Advertisement

ಸೊರಬ : ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

08:46 PM Jul 27, 2022 | Team Udayavani |

ಸೊರಬ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ಆನವಟ್ಟಿ ಪೊಲೀಸರು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಜಡೆ ಗ್ರಾಮದ ಸಮೀಪ ಕಾಲಿಗೇರಿ ಗ್ರಾಮದಲ್ಲಿ ನಡೆದಿದೆ.

Advertisement

ಸೊರಬ ಕಡೆಯಿಂದ ಹೊಸೂರು ಮಾರ್ಗವಾಗಿ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಕಸಾಯಿಖಾನೆಗೆ ಗೋವುಗಳನ್ನು ಅಮಾನವೀಯವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವಾಹನವನ್ನು ತಡೆಯಲು ಸಿದ್ಧತೆ ಕೈಗೊಂಡಿದ್ದರು. ಆದರೆ, ವಿಷಯ ತಿಳಿದ ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಿಗೆ ಇಲ್ಲದೇ, ಜಾನುವಾರುಗಳಿಗೆ ಹಿಂಸೆಯಾಗುವಂತೆ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಎರಡು ವಾಹನಗಳನ್ನು ವಶಕ್ಕೆ ಪಡೆದು 18 ಜಾನುವಾರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಅಂಕರವಳ್ಳಿ ಗ್ರಾಮದ ಮುಹಮ್ಮದ್ ಆರೀಫ್ ರೆಹಮಾನ್ ಸಾಬ್, ಯಾಸೀನ್ ಅನ್ಸರ್ ಸಾಬ್, ಮುಹಮ್ಮದ್ ಇಲಿಯಾಜ್ ರೆಹಮಾನ್ ಸಾಬ್ ಎಂಬುವವರ ವಿರುದ್ಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಪಿಐ ಎಲ್. ರಾಜಶೇಖರ್ ಮಾರ್ಗದರ್ಶನಲ್ಲಿ ಪಿಎಸ್‌ಐಗಳಾದ ರಾಜುರೆಡ್ಡಿ, ವಿ.ಎಂ. ಅಗಾಸಿ, ಹೆಡ್ ಕಾನ್ಸ್‌ಟೇಬಲ್‌ಗಳಾದ ಗಿರೀಶ್, ಜಿ. ಪ್ರಕಾಶ್, ಸಿದ್ದೇಶ್, ಖಲಂದರ್, ಕಾನ್ಸ್‌ಟೇಬಲ್‌ಗಳಾದ ಭರತ್, ಮಲ್ಲೇಶ್, ಮಂಜುನಾಥ ಜಾಡರ್, ನಿಂಗಪ್ಪ ಪಾಲ್ಗೊಂಡಿದ್ದರು.

ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಯತ್ನ:

ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಪ್ರಶ್ನಿಸಿದ ಬಜರಂಗದಳದ ಕಾರ್ಯಕರ್ತನೊಬ್ಬನ ಮೇಲೆ ದಂಧೆಕೋರರು ಆಯುಧದಿಂದ ಮೊಣಕಾಲಿನ ಭಾಗಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಪೊಲೀಸರು ವಶಕ್ಕೆ ಪಡೆದ ಜಾನುವಾರುಗಳಿಗೆ ಜಡೆ ಪೊಲೀಸ್ ಉಪ ಠಾಣೆಯಲ್ಲಿ ಉಪಚರಿಸಿ, ನೆರೆಯ ಸಿದ್ದಾಪುರ ತಾಲೂಕಿನ ಗೋಶಾಲೆಗೆ ಹಸ್ತಾಂತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next