Advertisement

ಕಾಂಗ್ರೆಸ್‌ ಮುಕ್ತ ಭಾರತ ಸನ್ನಿಹಿತ

12:40 PM Jun 03, 2019 | Team Udayavani |

ಸೊರಬ: ಎಲ್ಲಾ ಸಮಾಜಗಳ ಮತಗಳನ್ನೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆಯುವ ಮೂಲಕ ಶೇ. 52 ಮತ ಗಳಿಸಿದೆ. ಕಾಂಗ್ರೆಸ್‌ ಶೇ. 30 ಮತ ಗಳಿಸುವ ಮೂಲಕ ದಯನೀಯ ಸ್ಥಿತಿ ತಲುಪಿದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಕಾಂಗ್ರೆಸ್‌ ಮುಕ್ತ ಭಾರತ ಕನಸು ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

Advertisement

ಹೊಸಪೇಟೆ ಬಡಾವಣೆಯ ದಿವಾಕರ ಭಾವೆ ತೋಟದ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರು ಬಿಜೆಪಿಗೆ ಮತ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ಮೂಲಕ ರಾಜ್ಯದ ವಿಧಾನ ಸಭೆಯ 171 ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ ಜಗತ್ತೇ ಅಚ್ಚರಿಪಡುವಂತೆ ಭಾರತ ಅಭಿವೃದ್ಧಿ ಹೊಂದಲಿದೆ. ದೇಶದ ಎಲ್ಲ ರೈತರಿಗೂ ವಾರ್ಷಿಕ ಮೂರು ಸಾವಿರ ರೂಪಾಯಿ ಹಾಗು 60 ವರ್ಷ ದಾಟಿದ ರೈತರಿಗೆ ನಿವೃತ್ತಿ ವೇತನ ಮತ್ತು ಬಡ ವಿದ್ಯಾರ್ಥಿಗಳಿಗೆ ಕೊಡುವ ಸ್ಕಾಲರ್‌ಶಿಪ್‌ ಅನ್ನು ಹೆಚ್ಚಿಸುವ ಮೂಲಕ ತನ್ನ ಮೊದಲನೆಯ ಮಂತ್ರಿ ಮಂಡಲದ ಸಭೆಯಲ್ಲಿಯೇ ಸರ್ಕಾರ ಬಡವರ, ರೈತರ ಪರವಾಗಿದೆ ಎಂದು ದೃಢಪಡಿಸಿದ್ದಾರೆ ಎಂದರು.

ರಾಜ್ಯದಲ್ಲಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಮತ್ತು ಕೋಲಾರದ ಮುನಿಯಪ್ಪ ಈ ಬಾರಿಯ ಚುನಾವಣೆಯಲ್ಲಿ ಸೊಲುತ್ತಾರೆಂದು ಖಚಿತವಾಗಿ ತಿಳಿಸಿದ್ದೆ. ಅದರಂತೆಯೇ ರಾಜ್ಯದ ಜನತೆ ಬಿಜೆಪಿಗೆ 25 ಸ್ಥಾನಗಳನ್ನು ನೀಡುವುದರೊಂದಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಜಯ ಗಳಿಸುವ ಮೂಲಕ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ರಾಜ್ಯದ ಎಲ್ಲ ಮೀಸಲು ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ ಎಂದರು.

