Advertisement

ಕರಾವಳಿಯ ಮೊದಲ ‘ಸೌಹಾರ್ದ ವಿದ್ಯಾರ್ಥಿ ನಿಲಯ’

12:39 PM Nov 04, 2022 | Team Udayavani |

ಮಹಾನಗರ: ಎಲ್ಲ ಜಾತಿ-ಸಮುದಾಯದ ವಿದ್ಯಾರ್ಥಿಗಳು ಒಂದೇ ಹಾಸ್ಟೆಲ್‌ನಲ್ಲಿ ಇದ್ದು ವಿದ್ಯಾಭ್ಯಾಸ ನಡೆಸಲು ಅನುಕೂಲ ಕಲ್ಪಿಸುವ ಸಂಕಲ್ಪದೊಂದಿಗೆ “ದೀನದಯಾಳ್‌ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ’ವನ್ನು ಮಂಗಳೂರಿನಲ್ಲಿ ಆರಂಭಿಸಲು ಸಮಾಜ ಕಲ್ಯಾಣ ಇಲಾಖೆ ನಿರ್ಧರಿಸಿದೆ.

Advertisement

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ನೂತನ ಹಾಸ್ಟೆಲ್‌ ಮಂಗಳೂರಿನಲ್ಲಿ ಆರಂಭವಾಗಲಿದೆ.

ಇಲ್ಲಿಯವರೆಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾಕ ಇಲಾಖೆ ಸಹಿತ ಬೇರೆ ಬೇರೆ ಇಲಾಖೆಗಳ ಹಾಸ್ಟೆಲ್‌ ಗಳಲ್ಲಿ ನಿರ್ದಿಷ್ಟ ಜಾತಿ-ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತಿತ್ತು. ಇದರ ಬದಲು ಎಲ್ಲ ಜಾತಿ-ಸಮುದಾಯದ ವಿದ್ಯಾರ್ಥಿಗಳು ಒಂದೇ ಕಡೆ ಇರುವ ಹಾಸ್ಟೆಲ್‌ ವ್ಯವಸ್ಥೆ ಮಾಡಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ಸಹಬಾಳ್ವೆ ತತ್ತ್ವ ಪಾಲಿಸಲು ಸಾಧ್ಯ ಎಂಬ ಸದಾಶಯದೊಂದಿಗೆ ಹೊಸ ಹಾಸ್ಟೆಲ್‌ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ.

ರಾಜ್ಯದಲ್ಲಿ 5 ಹಾಸ್ಟೆಲ್‌

ಮಂಗಳೂರು ಸಹಿತ ಗುಲ್ಬರ್ಗ, ಬೆಳಗಾವಿ, ಮೈಸೂರು, ಬೆಂಗಳೂರಿನಲ್ಲಿ ಪದವಿ, ಪಿಜಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿದ್ಯಾರ್ಥಿ ನಿಲಯ ಮಾಡಲು ಸರಕಾರ ನಿರ್ಧರಿಸಿದೆ. ತಲಾ 1 ಸಾವಿರ ಸಾಮರ್ಥ್ಯದ ವಿದ್ಯಾರ್ಥಿನಿಲಯ ಇದಾಗಲಿದೆ. ಇದರಲ್ಲಿ 400 ವಿದ್ಯಾರ್ಥಿನಿಯರು, 600 ವಿದ್ಯಾರ್ಥಿಗಳು ಎಂದು ನಿರ್ಧರಿಸಲಾಗಿದೆ. ಎಸ್‌ಸಿ ಶೇ.35, ಒಬಿಸಿ ಶೇ.30, ಎಸ್‌ಟಿ ಶೇ.15, ಅಲ್ಪಸಂಖ್ಯಾಕ ಶೇ. 20 ಪ್ರಮಾಣದಲ್ಲಿ ಈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಇರಲಿದ್ದಾರೆ.

