ಸೊರಬ: ವಸತಿ ಯೋಜನೆಯಡಿ ಒಂದೇ ಸೂರಿನಲ್ಲಿ ಎಪಿಎಲ್ ಕುಟುಂಬ ಪಡಿತರ ಚೀಟಿ ಹೊಂದಿದ ಮೂರು ಮನೆಗಳಿಗೆ ಮಂಜೂರಾತಿ ನೀಡಿದ್ದು ಅದು ಅಕ್ರಮ ಎಂದು ಸಾಬೀತಾಗಿದ್ದರೂ ಇದುವರೆಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪಂಚಾಯತ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆಂದು ಆರೋಪಿಸಿ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಜಿ. ಪರಶುರಾಮಪ್ಪ ನೂರಾರು ಗ್ರಾಮಸ್ಥರೊಂದಿಗೆ ತಾಲೂಕಿನ ಹುರುಳಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಪರಶುರಾಮ ಎಚ್.ಜಿ. ಮಾತನಾಡಿ, ಹಾಲಿ ಅಧ್ಯಕ್ಷ ಮಂಜಪ್ಪ ಜಾಡರ್ ಅವರು ಈ ಹಿಂದೆ ಎರಡು ಅವಧಿಗೆ ಸದಸ್ಯರಾಗಿದ್ದು ತಮ್ಮ ಆಡಳಿತಾವಧಿಯಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ತಮ್ಮ ತಂದೆ, ತಾಯಿ ಹಾಗೂ ಹೆಂಡತಿಗೆ ಕ್ರಮವಾಗಿ ಮೂರು ಮನೆಗಳನ್ನು ಹಾಗೂ ಶೌಚಾಲಯಗಳ ಸಮೇತ ಅಕ್ರಮವಾಗಿ ಮಂಜೂರಾತಿ ಮಾಡಿಸಿಕೊಂಡಿದ್ದರು. ಈ ಮೂರೂ ಮನೆಗಳನ್ನು ಒಂದೇ ಸೂರಿನಡಿ ನಿರ್ಮಿಸಲಾಗಿದೆ. ಅವರ ತಾಯಿಯ ಹೆಸರಿಗೆ ಮನೆ ಮಂಜೂರಾಗಿದ್ದರೂ ಗ್ರಾಪಂ ವ್ಯಾಪ್ತಿಯ ಹುರುಳಿಕೊಪ್ಪ ಗ್ರಾಮದ ಶಾಂತಮ್ಮ ಮಾಲತೇಶ ಕುರುಬರ ಹೆಸರಿಗೆ ಮಂಜೂರಾಗಿದ್ದ ಮನೆಯ ಬಿಲ್ಲನ್ನು ಅಕ್ರಮವಾಗಿ ಪಡೆದು ತನ್ನ ತಾಯಿಯ ಹೆಸರಿನಲ್ಲೇ ಮನೆ ನಿರ್ಮಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದಲೂ ತಾವು ಹೋರಾಟ ನಡೆಸಿದ್ದು, ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸಲ್ಲಿಸಿದ್ದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಿದ್ದು, ಮನೆ ನಿರ್ಮಾಣ ಅಕ್ರಮ ಎಂದು ಸಾಬೀತಾಗಿದೆ. ಅದರ ಬಾಬ್ತು 74500/- ರೂ.ಗಳನ್ನು ಡಿಡಿ ಮೂಲಕ ಪಂಚಾಯತ್ ಅಧಿಕಾರಿಗಳು ಸರ್ಕಾರಕ್ಕೆ ಮರುಪಾವತಿ ಮಾಡಿಸಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ವಿಳಂಬ ಗತಿಯಲ್ಲಿ ಸಾಗುತ್ತಿದ್ದು ತಪ್ಪಿತಸ್ಥರ ಹಾಗೂ ಅಕ್ರಮ ಎಸಗಲು ಪ್ರೇರೇಪಿಸಿದ ಹಾಲಿ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಹಾಲಿ ಅಧ್ಯಕ್ಷ ಮಂಜಪ್ಪ ಜಾಡರ ಕೇವಲ ವಸತಿ ಯೋಜನೆಯಲ್ಲಿ ಮಾತ್ರ ಅಕ್ರಮ ಎಸಗಿಲ್ಲ, ಶೌಚಾಲಯ ನಿರ್ಮಾಣ ಹಾಗೂ ಇನ್ನೂ ಅನೇಕ ಯೋಜನೆಗಳಲ್ಲೂ ಭ್ರಷ್ಟಾಚಾರ ಎಸಗಿದ್ದರು. ರಾಜಕೀಯ ಪ್ರೇರಿತವಾಗಿ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಅಕ್ರಮ ಫಲಾನುಭವಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಲಿಖೀತವಾಗಿ ದೂರುಗಳನ್ನು ತಾವು ಹಾಗೂ ಗ್ರಾಮಸ್ಥರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಬೇಕಾದುದು ಅನಿವಾರ್ಯ ಎಂದು ತಿಳಿಸಿದರು.
ಪಿಡಿಒ ಸ್ಪಷ್ಟನೆ: ಈ ಘಟನೆ 10-11 ನೇ ಸಾಲಿನಲ್ಲಿ ನಡೆದಿದ್ದು ತಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಮೇಲಧಿಕಾರಿಗಳು ಕೇಳಿದ ಈ ಘಟನೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಅಧಿಕಾರಿಗಳ ಸ್ಪಷ್ಟನೆ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಂಚಾಯತ್‌ನ ಸಹಾಯಕ ನಿರ್ದೇಶಕ ಮನೋಹರ, ವ್ಯವಸ್ಥಾಪಕ ಸಂಜಯ್, ನೋಡೆಲ್ ಅಧಿಕಾರಿಗಳಾದ ಹರೀಶ, ಜಾನ್ ಹಾಗೂ ಚಂದ್ರೇಗೌಡರು ಗ್ರಾಮಸ್ಥರ ಮನವಿಯನ್ನು ಆಲಿಸಿ ಮೇಲಿಂ ಮೇಲೆ ಚುನಾವಣೆಗಳು ಎದುರಾಗಿದ್ದು ಆ ಚುನಾವಣಾ ನೀತಿ ಸಂಹಿತೆ ಸಂಧರ್ಭದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದರಿಂದ ವಿಳಂಬವಾಗಿದೆ. ಈಗಾಗಲೇ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ತಪ್ಪಿತಸ್ಥ ಫಲಾನುಭವಿ ವಿರುದ್ದ ಎಫ್‌ಐಆರ್ ದಾಖಲಿಸಲು ಮನವಿ ಕೋರಲಾಗಿದೆ. ಇನ್ನು 10 ದಿನಗಳ ಒಳಗಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ವಿನಂತಿಸಲಾಗುವುದು ಎಂಬ ಭರವಸೆ ಮೇರೆಗೆ ಪ್ರತಿಭಟನೆಯನ್ನು ಮುಂದೂಡಲಾಯಿತು. ಹುಚ್ಚರಾಯಪ್ಪ, ಮಲ್ಲಿಕಾರ್ಜುನ, ಶಿವಾನಂದಪ್ಪ ಮತ್ತಿತರರು ಇದ್ದರು.