ಸೊರಬ: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮ ದಿನ, ಏಕತಾ ದಿವಸ್ ಅಂಗವಾಗಿ ಪೊಲೀಸ್ ಇಲಾಖೆ ನೇತೃತ್ವದಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ ಗುರುವಾರ ಪಟ್ಟಣದಲ್ಲಿ ಏಕತಾ ನಡಿಗೆ ಹಾಗೂ ಓಟವನ್ನು ನಡೆಸಲಾಯಿತು.
ಇಲ್ಲಿನ ಪೊಲೀಸ್ ಠಾಣೆ ಮುಂಭಾಗ ಏಕತಾ ನಡಿಗೆ ಹಾಗೂ ಓಟಕ್ಕೆ ಚಾಲನೆ ನೀಡಿದ ವೃತ್ತ ನಿರೀಕ್ಷಕ ಉಮಾಪತಿ, ದೇಶದ ಏಕತೆಗಾಗಿ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರು ದುಡಿದಿದ್ದು, ಅವರ ಹೋರಾಟವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ರಾಜು ಹಿರಿಯಾವಲಿ ಮಾತನಾಡಿ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಪಟ್ಟಣದಲ್ಲಿ ಏರ್ಪಡಿಸುವುದರಿಂದ ಜನತೆಯಲ್ಲಿ ಜಾಗೃತಿ ಮತ್ತು ಇಲಾಖೆಯ ಮೇಲೆ ಮತ್ತಷ್ಟು ವಿಶ್ವಾಸ ಮೂಡುತ್ತದೆ ಎಂದ ಅವರು, ವಿವಿಧ ಭಾಷೆ, ಜಾತಿ, ಧರ್ಮೀಯರು ವಾಸಿಸುವ ಭಾರತದಲ್ಲಿ ಏಕತೆಯನ್ನು ಸಾರಿದ ಮಹಾನ್ ನಾಯಕ ಪಟೇಲರು ಎಂದರು.
ಪಟ್ಟಣದ ಪೊಲೀಸ್ ಠಾಣೆಯಿಂದ ಮುಖ್ಯರಸ್ತೆ ಮಾರ್ಗವಾಗಿ ಶ್ರೀ ರಂಗನಾಥ ದೇವಸ್ಥಾನದವವರೆಗೆ ಏಕತಾ ನಡಿಗೆ ಹಾಗೂ ಪುನಃ, ಪೊಲೀಸ್ ಠಾಣೆಯವರೆಗೆ ಏಕತಾ ಓಟ ನಡೆಸಲಾಯಿತು.
ಪಪಂ ಸದಸ್ಯ ವೀರೇಶ್ ಮೇಸ್ತ್ರಿ, ರೋಟರಿ ಕ್ಲಬ್‌ನ ನಾಗರಾಜ ಗುತ್ತಿ, ಪಿಎಸ್‌ಐ ತಿಮ್ಮಯ್ಯ, ಎಎಸ್‌ಐ ಚಿನ್ನಪ್ಪ ಮತ್ತಿತರರಿದ್ದರು.