ಸೊರಬ: ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಅನಧಿಕೃತ ಮಳಿಗೆ ಹಾಗೂ ಗೂಡಂಗಡಿಗಳ ತೆರವು ಕಾರ್ಯಾಚರಣೆ ತಹಶೀಲ್ದಾರ್ ಪಟ್ಟರಾಜ ಗೌಡ ನೇತೃತ್ವದಲ್ಲಿ ಭಾನುವಾರ ನಡೆಯಿತು.
ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಸಮೀಪವಿದ್ದ ತಾಲೂಕು ಕಚೇರಿಯನ್ನು ಸ್ಥಳಾಂತರಗೊಳಿಸಿದ ನಂತರ 2001ರಲ್ಲಿ ನೌಕರರಿಗೆ ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ತಾತ್ಕಾಲಿಕ ಮಳಿಗೆ ನಿರ್ಮಿಸಿಕೊಂಡು ಲಘು ಉಪಾಹಾರ ಕೇಂದ್ರ ನಡೆಸಲು ಅಂದಿನ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ್ದರು.
ಆದರೆ, ರಾಜ್ಯ ಹೆದ್ದಾರಿ ಹಾದು ಹೋಗಿರುವ ಪ್ರದೇಶಕ್ಕೆ ಹೊಂದಿಕೊಂಡಂತೆ ಲಘು ಉಪಾಹಾರ ಕೇಂದ್ರ ಹಾಗೂ ಗೂಡಂಗಡಿಗಳು ಇರುವುದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕು ಕಚೇರಿ ಮುಂಭಾಗದ ಪಿಡಬ್ಲ್ಯುಡಿ ಜಾಗದಲ್ಲಿರುವ ಮಳಿಗೆ ಮತ್ತು ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಆದೇಶ ನೀಡಿದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿನ ಪಿ.ಡಬ್ಲ್ಯೂ.ಡಿ. ಜಾಗದಲ್ಲಿನ ಅತಿಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಎಇಇ ಜಂಗಮ ಶೆಟ್ಟಿ ಪತ್ರಿಕೆಗೆ ತಿಳಿಸಿದರು.
ಬೀದಿಗೆ ಬಂದ ಅಂಗವಿಕಲರು: ಸುಮಾರು 16 ವರ್ಷಗಳಿಂದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಗೂಡಂಗಡಿಗಳಿಂದ ಬದುಕು ಕಟ್ಟಿಕೊಂಡಿದ್ದ ಇಬ್ಬರು ಅಂಗವಿಕಲರ ಬದುಕು ಅಕ್ಷರಶಃ ಬೀದಿಗೆ ಬಂದಂತಾಗಿದೆ. ತಾಲೂಕು ಕಚೇರಿಗೆ ಆಗಮಿಸುವ ಅನಕ್ಷರಸ್ಥರಿಗೆ ಅರ್ಜಿ ತುಂಬಿಕೊಡುವ ಸೇವೆಯನ್ನು ಮಾಡುತ್ತಾ, ಸಣ್ಣ-ಪುಟ್ಟ ವ್ಯಾಪಾರದಿಂದ ಅಣ್ಣಪ್ಪ ಹಾಗೂ ಪುಂಡಲೀಕ ಜೀವನ ಸಾಗಿಸುತ್ತಿದ್ದರು.
ಪಿಎಸ್‌ಐ ಶಂಕರಗೌಡ ಪಾಟೀಲ, ಶಿರಸ್ತೇದಾರ್ ಶಾಂತಕುಮಾರ್, ಸಿಬ್ಬಂದಿ ಬಿ.ಜೆ. ವಿನೋದ್, ಮತ್ತಿತರರು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.