ಸೊರಬ: ತಾಲೂಕಿನಲ್ಲಿ ಈ ಬಾರಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಸಂತ್ರಸ್ತರು ಹಾಗೂ ನಿರಾಶ್ರಿತರಿಗೆ ಅಗತ್ಯ ನೆರವು ನೀಡಲು ಮುಂದಾಗಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಒತ್ತಾಯಿಸಿದರು.
ತಾಲೂಕಿನ ಆನವಟ್ಟಿ ಹಾಗೂ ಜಡೆ ಹೋಬಳಿ ವ್ಯಾಪ್ತಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆಂದೂ ಕಾಣದಂತಹ ಭೀಕರ ನೆರೆ ಹಾವಳಿಗೆ ತಾಲೂಕು ತುತ್ತಾಗಿದೆ. ತಾಲೂಕು ಆಡಳಿತದ ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು ಒಂದು ಸಾವಿರ ಕೋಟಿ ರೂ., ಹಾನಿಯಾಗಿರುವುದು ತಿಳಿದು ಬಂದಿದೆ. ವರದಾ- ದಂಡಾವತಿ ನದಿ ಪಾತ್ರದ ಗ್ರಾಮಗಳಲ್ಲಿನ ಜನತೆಗೆ ಹೊಸ ಜೀವನ ಕಟ್ಟಿಕೊಳ್ಳಲು ಅಗತ್ಯ ನೆರವು ನೀಡುವ ಅಗತ್ಯವಿದೆ ಎಂದರು.
ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ, ತೋಟಗಾರಿಕೆ ಹಾಗೂ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಸರ್ಕಾರದ ಯೋಜನೆಗಳು ಕೇವಲ ಘೋಷಣೆಗೆ ಸೀಮಿತವಾಗದೆ ಅನುಷ್ಠಾನಕ್ಕೆ ಬರಬೇಕು. ರೈತರ ಹಾಗೂ ಸಾರ್ವಜನಿಕರ ಹಿತ ಕಾಯಲು ಸರ್ಕಾರ ಮುಂದಾಗಬೇಕು ಎಂದರು.
ನೀರಾವರಿ ಯೋಜನೆಗಳಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ತಾಲೂಕಿಗೆ ಸುಮಾರು 600 ಕೋಟಿ ಹಾಗೂ ಜಿಲ್ಲೆಗೆ 1800 ಕೋಟಿ ರೂ. ಮೀಸಲಿಟ್ಟಿದ್ದರು. ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿದೆ ಎಂದ ಅವರು, ಜಮೀನುಗಳನ್ನು ಗುತ್ತಿಗೆ ಪಡೆದು ಶುಂಠಿ ಬೆಳೆದಿರುವ ರೈತರಿಗೂ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಜಿಪಂ ಸದಸ್ಯರಾದ ವೀರೇಶ ಕೊಠಗಿ, ಶಿವಲಿಂಗೇಗೌಡ, ತಾರಾ ಶಿವಾನಂದಪ್ಪ, ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ, ಸದಸ್ಯ ನರೇಂದ್ರ ಒಡೆಯರ್, ಜೆಡಿಎಸ್ ಬ್ಲಾಕ್ ಅಧ್ಯಕ್ಷರಾದ ಎಚ್. ಗಣಪತಿ, ಕೆ.ಪಿ. ರುದ್ರಗೌಡ, ವಕ್ತಾರ ಎಂ.ಡಿ. ಶೇಖರ್, ಸೊರಬ ಪಪಂ ಸದಸ್ಯೆ ಪ್ರೇಮಾ ಟೋಕಪ್ಪ, ಪ್ರಮುಖರಾದ ಈರಪ್ಪ ಜಡೆ, ಬಸವಂತಪ್ಪ, ಸದಾಗೌಡ ಬೆಳಗಲಿ ಮತ್ತಿತರರಿದ್ದರು.