Advertisement

ಪ್ರಾರಂಭದಲ್ಲಿ 200 ವಿದ್ಯಾರ್ಥಿಗಳಿಗೆ ಸೀಮಿತ

ಸದ್ಯ ಪ್ರಾರಂಭಿಕವಾಗಿ 200 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿ ಮಂಗಳೂರು ಹಾಸ್ಟೆಲ್‌ ಆರಂಭಕ್ಕೆ ಅನುಮತಿ ದೊರೆತಿದೆ. ಇದರಂತೆ 100 ಬಾಲಕರು, 100 ಬಾಲಕಿಯರಿಗೆ ಅನುಮತಿ ನೀಡಲಾಗಿದೆ. ಬಿಜೈ ಹಾಗೂ ದೇರಳಕಟ್ಟೆಯಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾಗಿ ತಾತ್ಕಾಲಿಕ ಹಾಸ್ಟೆಲ್‌ ಆರಂಭವಾಗಲಿದೆ.

ಮಂಗಳೂರು ವಿ.ವಿ. ಕ್ಯಾಂಪಸ್‌ನಲ್ಲಿ ಹೊಸ ಕಟ್ಟಡ?

ಸದ್ಯ ಬಾಡಿಗೆ ಕಟ್ಟಡದಲ್ಲಿ ನಡೆಸುವ ದೀನದಯಾಳ್‌ ಉಪಾಧ್ಯಾಯ ಸೌಹಾರ್ದ ವಸತಿ ನಿಲಯವನ್ನು ಮುಂದೆ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ನಡೆಸಲು ಇಲಾಖೆ ನಿರ್ಧರಿಸಿದೆ. ಸುಮಾರು 8 ಎಕ್ರೆ ಭೂಮಿಯಲ್ಲಿ 5 ಕಟ್ಟಡಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ. ಪ್ರತೀ ಕಟ್ಟಡದಲ್ಲಿ 200 ವಿದ್ಯಾರ್ಥಿಗಳು ಇರಲಿದ್ದಾರೆ. ಪ್ರತೀ ಪಿಜಿ ವಿದ್ಯಾರ್ಥಿಗೆ ಕಲಿಕೆಗೆ ಸೂಕ್ತವಾಗುವ ಸ್ಥಳಾವಕಾಶ ಇಲ್ಲಿ ನೀಡಲಾಗುತ್ತದೆ. ಲೋಕೋಪಯೋಗಿ ಇಲಾಖೆ ಮೂಲಕ ಈ ಕಟ್ಟಡ ನಿರ್ಮಾಣ ಯೋಜನೆ ನಡೆಯಲಿದೆ. ಕಟ್ಟಡ ಪೂರ್ಣವಾದ ಬಳಿಕ ಬಾಡಿಗೆ ವ್ಯವಸ್ಥೆಯಲ್ಲಿರುವ ವಿದ್ಯಾರ್ಥಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ.

ಬಾಡಿಗೆ ಕಟ್ಟಡದಲ್ಲಿ ಆರಂಭ: ಬಿಜೈಯಲ್ಲಿ 100 ಬಾಲಕಿಯರಿಗೆ, ದೇರಳಕಟ್ಟೆಯಲ್ಲಿ 100 ಬಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೀನದಯಾಳ್‌ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಯೋಜನೆಯನ್ನು ಸದ್ಯ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. – ಸಿದ್ಧಲಿಂಗೇಶ್‌ ಬೇವಿನಮಟ್ಟಿ, ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ದ.ಕ.

ಸಹಬಾಳ್ವೆಯ ಹಾಸ್ಟೆಲ್‌: ಎಲ್ಲ ಜಾತಿ-ಸಮುದಾಯದ ವಿದ್ಯಾರ್ಥಿಗಳು ಒಂದೇ ಕಡೆ ಇದ್ದು ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ ಐದು ಕಡೆ ದೀನದಯಾಳ್‌ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಕರಾವಳಿ ಭಾಗದಲ್ಲಿಯೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಇದು ಕಾರ್ಯರೂಪಕ್ಕೆ ಬರುತ್ತಿದೆ. ಸದ್ಯ ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸಿ ಬಳಿಕ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. – ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಸಮಾಜ ಕಲ್ಯಾಣ ಇಲಾಖೆ

-ದಿನೇಶ್‌ ಇರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next