ನವದೆಹಲಿ : ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸಂಸತ್ತಿನಲ್ಲಿ ಮಹಿಳಾ ಸಂಸದೆಯರೊಂದಿಗೆ ಫೋಟೋವೊಂದನ್ನು ಕ್ಲಿಕ್ಕಿಸಿ ಮಾಡಿದ ಟ್ವೀಟ್ ವೈರಲ್ ಆಗಿ, ಆಕ್ರೋಶಕ್ಕೂ ಗುರಿಯಾಗಿ ಅವರನ್ನು ಕ್ಷಮೆ ಕೇಳುವಂತೆ ಮಾಡಿದ ಪ್ರಸಂಗ ಸೋಮವಾರ ಸಂಸತ್ ಅಧಿವೇಶನದ ಮೊದಲ ದಿನ ನಡೆದಿದೆ.
‘ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ? ಇಂದು ಬೆಳಿಗ್ಗೆ ನನ್ನ ಆರು ಸಹ ಸಂಸದರೊಂದಿಗೆ’ ಎಂದು ತರೂರ್ ಟ್ವೀಟ್ ಮಾಡಿದ್ದರು.
ತರೂರ್ ಅವರು ಬಳಸಿದ ‘ಆಕರ್ಷಕ ಸ್ಥಳ’ ಎಂಬ ಪದಕ್ಕೆ ಹಲವರು ವಿರೋಧ ವ್ಯಕ್ತ ಪಡಿಸಿ ಕಮೆಂಟ್ ಗಳನ್ನು ಮಾಡಿದ್ದರು. ಟ್ವೀಟ್ ವೈರಲ್ ಆಗಿ ಭಾರಿ ಚರ್ಚೆಗೆ ಗುರಿಯಾಗಿತ್ತು, ಕೆಲವರು ತರೂರ್ ‘ರಸಿಕ ಮಹಾಶಯ’ ಎಂದೂ ಬರೆದಿದ್ದರು.
ಇದನ್ನೂ ಓದಿ : ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೇಸ್: ವೈದ್ಯಾಧಿಕಾರಿಗೆ ಜಾಮೀನು, ಬಿಡುಗಡೆ
ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಮತ್ತು ಮಿಮಿ ಚಕ್ರವರ್ತಿ, ಅಮರಿಂದರ್ ಸಿಂಗ್ ಅವರ ಪತ್ನಿ ಪ್ರೀನೀತ್ ಕೌರ್, ಎನ್‌ಸಿಪಿಯ ಸುಪ್ರಿಯಾ ಸುಳೆ, ಕಾಂಗ್ರೆಸ್‌ನ ಜ್ಯೋತಿಮಣಿ ಮತ್ತು ತಮಿಳಚಿ ತಂಗಪಾಂಡಿಯಾ ಅವರು ತರೂರ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದ್ದರು.
ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತರೂರ್ ಕ್ಷಮೆ ಕೇಳಿದ್ದಾರೆ.
‘ಇಡೀ ಸೆಲ್ಫಿ ವಿಷಯವನ್ನು ಮಹಿಳಾ ಸಂಸದರ ಅನುಮತಿಯೊಂದಿಗೆ ಉತ್ತಮ ಹಾಸ್ಯಕ್ಕಾಗಿ ಮಾಡಲಾಗಿದೆ ಮತ್ತು ಅದೇ ಉತ್ಸಾಹದಲ್ಲಿ ಟ್ವೀಟ್ ಮಾಡಲು ಅವರೆಲ್ಲರೂ ನನ್ನನ್ನು ಕೇಳಿಕೊಂಡಿದ್ದರು. ಕೆಲವು ಜನರು ಮನನೊಂದಿದ್ದಕ್ಕಾಗಿ ನನ್ನನ್ನು ಕ್ಷಮಿಸಿ. ಆದರೆ ಈ ಕಾರ್ಯಸ್ಥಳದ ಸೌಹಾರ್ದತೆಯ ಪ್ರದರ್ಶನದಲ್ಲಿ ಭಾಗವಹಿಸಲು ನನಗೆ ಸಂತೋಷವಾಯಿತು ಅಷ್ಟೆ’ ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ.