Advertisement

Soujanya Case ಮರು ತನಿಖೆಗೆ ಆಗ್ರಹ: ಬೆಳ್ತಂಗಡಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ

12:31 AM Aug 28, 2023 | Team Udayavani |

ಬೆಳ್ತಂಗಡಿ: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಸಂತೋಷ್‌ ರಾವ್‌ ನಿರಾಪರಾಧಿ ಎಂದು ಹೇಳಿದ್ದರಿಂದ ಈ ಪ್ರಕರಣದ ಮರುತನಿಖೆಗೆ ಅವಕಾಶ ಇದೆ. ನ್ಯಾಯಾಲಯದ ಮೂಲಕವೇ ಇದರ ಮರುತನಿಖೆಯಾಗಬೇಕು. ಪ್ರಕರಣದ ಹಿಂದೆ ಯಾರೇ ಪ್ರಭಾವಿಗಳಿದ್ದರೂ ಬಂಧನವಾಗಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಆಗ್ರಹಿಸಿದರು.

Advertisement

ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ನೇತೃತ್ವದಲ್ಲಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ರವಿವಾರ ಬೆಳ್ತಂಗಡಿ ಮಿನಿ ವಿಧಾನಸೌಧದ ಮುಂದೆ ನಡೆದ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸೌಜನ್ಯಾ ಹತ್ಯೆಯಾದಾಗ ಪ್ರಕರಣವನ್ನು ಸಿಐಡಿಗೆ ಕೊಡಬೇಕೆಂದು ಆಗ್ರಹ ಬಂದಾಗ ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಸಿಐಡಿಗೊಪ್ಪಿಸಿದ್ದರು. ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಿಬಿಐಗೆ ನೀಡಲಾಗಿತ್ತು. ಸಿಬಿಐ ನ್ಯಾಯಾಲಯ ಇದೀಗ ಸಂತೋಷ್‌ ರಾವ್‌ ನಿರ್ದೋಷಿ ಎಂದು ಘೋಷಿಸಿರುವುದರಿಂದ ಕೊಲೆಯನ್ನು ಮಾಡಿದವರು ಯಾರು ಎಂಬುದು ಗೊತ್ತಾಗಬೇಕಾಗಿದೆ. ಬೆಳ್ತಂಗಡಿಯ ಮಾಜಿ ಶಾಸಕರು ಸಾಕ್ಷಿ ಇದ್ದರೆ ತಿಳಿಸಲಿ, ಕೇಂದ್ರ ಸರಕಾರದಿಂದ ಭದ್ರತೆ ಒದಗಿಸಲು ಬದ್ಧ. ಅದೇ ರೀತಿ ಮರು ತನಿಖೆಗೆ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದರು.

ಪ್ರಧಾನಿ ಭೇಟಿಗೆ ವ್ಯವಸ್ಥೆ ಮಾಡಿ
ಸೌಜನ್ಯಾ ತಾಯಿ ಕುಸುಮಾವತಿ ಮಾತನಾಡಿ, 11 ವರ್ಷಗಳಿಂದ ನ್ಯಾಯ ಕೇಳುತ್ತಿದ್ದೇನೆ, ಅದರೆ ಸಿಗಲಿಲ್ಲ. ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮನವಿ ಮಾಡಬೇಕೆಂದಿದ್ದೇನೆ; ಅದಕ್ಕೆ ವ್ಯವಸ್ಥೆಯನ್ನು ನೀವು ಮಾಡಬೇಕು. ಪ್ರಕರಣದಲ್ಲಿ ಆರೋಪಿತ ನಾಲ್ವರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಹೇಳಿದರು.

