯು ಸಖೀಗೆ ತನ್ನ ಸ್ವಾಮಿಯಾದ ವೇಲಾಯುಧಧಾರಿ ಸುಬ್ರಹ್ಮಣ್ಯನನ್ನು ಕರೆತರಲು ಹೇಳುವ ಸನ್ನಿವೇಶ, ಮಾವಿನ ಮರದ ನೆರಳಿನಲ್ಲಿ ಕಾಯುತ್ತಿರವ ವಿರಹಿಣಿ, ನಯನ ಮನೋಹರವಾದ ನವಿಲನ್ನೇರಿ ಬರುವ ಆರುಮುಖ, ಹನ್ನೆರಡು ಕಂಗಳು ಹಾಗೂ ಕರಗಳಿಂದ ಸುಶೋಭಿತ ಸುಬ್ರಹ್ಮಣ್ಯನಿಗಾಗಿ ಹಂಬಲಿಸುವ ವಿರಹೋತ್ಕಂಠಿತ ನಾಯಕಿ ಭಾವವನ್ನು ಸೊಗಸಾಗಿ ಅನಾವರಣಗೊಳಿಸಿದರು.

ನೈಜ ಅಭಿನಯಕ್ಕೆ ಪೂರಕವಾಗಿ ಕೊಳಲಿನಲ್ಲಿ ನಿಜವಾದ ಕೋಗಿಲೆಯ ಧ್ವನಿಯೇ ನುಡಿಸಿದ್ದು ಪ್ರಶಂಸನೀಯ. ನಾಯಕಿಯ ಪರಿತಪಿಸುವಿಕೆ, ಶೃಂಗಾರ, ವಿರಹವನ್ನು ಹಾಗೂ ಕ್ಲಿಷ್ಟಕರವಾದ ಜತಿಗಳನ್ನು ಸುಲಲಿತವಾಗಿ ಪ್ರಸ್ತುತಪಡಿಸಿದ ಸೌಜನ್ಯಾ ಮುಂದೆ ಸಾಕೋ ನಿನ್ನ ಸ್ನೇಹ ಜಾವಳಿಯಲ್ಲಿ ನಾಯಕಿಯಾಗಿ ತನ್ನ ಅಭಿನಯ ಸಾಮರ್ಥ್ಯವನ್ನು ಇನ್ನೂ ಉತ್ತಮವಾಗಿ ಉಣಬಡಿಸಿದರು. ಇದರಲ್ಲಿ ಪ್ರಿಯಕರನನ್ನು ನೇರವಾಗಿ ಖಂಡಿಸದೆ, ವ್ಯಂಗ್ಯದ ಮಾತುಗಳಿಂದ ದೂರವಿಡುವುದೇ ವಿಶೇಷ. ಮುಂದೆ ಯಮನ್‌ಕಲ್ಯಾಣಿರಾಗ ಆದಿತಾಳದ ತಿಲ್ಲಾನದಲ್ಲಿ ಶ್ರೀಕೃಷ್ಣನ ಭಕ್ತಿಯು ರಾರಾಜಿಸಿತು. ತಿಲ್ಲಾನದಲ್ಲಿ ಸುಂದರವಾದ ಮೈಅಡವುಗಳು ಹಾಗೂ ಕ್ಲಿಷ್ಟಕರವಾದ ಭಂಗಿಗಳು, ತೀರ್ಮಾನಗಳು ಅದ್ಭುತವಾಗಿ ಮೂಡಿಬಂತು. ಹಿಮ್ಮೇಳದಲ್ಲಿ ಗುರು ವಿ|ದೀಪಕ್‌ ಕುಮಾರ್‌ ನಟುವಾಂಗದಲ್ಲಿ ಸೂತ್ರದಾರರಾಗಿದ್ದರೆ, ಹಾಡುಗಾರಿಕೆಯಲ್ಲಿ ವಿ| ಪ್ರೀತಿಕಲಾ, ವಿ| ರಾಜನ್‌ ಪಯ್ಯನ್ನೂರು ಮೃದಂಗವಾದನದಲ್ಲಿ, ವಿದ್ವಾನ್‌ ರಾಜಗೋಪಾಲ್‌ ಕಾಂಞಂಗಾಡ್‌ ಕೊಳಲುವಾದನದಲ್ಲಿ ಉತ್ತಮ ನಿರ್ವಹಣೆ ತೋರಿಸಿದರು.

ಸುಮಂಗಲಾ ಗಿರೀಶ್‌ ಸುಬ್ರಹ್ಮಣ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next