ಸೊರಬ: ತಾಲೂಕಿನ ನೆಗವಾಡಿ ಗ್ರಾಮದಲ್ಲಿ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ನೋಡುಗರನ್ನು ರೋಮಾಂಚನಗೊಳಿಸಿತು. ಸಾವಿರಾರು ರೈತರು, ಸಾಹಸ ಪ್ರಿಯರು ಹಬ್ಬವನ್ನು ಕಂಡು ಸಂಭ್ರಮಿಸಿದರು.
ಗ್ರಾಮದಲ್ಲಿ ಬೆಳಗ್ಗೆ 11 ರಿಂದ ಸಂಜೆ 4.30ರ ವರೆಗೆ ಹೋರಿ ಬೆದರಿಸುವ ಹಬ್ಬ ನಡೆಯಿತು. ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ವಿವಿಧ ಗ್ರಾಮಗಳಿಂದ ಭಾರೀ ಜನಸ್ತೋಮ ಆಗಮಿಸಿತ್ತು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಅತ್ತ ಓಡಿ ಹೋಗುತ್ತಿದ್ದಂತೆಯೆ ಇತ್ತ ನೆರೆದ ಪ್ರೇಕ್ಷಕರಿಂದ ಭಾರಿ ಕೇಕೆ, ಶಿಳ್ಳೆ ಜೋರಾಗಿ ಕೇಳಿ ಬರುತ್ತಿದ್ದವು.
ಹೋರಿಗಳ ಮಾಲೀಕರು ಹೋರಿಗಳಿಗೆ ಬಗೆ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ನೆಗವಾಡಿ ಡಾನ್, ಹುಬ್ಬಳ್ಳಿ ಹುಲಿ, ಮಲೆನಾಡು ಮಾಣಿಕ್ಯ, ಬೆಟ್ಟದ ಹುಲಿ, ಕರಾಬ್ ಕಿಂಗ್, ಗೌಡ್ರ ಗೂಳಿ, ಕಸವಾಡಿಕೊಪ್ಪದ ಗೂಳಿ, ವಜ್ರಮುನಿ, ಬಳ್ಳಿಗಾವಿಯ ಗುಜ್ಜರ್ ಸೆರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು.
ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೋರಿ ಹಬ್ಬವನ್ನು ಆಯೋಜಿಸಿದ್ದು, ಶ್ರೀ ಮಾರಿಕಾಂಬಾ ಹೋರಿಹಬ್ಬ ಸಮಿತಿಯವರು ಅಖಾಡದಲ್ಲಿ ಎರಡೂ ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು.
ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಸಮಿತಿಯವರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತನ್ನು ನೀಡಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.