Advertisement

ಜಿಲ್ಲಾ ಕೇಂದ್ರವಾಗುತ್ತಾ ಶಿಕಾರಿಪುರ?

12:11 PM Aug 22, 2019 | Naveen |

ಎಚ್.ಕೆ.ಬಿ. ಸ್ವಾಮಿ
ಸೊರಬ:
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಅವರ ಸ್ವಕ್ಷೇತ್ರ ಶಿಕಾರಿಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.

Advertisement

ಭರಪೂರ ಕೊಡುಗೆಗಳು: ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಲವು ಯೋಜನೆಗಳಿಗೆ ಒಪ್ಪಿಗೆ ನೀಡಿದ್ದಾರೆ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ಘೋಷಿಸಿ ಶಿಕಾರಿಪುರ ಹಾಗೂ ಸೊರಬ ತಾಲೂಕಿನ ನೀರಾವರಿ ಯೋಜನೆಗೆ 1300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಸೇರಿ ವಿವಿಧ ಪ್ರಮುಖ ವಿಭಾಗೀಯ ಕಚೇರಿಗಳನ್ನು ಶಿಕಾರಿಪುರಕ್ಕೆ ಸ್ಥಳಾಂತರಿಸಿದ್ದರು. ಈ ವೇಳೆ ಹಲವು ಪ್ರತಿಭಟನೆಗಳು ನಡೆದು ಜಿಲ್ಲಾಸ್ಪತ್ರೆ ಮತ್ತೆ ಶಿವಮೊಗ್ಗಕ್ಕೆ ವಾಪಸ್‌ ಆಗಿದ್ದು ಗಮನಾರ್ಹ ಸಂಗತಿ.

ಅಗತ್ಯ ಕಟ್ಟಡಗಳು: ಜಿಲ್ಲಾ ಕೇಂದ್ರಕ್ಕೆ ಅಗತ್ಯವಿರುವ ಬಹುತೇಕ ಕಚೇರಿ ಮತ್ತು ಕಟ್ಟಡಗಳು ಈಗಾಗಲೇ ಶಿಕಾರಿಪುರದಲ್ಲಿ ನಿರ್ಮಾಣವಾಗಿವೆ. ಇಲ್ಲಿನ ತಾಲೂಕು ಕಚೇರಿ ಹಿಂಭಾಗದಲ್ಲಿರುವ ಆಡಳಿತ ಭವನ ಕಟ್ಟಡದ ವಿನ್ಯಾಸ ಬಹುತೇಕ ಜಿಲ್ಲಾಧಿಕಾರಿ ಕಚೇರಿಗೆ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಖಾಸಗಿ ಹಾಗೂ ವಿವಿಧಡೆ ಕಾರ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಕಚೇರಿಗಳು ಪ್ರಸ್ತುತ ಆಡಳಿತ ಭವನದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ಕೇಂದ್ರಕ್ಕೆ ಅಗತ್ಯವಿರುವ ಹಲವಾರು ಕಟ್ಟಡಗಳು, ರಸ್ತೆಗಳ ಅಭಿವೃದ್ಧಿ ಮತ್ತು ಸಂಡಕೈಗಾರಿಕ ಪ್ರದೇಶದಲ್ಲಿ ನಿರ್ಮಾಣವಾಗಿರುವ ಪಶು ಆಹಾರ ಉತ್ಪದನಾ ಘಟಕ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ.

ತಾಲೂಕುಗಳ ವಿಭಜನೆ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕನ್ನು ವಿಭಜಿಸಿ ಆನವಟ್ಟಿ ತಾಲೂಕು ರಚಿಸುವುದು. ಇದಕ್ಕೆ ಪೂರಕವಾಗಿ ಶಿರಸಿ ತಾಲೂಕಿನ ಬನವಾಸಿ ಒಳಗೊಂಡಂತೆ ತಿಳುವಳ್ಳಿ ಮತ್ತಿತರ ಪ್ರದೇಶಗಳನ್ನು ಸೇರಿಸುವುದಾಗಿದೆ. ಮತ್ತೂಂದಡೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವುದು. ಈಗಾಗಲೇ ಹೊನ್ನಾಳಿ ತಾಲೂಕಿನಿಂದ ಬೇರ್ಪಟ್ಟ ನ್ಯಾಮತಿ ತಾಲೂಕನ್ನು ಸೇರಿಸಿಕೊಂಡು ಹಾವೇರಿ ಜಿಲ್ಲೆಯ ಹಿರೇಕೆರೂರ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಒಳಗೊಂಡಂತೆ ಒಟ್ಟು ಎಂಟು ತಾಲೂಕುಗಳನ್ನು ಕ್ರೋಢೀಕರಿಸಿ ಶಿಕಾರಿಪುರ ಜಿಲ್ಲಾ ಕೇಂದ್ರವ ನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎನ್ನಲಾಗುತ್ತಿದೆ. ಹೊಸ ತಾಲೂಕುಗಳ ಘೋಷಣೆಗೆ ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ ಹಾಗೂ ಜನತೆಯ ಒತ್ತಾಯಗಳು ಪ್ರಮುಖವೆನಿಸುತ್ತವೆ. ಅಖಂಡ ಶಿವಮೊಗ್ಗ ಜಿಲ್ಲೆಯಲ್ಲಿ ಶಿರಾಳಕೊಪ್ಪ, ಆನವಟ್ಟಿ ತಾಲೂಕುಗಳ ಉದಯ ಜೊತೆಗೆ ಶಿಕಾರಿಪುರ ಜಿಲ್ಲೆಯಾಗಲಿದೆಯೇ ಎಂಬುದು ಬಹು ಚರ್ಚಿತ ವಿಷಯವಾಗಿದೆ.