Advertisement

ಈ ಬಾರಿಯ ಲೋಕಸಭಾ ಚುನಾವಣೆ ಕುಮಾರ್‌ಬಂಗಾರಪ್ಪ ಅವರಿಗೆ ಅಗ್ನಿಪರಿಕ್ಷೆಯಾಗಿದ್ದು, ತಾಲೂಕಿನಲ್ಲಿ ಬಿಜೆಪಿಗೆ ಹೆಚ್ಚು ಮತ ಗಳಿಸುವ ಮೂಲಕ ಅಭಿನಂದನೆಗೆ ಪಾತ್ರರಾಗಿದ್ದಾರೆ. ಜಿಲ್ಲೆಯಲ್ಲಿ ಏಳು ಜನ ಬಿಜೆಪಿ ಶಾಸಕರಿದ್ದು ರಾಜ್ಯದಲ್ಲಿಯೇ ಜಿಲ್ಲೆಯನ್ನು ಮಾದರಿಯಾಗಿಸುವುದು ನಮ್ಮ ಗುರಿಯಾಗಿದೆ ಎಂದರು. ನೂತನ ಸಂಸದ ರಾಘವೇಂದ್ರ ಮಾತನಾಡಿ, ಚುನಾವಣೆಯ ಫಲಿತಾಂಶದ ಹಿಂದೆ ಮಾತನಾಡುತ್ತಿದ್ದ ಎಲ್ಲ ಊಹಾಪೋಹಗಳನ್ನು ಜನತೆ ಸುಳ್ಳು ಮಾಡಿದ್ದು, ಭಾರೀ ಬಹುಮತದಿಂದ ಗೆಲ್ಲಿಸಿದ್ದಾರೆ. ದೇಶಭಕ್ತ ನಾಯಕನೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಲಭಿಸಿದೆ. ಲೋಕಸಭಾ ಉಪ ಚುನಾವಣೆಯ ಸಂದರ್ಭದಲ್ಲಿ ತಾಲೂಕಿನ ಜನತೆಗೆ ಬರಬೇಕಾಗಿದ್ದ ಬೆಳೆವಿಮೆ ಸರಿಯಾಗಿ ವಿತರಣೆಯಾಗಿರಲಿಲ್ಲ. ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿದ ಪರಿಣಾಮವಾಗಿ ಸೊರಬ ಮತ್ತು ಶಿಕಾರಿಪುರ ತಾಲೂಕಿಗೆ ಐದು ಕೋಟಿ ರೂ. ಬೆಳೆವಿಮೆ ಬಂದಿದೆ. ಸಂಬಂಧಿಸಿದ ಇಲಾಖೆಯವರು ರೈತರಿಗೆ ತಿಳಿಸುವ ಕೆಲಸ ಮಾಡುತ್ತಾರೆ. ಚಂದ್ರಗುತ್ತಿ ಸೇರಿದಂತೆ ಜಿಲ್ಲೆಯ ಎಲ್ಲ ಪುಣ್ಯ ಮತ್ತು ಐತಿಹಾಸ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು. ಶಾಸಕ ಕುಮಾರ್‌ಬಂಗಾರಪ್ಪ ಮಾತನಾಡಿ, ತಾಲೂಕಿನ ಶೇ. 80 ನೀರಾವರಿಯನ್ನು ವರದಾ ಮತ್ತು ದಂಡಾವತಿಯಿಂದ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ. ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ಬರಬೇಕಾಗಿದೆ. ಪಪಂ ಚುನಾವಣೆಯ ಫಲಿತಾಂಶದ ನಂತರ ಪಟ್ಟಣದಲ್ಲಿ ಅಧಿಕಾರ ಬಿಜೆಪಿಯದ್ದಾಗಲಿದೆ. ಮುಂಬರುವ ತಾಪಂ, ಜಿಪಂಗಳಲ್ಲಿಯೂ ಅಧಿಕಾರ ಹಿಡಿಯುವುದು ಖಂಡಿತ. ಹಿಂದೆ ಬಿಜೆಪಿಯನ್ನು ತಾಲೂಕಿನಲ್ಲಿ ಕಟ್ಟಿ ಬೆಳೆಸಲು ಶ್ರಮಿಸಿದ ಒಬ್ಬೊಬ್ಬ ವ್ಯಕ್ತಿಯೂ ಇಂದು ಸಾವಿರ ಸಾವಿರ ವ್ಯಕ್ತಿಗಳಿಗೆ ಸಮಾನರಾಗುತ್ತಾರೆ. ಅಂದು ಬಿಜೆಪಿ ಬಾವುಟ ಕಟ್ಟಿದ ವ್ಯಕ್ತಿಯ ಪರಿಶ್ರಮವೇ ಇಂದಿನ ಬಿಜೆಪಿ ತಾಲೂಕಿನಲ್ಲಿ ಗೆಲ್ಲುತಿರುವುದಕ್ಕೆ ಕಾರಣ ಎಂದರು. ತಾಲೂಕು ಅಧ್ಯಕ್ಷ ಎ.ಎಲ್. ಅರವಿಂದ, ಶಾಸಕರಾದ ಆಯನೂರು ಮಂಜುನಾಥ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಚ್. ಹಾಲಪ್ಪ, ಪ್ರಮುಖರಾದ ಭಾರತಿ ಶೆಟ್ಟಿ, ದತ್ತಾತ್ರಿ, ಗೀತಾ ಮಲ್ಲಿಕಾರ್ಜುನ್‌, ಈಶ್ವರ ಚನ್ನಪಟ್ಟಣ, ಗಜಾನನ ರಾವ್‌, ಶ್ರೀಪಾದ ರಾವ್‌ ನಿಸರಾಣಿ, ಎಂ.ಆರ್‌. ಪಟೀಲ್, ಚಿಕ್ಕಾವಲಿ ನಾಗರಾಜ್‌ ಗೌಡ, ಜಿಪಂ ಸದಸ್ಯರಾದ ಸತೀಶ್‌, ರಾಜಶೇಖರ ಗಾಳಿಪುರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next