ಬಂಗೇರರೇ ಆರೋಪಿಗಳು
ಯಾರೆಂದು ಹೇಳಿ
ಕಾರ್ಕಳದ ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ಸೌಜನ್ಯಾಗೆ ನ್ಯಾಯ ದೊರೆಯಲೇ ಬೇಕು. ಸೌಜನ್ಯಾಳ ತಾಯಿಯ ಬೇಡಿಕೆಯಂತೆ ಪ್ರಧಾನಿಯವರ ಭೇಟಿಗೆ ವ್ಯವಸ್ಥೆಯನ್ನು ಪಕ್ಷದದಿಂದ ಮಾಡುತ್ತೇವೆ ಎಂದರು.
ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಆರೋಪಿಗಳು ಯಾರು ಎಂದು ಹೇಳಿದರೆ ಜೀವ ಭಯ ಇದೆ ಎಂದಿದ್ದಾರೆ. ಬಂಗೇರರೇ ಇಡೀ ಜಿಲ್ಲೆಯ ಜನತೆ ನಿಮ್ಮ ಜತೆ ಇದೆ. ಆರೋಪಿಗಳು ಯಾರು ಎಂಬುದು ನಿಮಗೆ ಗೊತ್ತಿದ್ದರೆ ತನಿಖಾ ಸಂಸ್ಥೆಗೆ ಹೇಳಿ, ಗೊತ್ತಿದ್ದು ಅದನ್ನು ಮುಚ್ಚಿಡುವುದು ಕೂಡ ಅಪರಾಧವಾಗುತ್ತದೆ. ನೀವು ಮೊದಲೇ ಹೇಳಿದ್ದರೆ ಈ ಪ್ರತಿಭಟನೆಯ ಅಗತ್ಯವೇ ಇರಲಿಲ್ಲ ಎಂದರು.

Advertisement

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಕರಣದ ನೈಜ ಆರೋಪಿಗಳ ಶೀಘ್ರ ಬಂಧನವಾಗಬೇಕು, ರಾಜ್ಯ ಸರಕಾರ ಇದರ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, ನಾವು ಈಗಾಗಲೇ ಈ ಪ್ರಕರಣದ ಮರುತನಿಖೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಇಂದಿನಿಂದ ಮೂರು ದಿನಗಳ ಕಾಲ ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಯಲ್ಲಿ ದೇವರಿಗೆ ಪ್ರಾರ್ಥನೆ ಮಾಡುವಾಗ ಸೌಜನ್ಯಾ ಕೊಲೆ ಆರೋಪಿಗಳ ಶೀಘ್ರ ಪತ್ತೆಯಾಗಬೇಕು ಎಂದು ಪ್ರಾರ್ಥಿಸುವಂತೆ ಸಲಹೆ ನೀಡಿದರು.

ಶಾಸಕರಾದ ಭಾಗೀರಥಿ ಮುರುಳ್ಯ, ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌ ಮಾತನಾಡಿ, ನೈಜ ಆರೋಪಿಗಳ ಪತ್ತೆಗಾಗಿ ಪ್ರಕರಣವನ್ನು ಮರುತನಿಖೆ ನಡೆಸಬೇಕು ಎಂದರು.

ಸೌಜನ್ಯಾ ಅಜ್ಜ ಬಾಬು ಗೌಡ ಪಾಂಗಾಳ, ಶಾಸಕರಾದ ರಾಜೇಶ್‌ ನಾಯ್ಕ, ಡಾ| ಭರತ್‌ ಶೆಟ್ಟಿ, ಕಿರಣ್‌ ಕೊಡ್ಗಿ, ಗುರುರಾಜ ಗಂಟಿ ಹೊಳೆ, ಗುರ್ಮೆ ಸುರೇಶ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಸಹಪ್ರಭಾರಿ ಭರತೇಶ್‌ ಶೆಟ್ಟಿ ವೇದಿಕೆಯಲ್ಲಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಸ್ವಾಗತಿಸಿದರು. ಜಿಲ್ಲಾ ವಿಭಾಗ ಸಹ ಪ್ರಭಾರಿ ಉದಯ ಕುಮಾರ್‌ ಕಾರ್ಯಕ್ರಮ ನಿರೂಪಿಸಿ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next