ಶಿರಾಳಕೊಪ್ಪ ತಾಲೂಕಿಗಾಗಿ ಹೋರಾಟ
ಬಿಎಸ್‌ವೈ ಮುಖ್ಯಮಂತ್ರಿಯಾಗಿರುವುದು ಶಿರಾಳಕೊಪ್ಪ ತಾಲೂಕು ಕೇಂದ್ರವಾಗಲಿದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಮೂಡತೊಡಗಿದೆ. ಕಳೆದ ಎರಡು ದಶಕಗಳಿಂದ ಇಲ್ಲಿನ ಜನತೆ ತಾಲೂಕು ಕೇಂದ್ರಕ್ಕಾಗಿ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಹಿರೇಕೇರೂರಿನಿಂದ ಕೇವಲ 10 ಕೀಮೀ ದೂರದಲ್ಲಿರುವ ರಟ್ಟೆಹಳ್ಳಿ, ಹೊನ್ನಾಳಿಯಿಂದ ಕೇವಲ 13 ಕಿಮೀ ದೂರದಲ್ಲಿರುವ ನ್ಯಾಮತಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದೆ. ಆದರೆ, ಶಿಕಾರಿಪುರದಿಂದ 18 ಕಿಮೀ ದೂರದಲ್ಲಿರುವ ಶಿರಾಳಕೊಪ್ಪ ತಾಲೂಕು ಕೇಂದ್ರ ಘೋಷಣೆಗೆ ವಿಳಂಬ ಸಲ್ಲದು ಎಂಬುದು ಸಾರ್ವಜನಿಕರ ಆಗ್ರಹ. ಉಳಿದಂತೆ ಶಿರಾಳಕೊಪ್ಪದಿಂದ ಕೇವಲ 2 ಕಿಮೀ ದೂರದಲ್ಲಿರುವ ಛತ್ರದಹಳ್ಳಿ, ಹಿರೇಕಸವಿ ಮತ್ತಿತರ ಸೊರಬ ತಾಲೂಕಿನ ಗಡಿ ಗ್ರಾಮಗಳು ಈಗಾಗಲೇ ಶಿರಾಳಕೊಪ್ಪದೊಂದಿಗೆ ವ್ಯಾಪಾರ ಸಂಬಂಧ ಹೊಂದಿವೆ. ಸರ್ಕಾರಿ ಕಚೇರಿಗಳಿಗೆ ಸುಮಾರು 20 ಕಿಮೀ ದೂರದ ಸೊರಬಕ್ಕೆ ತೆರಳುವ ಸ್ಥಿತಿ ಇದೆ ಎನ್ನುತ್ತಾರೆ ಈ ಭಾಗದ ಜನತೆ.

Advertisement

ಆನವಟ್ಟಿ ತಾಲೂಕು ಕೇಂದ್ರವಾಗಿ ಘೋಷಣೆಯಾಗುವುದರಿಂದ ಜನತೆಗೆ ಅನುಕೂಲವಾಗಲಿದೆ. ಈ ಕುರಿತು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.
ಕಾರ್ತಿಕ್‌ ಸಾಹುಕಾರ್‌,
 ಆನವಟ್ಟಿ ತಾಲೂಕು ಹೋರಾಟ ಸಮಿತಿ ಮುಖಂಡ.

ಶಿರಾಳಕೊಪ್ಪ ತಾಲೂಕು ಕೇಂದ್ರವಾಗಿ ಘೋಷಿಸುವುದು ಈ ಭಾಗದ ಜನತೆಯ ಕಳೆದ 20 ವರ್ಷಗಳ ಕೂಗಾಗಿದೆ. ಸೊರಬ ತಾಲೂಕಿನ ಗಡಿಭಾಗದ ಹಾಗೂ ಶಿರಾಳಕೊಪ್ಪದ ಸುತ್ತಲಿನ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಿರಾಳಕೊಪ್ಪ ತಾಲೂಕು ಕೇಂದ್ರವಾಗುವುದು ವ್ಯಾಪಾರ-ವಹಿವಾಟು ಹಾಗೂ ಎಲ್ಲರ ಹಿತ ದೃಷ್ಟಿಯಿಂದ ಉತ್ತಮ.
ಮಂಜುನಾಥ, ಬಳ್ಳಿಗಾವಿ ನಿವಾಸಿ.

ಶಿಕಾರಿಪುರ ಜಿಲ್ಲೆಯನ್ನು ರಚಿಸುವುದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ. ಇದರಿಂದ ಯಾರಿಗೂ ಉಪಯೋಗವಿಲ್ಲ. ಭವಿಷ್ಯದ ದೃಷ್ಟಿಯಿಂದ ಪ್ರಮುಖ ರಾಜಕೀಯ ವ್ಯಕ್ತಿಯೊಬ್ಬರು ತಮ್ಮ ಕುಟುಂಬಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಖಂಡ ಶಿವಮೊಗ್ಗ ಜಿಲ್ಲೆಯನ್ನು ಒಡೆಯುವ ಸಂಚು ಹಾಕಿದ್ದಾರೆ. ಮಲೆನಾಡು ಜಿಲ್ಲೆಯನ್ನು ವಿಭಜಿಸುವುದು ಅಕ್ಷಮ್ಯ. ಒಂದು ವೇಳೆ ಜಿಲ್ಲೆ ವಿಭಜಿಸಲು ಮುಂದಾದರೆ ವಿವಿಧ ರೀತಿಯ ಪ್ರತಿಭಟನೆ ನಡೆಸಲಾಗುವುದು.
ಡಿ.ಕೆ. ವೀರಭದ್ರಪ್ಪ, ಸೊರಬ

Advertisement

Udayavani is now on Telegram. Click here to join our channel and stay updated with the latest news.

Next