Advertisement

ಕ್ಷಮಿಸಿ, ಊರಿಗೆ ಕರೆಸಿಕೊಳ್ಳಲು ಅಸಾಧ್ಯ!

09:35 AM Apr 17, 2020 | mahesh |

ಉಡುಪಿ: ಕೋವಿಡ್-19 ಸೋಂಕು ನಿವಾರಣೆಗೆ ಲಾಕ್‌ಡೌನ್‌ ಅವಧಿಯಲ್ಲಿ ಸರಕಾರದ ಆದೇಶಗಳನ್ನು ಪಾಲಿಸುವುದು ನನ್ನ ಕರ್ತವ್ಯ. ಲಾಕ್‌ಡೌನ್‌ಗೆ ಒಳಗಾಗಿ ಜಿಲ್ಲೆಯಿಂದ ಹೊರಗೆ ಬಾಕಿಯಾದ ಜಿಲ್ಲೆಯ ನಿವಾಸಿಗಳನ್ನು ಕರೆಸಿಕೊಳ್ಳಲು ಅಸಾಧ್ಯ ಎಂದು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಜಗದೀಶ್‌ ಮನವಿ ಮಾಡಿಕೊಂಡಿದ್ದಾರೆ.

Advertisement

ಕೋವಿಡ್‌-19 ಸೋಂಕು ತಡೆಗಾಗಿ ವಿಧಿಸಲಾಗಿರುವ ಲಾಕ್‌ ಡೌನ್‌ ಆದೇಶವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಹಲವರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಬಾಕಿಯಾಗಿದ್ದಾರೆ. ಅವರನ್ನು ಕರೆಸಿಕೊಳ್ಳುವಂತೆ ಸಮಸ್ಯೆಗೆ ಒಳಗಾದವರು ಹಾಗೂ ಸಂಬಂಧಿಕರು ಒತ್ತಾಯ ಮಾಡುತ್ತಿದ್ದಾರೆ. ಫೇಸ್‌ಬುಕ್‌, ಟ್ವೀಟರ್‌ ಖಾತೆಗಳ ಮೂಲಕವೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇಂತಹ ಮನವಿಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಇದ್ದಲ್ಲಿಯೇ ಉಳಿದುಕೊಳ್ಳಿ
ಕೋವಿಡ್‌-19 ವೈರಸ್‌ ಹರಡದಂತೆ ಲಾಕ್‌ಡೌನ್‌ ವಿಧಿಸಿ ಸರಕಾರ ನಿರ್ಬಂಧ ಹೇರಿರುವುದರಿಂದ ಜಿಲ್ಲೆಯಿಂದ ಹೊರಗೆ ಕಳುಹಿಸುವುದಾಗಲೀ, ಹೊರಗುಳಿದವರನ್ನು ಜಿಲ್ಲೆಗೆ ಕರೆಸಿಕೊಳ್ಳುವುದಾಗಲಿ ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಮೂರು ಸೋಂಕು ಪ್ರಕರಣಗಳು ಕಂಡುಬಂದಿದ್ದು, ಒಬ್ಬರು ಗುಣಮುಖವಾಗಲು ಬಾಕಿ ಇದ್ದಾರೆ. ಕಟ್ಟುನಿಟ್ಟಿನ ಕ್ರಮಗಳಿಂದ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಗಡಿ ಸೀಲ್‌ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಎಲ್ಲರೂ ಇದನ್ನು ಅರ್ಥ ಮಾಡಿಕೊಂಡು ಲಾಕ್‌ಡೌನ್‌ ಮುಗಿಯುವವರೇ ಈಗ ಇರುವ ಸ್ಥಳದಲ್ಲೆ ಉಳಿದುಕೊಂಡು ಸಹಕರಿಸಬೇಕು ಎಂದು ವೀಡಿಯೋ ಸಂದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಲಾಕ್‌ಡೌನ್‌ ಮುಗಿದ ಮೇಲೆ ಬನ್ನಿ
ಸಂಸದರು, ಶಾಸಕರು, ಬಹುತೇಕ ಜನ ಪ್ರತಿನಿಧಿಗಳು ಹೊರ ಜಿಲ್ಲೆಗಳಲ್ಲಿ ಬಾಕಿ ಆದವರನ್ನು ಕರೆಸಿ ಕೊಳ್ಳುವಂತೆ ದೂರವಾಣಿ ಕರೆ ಮಾಡಿ ನನ್ನಲ್ಲಿ ಕೋರಿಕೆ ಸಲ್ಲಿಸುತ್ತಿದ್ದಾರೆ. ಅವರ ಮೇಲೂ ಬಹಳಷ್ಟು ಒತ್ತಡಗಳಿವೆ. ಈ ಪರಿಸ್ಥಿತಿಯಲ್ಲಿ ನಾನು ಸರಕಾರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಯಾರನ್ನೂ ಇಲ್ಲಿಗೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದಯವಿಟ್ಟು ಕ್ಷಮಿಸಬೇಕು. ನೀವು ಎಲ್ಲಿದ್ದೀರೋ ಅಲ್ಲೇ ಸುರಕ್ಷಿತವಾಗಿರಿ. ಸರಕಾರದ ಆದೇಶ ಪಾಲಿಸುವುದು ಕರ್ತವ್ಯ. ಇದಕ್ಕೆ ಎಲ್ಲರೂ ಸಹಕರಿಸಿ ಎಂದು ಮನವಿ ಜಿಲ್ಲಾಧಿಕಾರಿ ಜಗದೀಶ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next